ಸಂಪಾದಕೀಯ

ಅಲೀಫಿಯಾ ಮರ್ಚೆಂಟ್‌ಳ ಸೇವೆ

Published On :

ಅಲೀಫಿಯಾ ಮರ್ಚೆಂಟ್ ಒಬ್ಬ ಸಂಶೋಧಕಿಯಾಗಿ, ಸಹಸ್ರಾರು ಮಕ್ಕಳಿಗೆ ದೃಷ್ಟಿನೀಡುವ ಕೈಂಕರ್ಯದಲ್ಲಿ ತೊಡಗಿರುವ ತರುಣಿ. ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾ.ಅಶ್ವಿನ್ ಮಲ್ಲಿಪಟ್ನರ ಸಂಶೋಧಕ ವಿದ್ಯಾರ್ಥಿಯಾದ ಅಲೀಫಿಯಾ ಈ ಮೊದಲು ಕೆನಡಾದಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದರು. ಮಕ್ಕಳಲ್ಲಿ ಕಂಡುಬರುವ ಕಣ್ಣಿನ ತೊಂದರೆಯನ್ನು ಕಂಡುಹಿಡಿಯಲು ಸಾಧಾರಣ ಡಿಜಿಟಲ್ ಕ್ಯಾಮೆರಾವನ್ನು ಉಪಯೋಗಿಸಿ, ಅವರಲ್ಲಿ ಕಂಡುಬರುವ ರೆಟಿನಾ ತೊಂದರೆ, ಕಾರ್ನಿಯಾ ಸಮಸ್ಯೆ, ಕಣ್ಣಿನ ಪೊರೆ, ಕಣ್ಣಿನ ಕ್ಯಾನ್ಸರ್‌ಗಳನ್ನು ತುಂಬಾ ಸರಳ ರೀತಿಯಲ್ಲಿ ಕಂಡುಹಿಡಿಯುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. 2011 ರಲ್ಲಿ ತಾಂತ್ರಿಕ ಜ್ಞಾನಕ್ಕಾಗಿ ಪ್ರಶಸ್ತಿ ಪಡೆದಿರುವ ಅಲೀಫಿಯಾ "ಡಾ.ಮಲ್ಲೀಪಟ್ನ ಕನಸುಗಾರರಾದರೆ, ಅದನ್ನು ನೈಜರೂಪಕ್ಕೆ ತರುವ ಜವಾಬ್ದಾರಿ ನನ್ನ ಮೇಲಿದೆ, ಅದರಲ್ಲಿ ನಾನು ಸಾಕಷ್ಟು ಜಯ ಸಾಧಿಸಿದ್ದೇನೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ. ಡಾ.ಮಲ್ಲಿಪಟ್ನರವರು ಟೊರಾಂಟೋದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೆಲವು ಪೋಷಕರು ಕಣ್ಣಿನ ದೋಷವಿರುವ ಮಕ್ಕಳನ್ನು ಕರೆತರುತ್ತಿದ್ದರು. ಕೆಲವು ಮಕ್ಕಳ ರೆಟಿನಾ ತೊಂದರೆಯನ್ನು ಕಂಡು ಹಿಡಿಯಲು ಸಹಾಯ ಮಾಡಿದ್ದು ಮರ್ಚೆಂಟ್ ಅವರ ಸರಳ ಪದ್ಧತಿ. ಭಾರತದ ಲಕ್ಷಾಂತರ ಬಡ ಮಕ್ಕಳಿಗೆ ಅಲೀಫಿಯಾ ಕಂಡುಹಿಡಿದ ಕ್ರಮ ಅತ್ಯಂತ ಸರಳವೂ ಪ್ರಯೋಜನಕಾರಿಯೂ ಆಗಿದೆ.
ಕಣ್ಣಿನ ತೊಂದರೆಯಿಂದ ನರಳುವ ಐದು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳ ತೊಂದರೆಯನ್ನು ಈ ಡಿಜಿಟಲ್ ಕ್ಯಾಮೆರಾ ಕಂಡುಹಿಡಿಯುತ್ತದೆ. ಇದರಿಂದ ಪಾರ್ರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದರಿಂದ ಸುಲಭವಾಗಿ ಕಣ್ಣಿನ ತೊಂದರೆ ನಿವಾರಣೆಯಾಗುವುದಲ್ಲದೆ, ಭವಿಷ್ಯದಲ್ಲಿ ಆ ಮಗು ಕುರುಡಾಗುವುದನ್ನು ತಪ್ಪಿಸುತ್ತದೆ. ಅಲೀಫಿಯಾ ಕಂಡುಹಿಡಿದ ಈ ಪದ್ಧತಿಯಿಂದ ಸಾಧಾರಣ ಆರೋಗ್ಯ ಸಹಾಯಕರಿಗೂ ಕೂಡ ಕಣ್ಣಿನ ತೊಂದರೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿದೆ. ಇದಕ್ಕೆ ವಿಶೇಷ ತರಬೇತಿಯ ಅವಶ್ಯಕತೆಯಿಲ್ಲ. ಇದೊಂದು ಗ್ರಾಮೀಣ ಮಕ್ಕಳಿಗೆ ವರವಾಗಿ ಪರಿಣಮಿಸಿದೆ.
ಮೊದಮೊದಲು ಅಲೀಫಿಯಾ ಕನ್ನಡ ಭಾಷೆ ಬಾರದೆ ಒದ್ದಾಡುತ್ತಿದ್ದರು. ಈಗ  ಕನ್ನಡವನ್ನು ಕಲಿತು ಗ್ರಾಮಾಂತರ ಪ್ರದೇಶದ ಮಕ್ಕಳೊಡನೆ ಸಲೀಸಾಗಿ ಮಾತನಾಡುತ್ತಾರೆ. ಈ ರೀತಿ ಕಣ್ಣು ಪರೀಕ್ಷೆಯನ್ನು ಸರ್ಕಾರ ದೇಶಾದ್ಯಂತ ಜಾರಿಗೆ ತಂದರೆ, ಅದರಿಂದ ಎಷ್ಟೋ ಮಕ್ಕಳು ದೃಷ್ಟಿಭಾಗ್ಯ ಪಡೆಯಬಹುದು ಎಂಬುದು ಅಲೀಫಿಯಾರ ಅಭಿಪ್ರಾಯ. ವಿಜ್ಞಾನದ ವಿದ್ಯಾರ್ಥಿನಿಯಾದ ಈಕೆ, ಇಲ್ಲಿ ತಾನು ಕೈಗೊಂಡ ಯೋಜನೆ ಪೂರ್ತಿಯಾದ ಮೇಲೆ ಕೆನಡಾಕ್ಕೆ ವಾಪಸ್ಸು ಹೋಗುವ ನಿರ್ಧಾರ ಮಾಡಿದ್ದಾರೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.