ವೋಟು
= ಅಧಿಕಾರದ ಸೀಟು ಹಿಡಿಯಲು ಹಾಕುವ ಕರ್ಚೀಫು
= ನೋಟು ಕೊಟ್ಟವನಿಗೆ ಜಾಸ್ತಿ
= ದೇಶದ ಜನರ ಕೈಗೆ ತಾಟು ಬರಬಾರದೆಂದರೆ ಮಾಡಲೇಬೇಕು ವೋಟು
= ಭಾರತ ಮಾತಾ ಖುಷಿಯಾಗಿರಲು ಹಾಕಲೇಬೇಕು ಈ ಮತ
= ಇದನ್ನು 'ದಾನ' ಎಂದು ಬಿಂಬಿಸಿರುವುದರಿಂದಲೇ ಹಲವರು ಜಿಪುಣತನ ತೋರುವುದು
= ನೋಟಾಕ್ಕೆ ಬೇಕಿದ್ದರೂ ಬಟನ್ ನೂಕಿ, ಆದರೆ ವೋಟು ಮಾತ್ರ ಮರೆಯದೇ ಹಾಕಿ
= ಕೋಟಿ ಕೋಟಿ ಲೂಟಿಕಾರ ಅಧಿಕಾರಸ್ಥರ ಪೇಟ ಉ(ರು)ಳಿಸುವ ಸುದರ್ಶನ ಚಕ್ರ
= ಕೆಲವರು ಇದಕ್ಕೂ ಪ್ರಾಯೋಜಕರನ್ನು ಹುಡುಕುತ್ತಾರೆ
= ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳಗುವ ಮತಾಪು
= ವೋಟು ಚಲಾಯಿಸದವ ಸೂಟು ಬೂಟು ಹಾಕಿದರೂ ಆಂತರ್ಯದಿಂದ ಆತ ದೇಶದ್ರೋಹಿಯೇ ಸರಿ
= ಮತ್ತೈದು ವರ್ಷ ರಾಜಕಾರಣಿಗಳನ್ನು ಹಿಗ್ಗಾ ಮುಗ್ಗಾ ಬೈಯ್ದುಕೊಳ್ಳಲು ಪ್ರಜೆಗಳಿಗೆ ಇರುವ ಲೈಸೆನ್ಸ್
= ವೋಟು ಹಾಕದೇ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳುವುದಕ್ಕಿಂತ ವೋಟು ಮಾಡಿ ಬೆರಳ ತುದಿ ಮಸಿಯಾಗಿಸಿಕೊಳ್ಳುವುದು ವಾಸಿ
= ನಿಮ್ಮ ಒಂದು ಮತದ ಬೆಲೆ ಎಷ್ಟೆಂಬುದು ಮತದಾನದ ಹಿಂದಿನ ರಾತ್ರಿ ತಿಳಿಯುತ್ತದೆ
= ಯಾರೂ ನಿಮಗೆ ದುಡ್ಡು ಕೊಡಲು ಬಂದೇ ಇಲ್ಲವೆಂದರೆ ನೀವು ಪ್ರಜ್ಞಾವಂತರು ಎಂದು ನಿಮಗೆ ನೀವೇ ಭಾವಿಸಿಕೊಳ್ಳಬಹುದು
ವಿಶ್ವನಾಥ ಸುಂಕಸಾಳ
vishwasunkasal@yahoo.com