(ಪದ ಪದರದಲ್ಲಿ ಪ್ರಕಟವಾಗುತ್ತಿರುವ ಸಾವಿರದ ಪದ ಇದು)
ಜನರ ಜನನದ ಮೂಲ
ಜನ್ಮದಾತೆ, ಪ್ರೀತಿದಾತೆ ಈ ಮಾತೆ
ಗರ್ಭದಲ್ಲಿ ಹೊತ್ತು, ಕಷ್ಟದಿಂದ ಹೆತ್ತು ಉಣಿಸುವಳು ತುತ್ತು. ಹಾಗಾಗಿ ಇವಳಿಗೆ ಮಕ್ಕಳೇ ಸೊತ್ತು
ಜಗದ ಗುರು ಈಕೆ. ಜಗದ್ಗುರುವಿಗೂ.....
ಗುರಿಯ ಕೊಟ್ಟು, ಹುರಿಯಗೊಳಿಸಿ ಮುನ್ನಡೆಸುವ ಹರಿ'ಗೋಲು'
ಅನವರತ ಮಕ್ಕಳ ಕಾಯುವ, ಅವರಿಗಾಗಿ ಜೀವವನ್ನೇ ತೇಯುವ ಮಮತೆಯ 'ಆಯಿ' ಈ ತಾಯಿ
ಜಗನ್ಮಾತೆಯ ವ್ಯಷ್ಟಿ ರೂಪ. ವ್ಯಸ್ತದ ಸೃಷ್ಟಿ ಸ್ವರೂಪ
ಅಪ್ಪನಿಗೆ ಭಯಂಕರ 'ಹೆಂಡತಿ' ಆಗಿರಬಹುದು. ಮಕ್ಕಳಿಗೆ ಮಾತ್ರ ಅಭಯಂಕರಿ ಅಮ್ಮ
ಮಗುವಿನ ನಗು ಈಕೆ, ಮನದ ನೋವಿಗೆ ಮುಲಾಮು
ಜತನದಿಂದ ಸುತರನ್ನು ಕಾಯುವವಳಾದ್ದರಿಂದ ಈಕೆ ಜನನಿ
ನಿಸ್ವಾರ್ಥ ಪ್ರೇಮಕ್ಕೆ ಈಕೆ ಅತ್ಯುತ್ತಮ ಉದಾಹರಣೆ
ಮಮತೆಗರೆವವಳಷ್ಟೇ ಮಾತೆಯಲ್ಲ, ಕೆಡುಕು ಮಾಡಿದಾಗ ಗುಡುಗಬೇಕು
ಮುದ್ದು ಮಾಡಿದರೆ ಪೆದ್ದರಾಗುವರೆಂಬ ಸತ್ಯ ತಿಳಿದು ಹದ್ದು ಮೀರದಂತೆ ಗುದ್ದು ಹಾಕಿ ಸದ್ದು ಮಾಡಬೇಕಾದದ್ದು ಇವಳ ಹೊಣೆ
ಸ್ವರ್ಗದ ಪ್ರತಿಬಿಂಬ,
ಇವಳಿಗೆ ಇವಳೇ ಸಾಟಿ, ಸಲ್ಲಲಿ ನಮನಗಳು ಕೋಟಿ
ವಿಶ್ವನಾಥ ಸುಂಕಸಾಳ
vishwasunkasal@yahoo.com