ಸಂಪಾದಕೀಯ

ಲೈಂಗಿಕ ಅಲ್ಪ ಸಂಖ್ಯಾತರಿಗೆ ವಿಶೇಷ ಸ್ಥಾನಮಾನ

Published On :

ಮಂಗಳವಾರ ಪ್ರಕಟವಾದ ಸುಪ್ರೀಮ್ ಕೋರ್ಟಿನ ತೀರ್ಪಿನಂತೆ, ಲೈಂಗಿಕ ಅಲ್ಪ ಸಂಖ್ಯಾತರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಮತ್ತು ಇತರೆ ಹಿಂದುಳಿದ ಜಾತಿ - ಪಂಗಡಗಳಿಗೆ ಸಿಗುವ ಮೀಸಲು ಸ್ಥಾನಗಳು ಹಾಗೂ ಇತರ ಸೌಲಭ್ಯಗಳು ಕಡ್ಡಾಯವಾಗಿ ಸಿಗಬೇಕು.
ಇಂತಹ ಒಂದು ಕ್ರಾಂತಿಕಾರಿ ಬದಲಾವಣೆ ಸಮಾಜದಲ್ಲಿ ದಶಕಗಳ ಹಿಂದೆಯೇ ಬರಬೇಕಿತ್ತು. ಶೋಷಿತ ಜನವರ್ಗಗಳಲ್ಲಿ ತೀರ ಅಲ್ಪಸಂಖ್ಯಾತರಾದ ಈ ವರ್ಗದ ಜನರಿಗೆ ತಡವಾಗಿಯಾದರೂ ಈಗ ಸಾಮಾಜಿಕ ನ್ಯಾಯ ವಿತರಣೆಯ ನೀತಿ ಅನ್ವಯವಾಗುವ ಕಾಲ ಸನ್ನಿಹಿತವಾಗಿದೆ. ನಿಜಕ್ಕೂ ಸುಪ್ರೀಮ್ ಕೋರ್ಟಿನ ಈ ತೀರ್ಪು ಮಹತ್ವವಾದದ್ದೇ.
ಈಚೆಗೆ ಸಲಿಂಗ ಕಾಮಕ್ರೀಡೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಕಾಯಿದೆಯ ವಿಧಿಯನ್ನು ರದ್ದುಪಡಿಸಲು ಸುಪ್ರೀಮ್ ಕೋರ್ಟ್ ಒಪ್ಪದೇ ಹೋದಾಗ ಆ ತೀರ್ಪನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದ ಸಮಾಜ ಸುಪ್ರೀಮ್ ಕೋರ್ಟ್ ತೀರ್ಪನ್ನು ತುಂಬು ಹೃದಯದಿಂದಲೇ ಸ್ವಾಗತಿಸಿದೆ. ಕಾಲಕ್ರಮದಲ್ಲಿ ಸಂಸತ್ತೇ ಸಲಿಂಗಕಾಮ ಕ್ರೀಡೆಯನ್ನು ಅಪರಾಧಗಳ ಪಟ್ಟಿಯಿಂದ ಹೊರಗೆ ತರುವ ಕಾಯಿದೆಯನ್ನು ರೂಪಿಸಬಹುದೆನ್ನುವ ಆಸೆಯೂ ಮೂಡಿದೆ.
ಇದುವರೆಗೆ ಲೈಂಗಿಕ ಅಲ್ಪಸಂಖ್ಯಾತರು ಜೀವಾಧಾರಣೆ ಮಾಡಿಕೊಂಡಿದ್ದೇ ಒಂದು ಪವಾಡ. ಹೇಗೋ ಎಲ್ಲೋ ಬದುಕಿದ್ದ ಜನಾಂಗದವರು, ಈಗಲೂ ದೇಶದಲ್ಲಿ ಮೂರನೆಯ ಲಿಂಗದ ಜನಸಮುದಾಯಗಳ ಲೆಕ್ಕವೇ ಇಲ್ಲ. ಆ ವರ್ಗಕ್ಕೂ ಬಡವರು, ಕಡು ಬಡವರಿಗೆ ಸಿಗುವ ರೇಷನ್ ಕಾರ್ಡ್, ಉಚಿತ ವೈದ್ಯ ನೆರವು ಹಾಗೂ ಇತರ ಸೌಲಭ್ಯಗಳು ಸಿಗಲೇಬೇಕು.
ಸುಪ್ರೀಮ್ ಕೋರ್ಟ್ ಇಂತಹ ತೀರ್ಪನ್ನು ಪ್ರಕಟಿಸಿ ತನ್ನ ಕೆಲಸವನ್ನು ಮಾಡಿದೆ. ಇನ್ನು ಮುಂದೆ ಆಗಬೇಕಾದ್ದು ಸರ್ಕಾರದ ಕೆಲಸ. ಮೊದಲು ಆ ವರ್ಗದ ಜನರ ಸಂಖ್ಯೆಯನ್ನು ಗುರ್ತಿಸಬೇಕು. ಅದಕ್ಕೆ ಸಾಮಾಜಿಕ ಸಂಘಟನೆಗಳ ನೆರವು ಬೇಕು. ಸಮಾಜ ಅವರನ್ನು ಮನುಷ್ಯರೆಂದು ಒಪ್ಪಿಕೊಳ್ಳುವಂತೆ ಮಾಡುವುದು ಸಾಮಾಜಿಕ ಕಾರ್ಯಕರ್ತರ ಹೊಣೆಗಾರಿಕೆ. ಆದರೆ ಸರ್ಕಾರ ಈ ತೀರ್ಪಿನ ಆಧಾರದ ಮೇಲೆ ನಿಯಮಗಳನ್ನು ಪ್ರಕಟಿಸುವುದರಲ್ಲಿ ವಿಳಂಬ ಮಾಡಬಾರದು.
ಈಗ, ಇಡೀ ದೇಶದಲ್ಲಿ ಈ ವರ್ಗದ ನಾಗರಿಕರಿಗೆ ನೆರವು ನೀಡಲು ಒಂದು ಮಂಡಳಿಯನ್ನು ರಚಿಸಿರುವ ತಮಿಳುನಾಡಿನ ಸರ್ಕಾರದ ಕ್ರಮ ನಿಜಕ್ಕೂ ಆದರ್ಶವಾದದ್ದು. ಆ ರಾಜ್ಯದಲ್ಲಿ ಮಾತ್ರ ಇಂತಹ ಕ್ಷೇಮಾಭಿವೃದ್ಧಿ ಮಂಡಳಿ ಇರುವುದು.
ಸಮಾಜದಲ್ಲಿ ಈ ವರ್ಗದವರ ಮಿಲನ ಸುಸೂತ್ರವಾಗಿ ನಡೆಯುವ ಕೆಲಸವಲ್ಲ. ತಲೆತಲಾಂತರಗಳಿಂದ ಬಂದಿರುವ ಅಸಹನೆ, ಹೀನಾಯವಾಗಿ ಆ ಜನರನ್ನು ಕಾಣುವ ಮನೋಧರ್ಮ ಬದಲಾಗಬೇಕಾದರೆ ಸಮಯ ಬೇಕು. ಅದಕ್ಕಾಗಿ ಒಂದು ಆಂದೋಲನವೇ ನಡೆಯಬೇಕಾದೀತೇನೋ.
ಕೇಂದ್ರ ಹಾಗೂ ರಾಜ್ಯಗಳ ಈಗಿನ ಮೀಸಲು ನೀತಿಯಲ್ಲಿ ಸ್ಥಾನಗಳಿಗೆ ಮತ್ತೊಂದು ವರ್ಗ ಪಾಲು ಕೇಳಲು ಮುಂದಾಗುವುದನ್ನು ಇತರೆ ಹಿಂದುಳಿದ ಜಾತಿ - ಪಂಗಡಗಳ ಸಂಘಟನೆಗಳು ಸುಲಭವಾಗಿ ಒಪ್ಪಿಕೊಳ್ಳುವ ನಿರೀಕ್ಷೆ ಇಲ್ಲ.
ಲೈಂಗಿಕ ಅಲ್ಪಸಂಖ್ಯಾತರು ಅಥವಾ ಮೂರನೆಯ ಲಿಂಗದವರನ್ನು ವಿನಾಕಾರಣ ಅಸಹ್ಯ ರೀತಿಯಲ್ಲಿ ಚುಡಾಯಿಸುವುದು, ಅವರಿಗೆ ಲೈಂಗಿಕ ಕಿರುಕುಳ ಕೊಡುವುದು ಕಾಯಿದೆಯಂತೆ ಶಿಕ್ಷಾರ್ಹ ಅಪರಾಧವಾಗಬೇಕು. ಇದ್ದಕ್ಕಿದ್ದಂತೆ ಸಮಾಜ ಸಂಪೂರ್ಣವಾಗಿ, ಈ ಜನವರ್ಗದ ವಿಲೀನಕ್ಕೆ ಒಗ್ಗಿಕೊಳ್ಳುವುದೆಂದು ನಿರೀಕ್ಷಿಸಲಾಗದು. ಅದಕ್ಕಾಗಿ ಸರ್ಕಾರದ ನೆರವನ್ನು ಪಡೆಯುವ ಎಲ್ಲ ಸಾರ್ವಜನಿಕ ಸಂಸ್ಥೆಗಳೂ ಮನಃಪೂರ್ವಕವಾಗಿ ಪ್ರಯತ್ನಿಸಬೇಕು.
ಈಗಾಗಲೇ ಮುಂಬೈ, ಚೆನ್ನೈ ಹಾಗೂ ಇತರ ಕೆಲವು ನಗರಗಳಲ್ಲಿ ಅನೇಕ ಸಮಾಜ ಸೇವಾ ಸಂಘಗಳು ಈ ಜನಾಂಗದ ಜನರ ಕುಂದು ಕೊರತೆಯ ನಿವಾರಣೆಗೆ ಪ್ರಯತ್ನಿಸುತ್ತಿವೆ. ಆ ಸಂಘಟನೆಗಳ ಅಖಿಲ ಭಾರತ ಒಕ್ಕೂಟದ ಉದಯಕ್ಕೆ ಇದು ಸಕಾಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.