ಸಂಪಾದಕೀಯ

ಸುಧಾರಣೆ ಆಗಲೇಬೇಕಾದ ಕಾಯಿದೆ : ಪಂಚಾಯತ್‌ರಾಜ್

Published On :

ಗ್ರಾಮ ಸ್ವರಾಜ್ಯದ ಕಲ್ಪನೆಯ ಮೂಲ ಆಧಾರದ ಮೇಲೆ ರೂಪಗೊಂಡಿರುವ ಪಂಚಾಯಿತಿ ರಾಜ್ಯ ಕಾಯಿದೆಯಲ್ಲಿ ಬದಲಾವಣೆಯಾಗಲೇ ಬೇಕಾದ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಈ ವಿಚಾರದಲ್ಲಿ ಸರ್ಕಾರ ಪೂರ್ವಭಾವಿ ಕೆಲಸವನ್ನು ಆರಂಭಿಸಿರುವುದು ಸ್ವಾಗತಾರ್ಹ.
ನಿಜ. ಕಾಲಕಾಲಕ್ಕೆ ಬದಲಾದ ಚಿಂತನೆಯಂತೆ ಹಲವಾರು ಬಾರಿ ಪಂಚಾಯಿತಿ ರಾಜ್ಯ ಸಂಸ್ಥೆಗಳ ಕಾಯಿದೆಯ ತಿದ್ದುಪಡಿ ಆಗಿದ್ದರೂ, ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಸಮಗ್ರ ಸ್ವರೂಪದ ಬದಲಾವಣೆ ಅನಿವಾರ್ಯವೇ ಆಗಿರುವಂತಿದೆ.
ರಾಜೀವಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪಂಚಾಯಿತಿ ರಾಜ್ಯ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಕಾಯಿದೆಗಳಿಗೆ ಸಂವಿಧಾನದ ರಕ್ಷಣೆಯನ್ನು ನೀಡಿದ್ದರೂ, ವಾಸ್ತವದಲ್ಲಿ, ಆಚರಣೆಯಲ್ಲಿ, ಈಗ ಕಂಡುಬಂದಿರುವ ಲೋಪ-ದೋಷಗಳಿಂದಾಗಿ ಕಾಯಿದೆಯ ಮೂಲ ಉದ್ದೇಶವೇ ಏರುಪೇರಾಗಿದೆ.
ಈ ಪರಿಸ್ಥಿತಿಗೆ ನಾನಾ ಕಾರಣಗಳಿವೆ. ಅಧಿಕಾರದ ವಿಕೇಂದ್ರೀಕರಣ, ಸ್ಥಳೀಯ ಕೆಲಸಗಳನ್ನು ಕುರಿತ ಅಂತಿಮ ನಿರ್ಧಾರ ಸ್ಥಳೀಯ ಜನಪ್ರತಿನಿಧಿಗಳಿಂದಲೇ ಆಗಬೇಕು ಎನ್ನುವ ಸಿದ್ಧಾಂತವನ್ನು, ಒಪ್ಪಿದರೂ ಸರ್ಕಾರ, ಶಾಸಕರು ಹಾಗೂ ಉನ್ನತಮಟ್ಟದ ನೌಕರಶಾಹಿ, ಚುನಾಯಿತ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳ ನಿರ್ಧಾರಗಳನ್ನು ಬುಡಮೇಲು ಮಾಡುತ್ತಿದ್ದಾರೆ.
ಹೌದು. ಚುನಾಯಿತ ಪ್ರತಿನಿಧಿಗಳೂ ಕೂಡಾ ತಮ್ಮ ಅಧಿಕಾರವನ್ನಷ್ಟೇ ಗಮನಿಸಿ ಕರ್ತವ್ಯಗಳನ್ನು ಮರೆತಿರುವುದೂ ನಿಜ. ಬಹುತೇಕ ಸಂಸ್ಥೆಗಳಿಗೆ ಹಲವಾರು ಸಾಮಾಜಿಕ-ರಾಜಕೀಯ ಕಾರಣಗಳಿಂದಾಗಿ ಅಪಾತ್ರರೇ ಚುನಾಯಿತರಾಗುತ್ತಾರೆನ್ನುವ ದೂರುಗಳೂ ಇವೆ.
ಎಲ್ಲಕ್ಕಿಂತ ಹೆಚ್ಚಾಗಿ, ಸಾಮಾಜಿಕ ನ್ಯಾಯ ವಿತರಣೆಯ ಸಿದ್ದಾಂತದಂತೆ ಪದಾಧಿಕಾರಿಗಳ ಸ್ಥಾನಗಳಿಗೆ ಜಾರಿಗೆ ತಂದಿರುವ ಮೀಸಲು ನಿಯಮ ತೀರ ಸಂಕೀರ್ಣವಾಗಿದ್ದು, ಪ್ರತಿಯೊಂದು ಬಾರಿಯೂ ನ್ಯಾಯಾಲಯಗಳಲ್ಲೇ ಸಮಸ್ಯೆಗಳು ಇತ್ಯರ್ಥವಾಗುವ ಪರಿಸ್ಥಿತಿ ಅನೇಕ ಕಡೆಗಳಲ್ಲಿ ನಿರ್ಮಾಣವಾಗಿದೆ.
ಅಧಿಕಾರದ ಹಂಚಿಕೆಯ ಸಿದ್ಧಾಂತವನ್ನು "ಅಧಿಕಾರದ ಅವಧಿಯ ಹಂಚಿಕೆ" ಎಂದು ಅರ್ಥ ಮಾಡಿಕೊಂಡು, ವಾಸ್ತವದಲ್ಲಿ ಪದಾಧಿಕಾರಿಗಳ ಅಧಿಕಾರಾವಧಿಯನ್ನು ಇಪ್ಪತ್ತು ತಿಂಗಳಿಗೆ ಇಳಿಸಿರುವುದು ನಿಜಕ್ಕೂ ಗೊಂದಲದ ಗೋಜುಗಳನ್ನೇ ನಿರ್ಮಿಸಿದೆ.
ಹೀಗೇ ಲೋಪದೋಷಗಳ ಪಟ್ಟಿಯನ್ನು ಬೆಳೆಸುತ್ತ ಹೋಗಬಹುದು. ಸರ್ಕಾರ ಈ ಸಮಸ್ಯೆಗಳ ಅಧ್ಯಯನಕ್ಕೆ ಅನುಭವಿಗಳು ಹಾಗೂ ತಜ್ಞರ ಸಮಿತಿಯೊಂದನ್ನು ಈಗಾಗಲೇ ರಚಿಸಿದ್ದು, ಆ ಸಮಿತಿಯಿಂದ ಸಮಗ್ರ ಸ್ವರೂಪದ ಬದಲಾವಣೆ ಕುರಿತ ವರದಿಯನ್ನು ನಿರೀಕ್ಷಿಸುತ್ತಿದೆ.
ಕಾಯಿದೆಯ ಬದಲಾವಣೆ ಆಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮುಂಬರಲಿರುವ ಸುಧಾರಣೆ ಈಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಕೊಡುವ ರೀತಿಯಲ್ಲಿ ಇರಬೇಕು. ತೇಪೆ ಕೆಲಸವಾಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.