ಮನಮೋಹನ ಸಿಂಗ್ ವಿದಾಯಕ್ಕೆ ಸಲ್ಲದ ವಾತಾವರಣ
ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಬಿಜೆಪಿ, ರಾಹುಲ ಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನೇ ಚುನಾವಣೆ ಪ್ರಚಾರ ಸಮರದಲ್ಲಿ ದಂಡನಾಯಕರನ್ನಾಗಿ ಆರಿಸಿಕೊಂಡಾಗಲೇ ಮುಂದಿನ ಪ್ರಧಾನಿ ಮನಮೋಹನ ಅವರಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಆದರೂ ಸಾಂಕೇತಿಕವಾಗಿ ಪ್ರಧಾನಿಯಾಗಿಯೇ ಉಳಿದಿದ್ದ ಸಿಂಗ್ ಅವರನ್ನು ಕಡೆಗಾಣಿಸುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿಲ್ಲ.
2004 ರಿಂದ 2014ರ ವರೆಗೂ, ಒಂದು ದಶಕದ ಕಾಲ, ಅವರ ನಾಯಕತ್ವದಲ್ಲೇ ಸರ್ಕಾರ ನಡೆದಿದೆ ಎನ್ನುವ ಘೋಷಣೆಯನ್ನು ಕೂಗಿದ್ದ ಪಕ್ಷ ಅದನ್ನು ದಿಢೀರನೆ ಬದಲಾಯಿಸುವುದು ಸಾಧ್ಯವೂ ಇರಲಿಲ್ಲ, ಅದರ ಅಗತ್ಯವೂ ಕಂಡುಬಂದಿರಲಿಲ್ಲ. ಈ ಅವಧಿಯಲ್ಲಿ ಪ್ರತಿಪಕ್ಷಗಳೂ ಮನಮೋಹನ ಸಿಂಗ್ ಅವರ "ನಾಯಕತ್ವವನ್ನು" (ಪ್ರಧಾನಿಯ ಸ್ಥಾನವನ್ನಲ್ಲ) ಗಂಭೀರವಾಗಿ ಪರಿಗಣಿಸಿರಲಿಲ್ಲ. ವಾಸ್ತವದಲ್ಲಿ ಅವರು ಸಂಯುಕ್ತ ಪ್ರಗತಿಪರ ಕೂಟ ಸರ್ಕಾರದ ಪ್ರಧಾನಿ.
ಪ್ರಧಾನಿ ಸಿಂಗ್ ಅವರನ್ನು ಸೈದ್ಧಾಂತಿಕ ಕಾರಣಗಳಿಂದ ಕಮ್ಯುನಿಸ್ಟರು ರಾಷ್ಟ್ರೀಯ ನಾಯಕ ಎಂದು ಒಪ್ಪಿರಲಿಲ್ಲ. ಕಾಂಗ್ರೆಸ್ಸಿಗರ ಪಾಲಿಗೆ ಸಿಂಗ್ "ವ್ಯಕ್ತಿತ್ವದ" ಅಗತ್ಯವಿತ್ತು. ಸಾಲದ್ದಕ್ಕೆ ಅವರು ಸೋನಿಯಾ ಗಾಂಧಿ ಅವರ ಆಯ್ಕೆ. ನಿಜ ಸಂಯುಕ್ತ ಪ್ರಗತಿಪರ ಕೂಟ ಹಾಗೂ ಅದರ ಹಿಂದಿನ ರಾಷ್ಟ್ರೀಯ ಜನತಾಂತ್ರಿಕ ಕೂಟದ ಸರ್ಕಾರಗಳ ಸಾಧನೆಗಳನ್ನು ಶಾಸ್ತ್ರೀಯ ಆರ್ಥಿಕ ಅಂಕಿ - ಅಂಶಗಳ ಆಧಾರದ ಮೇಲೆ ತುಲನಾತ್ಮಕವಾಗಿ ಅಧ್ಯಯನ ನಡೆಸಿದರೆ, ಕಾಂಗ್ರೆಸ್ ಕೂಟದ "ಸಾಧನೆ" ಹೆಚ್ಚು. ಆದರೆ ರಾಜಕೀಯವಾಗಿ ಒಂದು ಶಿಥಿಲವಾದ ಒಕ್ಕೂಟವನ್ನು ಕಟ್ಟಿಕೊಂಡು, ಅದರ ಪರಿಣಾಮವಾಗಿಯೇ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಹಗರಣಗಳಿಗೆ ಅವಕಾಶ ಮಾಡಿ ಕೊಟ್ಟ ಆಡಳಿತಕ್ಕೆ ಮಧ್ಯಮ ವರ್ಗದ ಬೆಂಬಲವನ್ನು ಪಡೆಯುವುದು ಸಾಧ್ಯವಾಗಲಿಲ್ಲ.
ಮಂತ್ರಿಗಳೇ ಜೈಲಿಗೆ ಹೋದರು. ಕಂಡು ಕೇಳರಿಯದ ರೀತಿಯಲ್ಲಿ ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ಭ್ರಷ್ಟಾಚಾರದ ಆರೋಪಗಳು ಬಂದವು. ಅದನ್ನು ಖಡಾಖಂಡಿತವಾಗಿ ನಿರಾಕರಿಸುವ ಸ್ಥಿತಿಯಲ್ಲಿ ಪ್ರಧಾನಿ ಇರಲಿಲ್ಲ. ಈ ಹಿನ್ನೆಲೆಯಲ್ಲೇ "ದುರ್ಬಲ ಪ್ರಧಾನಿ", "ನಾಮ್ಕೆ ವಾಸ್ತೆ ಪ್ರಧಾನಿ", "ಸೋನಿಯಾ ಗಾಂಧಿ ಮಾತಿನಂತೆ ನಡೆಯುವ ಪ್ರಧಾನಿ" ಎನ್ನುವ ಹೀಯಾಳಿಕೆಗೆ ಅವರು ಗುರಿಯಾಗಿದ್ದು.
ಚುನಾವಣೆಯ ಪ್ರಚಾರ ಸಮರ ಆರಂಭವಾಗುವ ವೇಳೆಗೆ ಮನಮೋಹನ ಸಿಂಗ್ ಮೌನವ್ರತಕ್ಕೆ ಶರಣಾಗಿದ್ದರು. ಆದರೂ ನಿರ್ದಿಷ್ಟವಾದ ನಿಷ್ಕ್ರಿಯತೆಯ ಸ್ವರೂಪದ ಆರೋಪಗಳು ಅವರ ವಿರುದ್ಧ ಪ್ರಕಟವಾಗಿದ್ದು ಕಳೆದ ವಾರದಲ್ಲೇ. ಅದರಲ್ಲೂ ಅವರ ಹಿತಚಿಂತಕರೆನಿಸಿಕೊಂಡ, ಮಾಜಿ ಸಲಹೆಗಾರ ಸಂಜಯ ಬಾರು ಅವರ "ಆಕಸ್ಮಿಕ ಪ್ರಧಾನಿ" ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರ ಯಜಮಾನಿಕೆಯಲ್ಲೇ ಸರ್ಕಾರ ನಡೆಯುತ್ತಿತ್ತೆನ್ನುವ ಆರೋಪ ಒಂದು ರೀತಿಯಲ್ಲಿ ಸಿಂಗ್ ಅವರ ಪ್ರತಿಷ್ಠೆಗೇ ಮರ್ಮಾಘಾತ. ಅದಕ್ಕಿಂತ ಹೆಚ್ಚು ಗಂಭೀರವಾದ, ಗುರುತರವಾದ ಆರೋಪ, ಈಗಷ್ಟೇ ಪ್ರಕಟವಾಗಿರುವ ಕೇಂದ್ರದ ಕಲ್ಲಿದ್ದಲು ಮಂತ್ರಾಲಯದ ನಿವೃತ್ತ ಕಾರ್ಯದರ್ಶಿ ಪಿ.ಸಿ. ಪಾರೇಖ್ ಅವರು ಬರೆದಿರುವ ಕಲ್ಲಿದ್ದಲ ಹಗರಣದ ವಿವರಗಳನ್ನು ಕುರಿತ ಪುಸ್ತಕ. ಇಲ್ಲಿ ನೆನಪಿನಲ್ಲಿಡಬೇಕಾದ ವಿಚಾರ ಎಂದರೆ ಆ ಹಗರಣದ ಸಿಬಿಐ ತನಿಖೆಯ ಸಮಯದಲ್ಲಿ ಪಾರೇಖ್ ಅವರನ್ನು ಆರೋಪಿ ಎಂದೇ ಗುರ್ತಿಸಿದ್ದು. ಆದ್ದರಿಂದ ಅವರ ಅಭಿಪ್ರಾಯವನ್ನು ಎಚ್ಚರಿಕೆಯಿಂದಲೇ ಪರಿಶೀಲಿಸಬೇಕು.
ಪಾರೇಖ್ ಅವರ ಪ್ರಕಾರ 2004 ರಲ್ಲೇ ತಾವು ಸಲಹೆ ಮಾಡಿದ್ದ ಕಲ್ಲಿದ್ದಲು ಗಣಿಗಳನ್ನು ಹರಾಜಿನ ಮೂಲಕವೇ ವಿಲೇವಾರಿ ಮಾಡುವ ಸಲಹೆಯನ್ನು ಪ್ರಧಾನಿ ಒಪ್ಪಿದ್ದು, ಆ ವಿಚಾರಕ್ಕೆ ಸಂಬಂಧಿಸಿದಂತೆ, ಸಚಿವ ಸಂಪುಟಕ್ಕೆ ಒಂದು ಟಿಪ್ಪಣಿ ತಯಾರಾಗಬೇಕಾಗಿತ್ತು. ಆಗ ಸಿಂಗ್ ಅವರೇ ಕಲ್ಲಿದ್ದಲು ಖಾತೆಯ ಮಂತ್ರಿ. ಆದರೆ ಆ ಸಲಹೆಯನ್ನು ಇನ್ನೊಬ್ಬ ಮಂತ್ರಿ ಶಿಬುಸೂರೇನ್ ಹಾಗೂ ಸಹಾಯಕ ಮಂತ್ರಿ ದಾಸರಿನಾರಾಯಣರಾವ್ "ಪಲ್ಟಿ" ಹೊಡೆಸಿದರು. ಹೀಗಾಗಿ ಗಣಿಗಳ ಹಂಚಿಕೆ ಮೊದಲು ಬಂದವರಿಗೆ ಆದ್ಯತೆ ಆಧಾರವನ್ನು ಅವಲಂಬಿಸಿದಾಗಲೇ ಎಲ್ಲ ಬಗೆಯ ರಂಪ - ರಾದ್ಧಾಂತ ನಡೆದಿದ್ದು. ಆ ಸಮಯದಲ್ಲಿ ರಾಜಕೀಯ ಕಾರಣಗಳಿಂದಾಗಿ ಮನಮೋಹನ ಸಿಂಗ್ ಅವರು ಮಾತಾಡುವಂತಿರಲಿಲ್ಲ. ಈಗಲೂ ಇಲ್ಲ.
ಈ ವಿಚಾರದಲ್ಲಿ ಆಡಿಟರ್ ಜನರಲ್ ವರದಿ ಇದೆ. 1993-2012ರ ಅವಧಿಯಲ್ಲಿ ನಡೆದ ಎಲ್ಲ ಕಲ್ಲಿದ್ದಲ ಗಣಿಗಳ ಹಂಚಿಕೆಯ ವ್ಯವಹಾರವನ್ನು ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಲೋಕಸಭೆಯ ಸದಸ್ಯ ನವೀನ ಜಿಂದಾಲ್, ಕುಮಾರ ಮಂಗಳಂ ಬಿರ್ಲಾ ಅವರ ವಿರುದ್ಧ ಪ್ರಥಮ ಮಾಹಿತಿಯ ವರದಿಯನ್ನು ಸಲ್ಲಿಸಿದ್ದಾಗಿದೆ.
ಇದೆಲ್ಲವನ್ನೂ ಗಮನಿಸಿದರೆ, ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚಿನ ಮೌಲ್ಯದ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಕಾಣದ ಕೈಗಳ ಕೈವಾಡವೂ ಇದ್ದೇ ಇದೆ ಎನ್ನುವುದನ್ನು ಅಲ್ಲಗಳೆಯಲಾಗದು. ಈಗಾಗಲೇ ಈ ವಿಚಾರದಲ್ಲಿ ವಿಫುಲವಾದ ಸಾಹಿತ್ಯ ಪ್ರಕಟವಾಗಿದೆ. ಈಗ ಒಂದು ಪುಸ್ತಕವೂ ಬಂದಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಇನ್ನು ಮೂವತ್ತು - ನಲವತ್ತು ದಿನಗಳಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ವಿದಾಯ ಹೇಳಬೇಕಾದ ದಿನ ಬಂದೇ ಬರತ್ತೆ. ದಶಕದ ಅವಧಿಯ ಪ್ರಧಾನಿಗೆ ಎಂತಹ ವಿದಾಯ ಇದು!
ಮುಂದೆ ಎಂದಾದರೊಂದು ದಿನ ಮನಮೋಹನ ಸಿಂಗ್ ತಾವು ಹೇಳದೇ ಇರುವ ಕಲ್ಲಿದ್ದಲ ಗಣಿಗಳ ಕತೆಯನ್ನು ಹೇಳಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

