ವಿವೇಕಾನಂದರನ್ನು ಚಿಕಾಗೋಗೆ ಕಳಿಸಿದ್ಯಾರು?

Updated on: 

ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಕಾರಣರಾದ ವ್ಯಕ್ತಿ ನಮ್ಮ ಕನ್ನಡನಾಡಿನವರು ಎಂದರೆ ಅಚ್ಚರಿಯಲ್ಲವೆ? ಹೌದು, ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಅವರೇ ಆ ವ್ಯಕ್ತಿ. ಚಿಕ್ಕಮಗಳೂರಿನಲ್ಲಿಯೇ ಓದಿ, ಮದ್ರಾಸಿನ ಪಚ್ಚಿಯಪ್ಪನ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಿನ್ನೂ ಪರಿವ್ರಾಜಕರಾಗಿ ತಿರುಗುತ್ತಿದ್ದ ವಿವೇಕಾನಂದರ ಪರಿಚಯ ಇವರಿಗಾಯಿತು. ಮೊದಲ ಭೇಟಿಯಲ್ಲಿಯೇ ವಿವೇಕಾನಂದರ ಅದ್ಭುತ ವ್ಯಕ್ತಿತ್ವಕ್ಕೆ ಮನಸೋತು ಅವರ ಶಿಷ್ಯರಾದರು. 1893ರಲ್ಲಿ ಅಮೆರಿಕೆಯ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಮೊದಲು ಒತ್ತಾಯಿಸಿದವರೇ ಈ ಪೆರುಮಾಳ್‌ರವರು. ನಂತರ ಅವರ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಹೊಂದಿಸಲು ತಮ್ಮ ಗೆಳೆಯರೊಂದಿಗೆ ವಿವೇಕಾನಂದರ ಅಭೀಷ್ಟದಂತೆ ಮಧ್ಯಮವರ್ಗದವರ ಮನೆಗಳಿಗೆ ಮಾತ್ರ ತೆರಳಿ ಹಣ ಸಂಗ್ರಹಿಸಿದರು. ಹೀಗೆ ಸಂಗ್ರಹವಾದ ನಾಲ್ಕು ಸಾವಿರ ರು.ಗಳನ್ನು ವಿವೇಕಾನಂದರಿಗೆ ಅರ್ಪಿಸಿದರು. ಅಳಸಿಂಗರವರು ಸ್ವಾಮೀಜಿಯವರನ್ನು ಬೀಳ್ಕೊಡಲು ಮದರಾಸಿನಿಂದ ಮುಂಬೈವರೆಗೂ ಹೋದರು. ಅಲ್ಲಿ ಸ್ವಾಮೀಜಿ ಹಡಗನ್ನು ಪ್ರವೇಶಿಸುವವರೆಗೂ ಅವರ ಜೊತೆಯಲ್ಲಿಯೇ ಇದ್ದರು. ಅವರ ಪ್ರೀತಿ-ವಿಶ್ವಾಸ ಕಂಡ ವಿವೇಕಾನಂದರ ಕಣ್ಣುಗಳು ತೇವವಾಗಿದ್ದವು. ವಿವೇಕಾನಂದರ ಸೂಚನೆಯಂತೆ 'ಬ್ರಹ್ಮವಾದಿನ್‌' ಎಂಬ ಧಾರ್ಮಿಕ ಪತ್ರಿಕೆಯನ್ನೂ ಪ್ರಾರಂಭಿಸಿದರು. ಅಮೆರಿಕೆಯಲ್ಲಿ ಸಮ್ಮೇಳನ ಮುಂದೂಡಿದುದ್ದರಿಂದ ಸ್ವಾಮೀಜಿಯವರು ಅನಿವಾರ್ಯವಾಗಿ ಅಲ್ಲಿಯೇ ಉಳಿಯಬೇಕಾಯಿತು. ಆಗ ಅವರಿಗೆ ಹಣಕಾಸಿನ ತೊಂದರೆಯಾಗಿ ಅಳಸಿಂಗರಿಗೆ ಪತ್ರ ಬರೆದರು. ಆಗ ತಮ್ಮ ಪತ್ನಿಯ ಒಡವೆಗಳನ್ನು ಮಾರಿ, ಸಾಲಮಾಡಿ ಒಂದು ಸಾವಿರ ರು.ಗಳನ್ನು ಸ್ವಾಮೀಜಿಯವರಿಗೆ ಕಳುಹಿಸಿ ಕೃತಾರ್ಥರಾದರು. ಸ್ವಾಮೀಜಿ ಅಮೆರಿಕದಲ್ಲಿ ಅದ್ಭುತ ವಿಜಯವನ್ನು ಸಾಧಿಸಿ, ಭಾರತಕ್ಕೆ ಮರಳಿದಾಗ ಮದ್ರಾಸಿನ ಪಚ್ಚಿಯಪ್ಪನ್ ಹಾಲ್‌ನಲ್ಲಿ ಒಂದು ಸಭೆಯನ್ನೇರ್ಪಡಿಸಿ ಅವರನ್ನು ಆತ್ಮೀಯತೆಯಿಂದ ಸ್ವಾಗತಿಸಲಾಯಿತು. ನಂತರ ಅದೇ ತರಹದ ಸಭೆಗಳನ್ನು ಕುಂಭಕೋಣಂ, ಬೆಂಗಳೂರು ಮತ್ತು ಮೈಸೂರಿನಲ್ಲಿ ಏರ್ಪಡಿಸಿದರು. ಈ ಸಭೆಗಳಲ್ಲಿ 'ಅಳಸಿಂಗ'ನಂತಹ ವಿನಮ್ರ ಮತ್ತು ವಿಧೇಯ ಶಿಷ್ಯ ಈ ಪ್ರಪಂಚದಲ್ಲಿ ಅಪರೂಪ ಎಂದು ವಿವೇಕಾನಂದರು ಶ್ಲಾಘಿಸಿದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com