ನಾಟಕವಲ್ಲ ಸಾಕ್ಷಾತ್ ವೈಕುಂಠ

Updated on: 

ಒಂದು ಕಾಲದಲ್ಲಿ ಕಂಪನಿ ನಾಟಕಗಳನ್ನು ನೋಡಲು ಜನ ಮುಗಿಬೀಳುತ್ತಿದ್ದರು. ಏಕೆಂದರೆ ಜನರಿಗಿದ್ದುದು ಅದೊಂದೇ ಮನರಂಜನೆ. ಹೀಗಾಗಿ ಅನೇಕ ಕಂಪನಿಗಳು ಪ್ರತಿಭಾವಂತ ನಟರಿಂದ ಕೂಡಿ ಉತ್ತಮ ಗುಣಮಟ್ಟದ ನಾಟಗಳನ್ನು ನೀಡಿ ರಂಜಿಸುತ್ತಿದ್ದವು. ಅಂತಹ ಒಂದು ಕಂಪನಿ, ನಾಟಕ ಶಿರೋಮಣಿ ಎ.ವಿ.ವರದಾಚಾರ್ಯರ "ರತ್ನಾವಳಿ ನಾಟಕ ಕಂಪನಿ". 1904 ರಿಂದ 1923 ರವರೆಗೆ ಅಸ್ತಿತ್ವದಲ್ಲಿದ್ದ ಈ ಕಂಪನಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅನೇಕ ಜನಪ್ರಿಯ ನಾಟಕಗನ್ನಾಡಿದ್ದುಂಟು. ಅಂತಹ ಒಂದು ನಾಟಕ ವಿಷ್ಣು ವಿಜಯ. ಒಮ್ಮೆ ಶಿವಮೊಗ್ಗದಲ್ಲಿ ವರದಾಚಾರ್ಯರ ನಾಟಕ ಕಂಪನಿ ಬೀಡುಬಿಟ್ಟಿತ್ತು. ವರದಾಚಾರ್ಯರ ಅಭಿನಯ ಚಾತುರ್ಯ, ಕಂಪನಿಯ ಸೀನರಿಗಳು ಆ ಹೊತ್ತಿಗಾಗಲೇ ಅತ್ಯಂತ ಪ್ರಸಿದ್ಧಿ ಪಡೆದಿದ್ದವು. ವಿಷ್ಣುವಿಜಯ ನಾಟಕದ ಮೊದಲ ದೃಶ್ಯವೇ ವೈಕುಂಠದ ದೃಶ್ಯ. ನಳನಳಿಸುವ ಅದ್ಭುತ ಕಲೆಯಿಂದ ನಿರ್ಮಿಸಿದ ಆ ದೃಶ್ಯ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿತ್ತು.
ಅವರ ನಾಟಕ ನೋಡಲು ಜನ ತುಂಬ ಮೊದಲೇ ಟಿಕೇಟುಗಳ ಖರೀದಿಸಲು ಕಂಪನಿಯ ಬಳಿ ಸೇರುತ್ತಿದ್ದರು. ಒಂದು ದಿನ ಒಬ್ಬ ಘನಪಾಠಿಗಳು ನಾಟಕ ನೋಡಲು ಬಂದಿದ್ದರು. ಅವರು ಸಂಸ್ಕೃತ ವಿದ್ವಾಂಸರೂ, ಧರ್ಮನಿಷ್ಠರೂ ಆಗಿದ್ದು ಸಮಾಜದಲ್ಲಿ ಒಳ್ಳೆಯ ಗೌರವ ಸಂಪಾದಿಸಿದ್ದರು. ಇಂತಹವರು ನಾಲ್ಕಾಣೆ ಟಿಕೇಟು ಪಡೆದು ನೆಲದ ಮೇಲೆ ಕುಳಿತಿದ್ದರು. ನಾಟಕ ಪ್ರಾರಂಭವಾಯಿತು. ಮೊದಲ ದೃಶ್ಯದಲ್ಲಿ... ವೈಕುಂಠದಲ್ಲಿ ಮಹಾವಿಷ್ಣು ಪವಡಿಸಿದ್ದಾನೆ. ಅಷ್ಟರಲ್ಲಿ ನಾರದರ ಪ್ರವೇಶವಾಗುತ್ತದೆ. ಆ ಅದ್ಭುತ ವೈಕುಂಠ, ಪವಡಿಸಿರುವ ವಿಷ್ಣು ಇವನ್ನೆಲ್ಲಾ ತದೇಕ ಚಿತ್ತದಿಂದ ನೋಡುತ್ತಿದ್ದ ಘನಪಾಠಿಗಳು ಒಂದು ಕ್ಷಣ ಮೈಮರೆತು ಧಿಡೀರನೆ ಎದ್ದು ನಿಂತು ಕೈಮುಗಿದುಕೊಂಡು ವಿಷ್ಣು ಸಹಸ್ರನಾಮವನ್ನು ಎತ್ತರಿಸಿದ ಧ್ವನಿಯಲ್ಲಿ ಹೇಳತೊಡಗಿದರು. ಅವರಿಗೆ ನಿಜವಾಗಿಯೂ ತಾವು ವೈಕುಂಠಕ್ಕೇ ಬಂದ ಅನುಭವವಾಗಿತ್ತು. ಎಲ್ಲರ ದೃಷ್ಟಿಯೂ ಘನಪಾಠಿಗಳ ಕಡೆ. ಆಗ ವರದಾಚಾರ್ಯರು ಘನಪಾಠಿಗಳನ್ನು ವೇದಿಕೆಗೆ ಕರೆಸಿ, ಮರ್ಯಾದೆ ಮಾಡಿದರು. ಆಗ ಎಚ್ಚರಗೊಂಡ ಘನಪಾಠಿಗಳಿಗೆ ತಾವು ವೈಕುಂಠದಲ್ಲಿಲ್ಲ, ನಾಟಕ ರಂಗದ ಮೇಲಿದ್ದೇನೆ ಎಂಬ ಅರಿವಾಗಿ ನಾಚಿಕೆಯಿಂದ ಕೆಂಪಾದರು. ವರದಾಚಾರ್ಯರ ಅಭಿನಯ ಚಾತುರ್ಯವನ್ನು ಮನಸಾರೆ ಹೊಗಳಿ ಆಶೀರ್ವದಿಸಿದರು. ಅಂದಿನಿಂದ ಪ್ರತಿನಿತ್ಯ ಕಂಪನಿಯ ನಾಟಕಗಳನ್ನು ನೋಡಲು ಕ್ಯಾಂಪ್ ಮುಗಿಯುವವರೆಗೆ ಘನಪಾಠಿಗಳಿಗೆ ಉಚಿತ ಪಾಸನ್ನು ನೀಡಿ ಗೌರವಿಸಲಾಯಿತು. ಇಂತಹ ನಾಟಕ ಕಂಪನಿ 1923ರಲ್ಲಿ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತು. ಇದೇ ಕೊರಗಿನಲ್ಲಿ ವರದಾಚಾರ್ಯರು 1926ರಲ್ಲಿ ಇಹಲೋಕ ತ್ಯಜಿಸಿದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com