ಯುಪಿಎಸ್ಸಿಯಲ್ಲಿ ನಾಡಿನ ಕಸುವು ವೃದ್ಧಿ
ಗುರುವಾರ ಯುಪಿಎಸ್ಸಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 1122 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಕರ್ನಾಟಕದ 40 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇವರು ಶ್ರದ್ಧೆ, ಪರಿಶ್ರಮ, ತರಬೇತಿ, ಸ್ವಯಂಸ್ಫೂರ್ತಿಗಳಿಂದಲೇ ಈ ಮಹತ್ವದ ಘಟ್ಟವನ್ನು ತಲುಪಿದ್ದಾರೆ. ಕನ್ನಡ ನಾಡಿನ ನಲವತ್ತೂ ವಿದ್ಯಾರ್ಥಿಗಳ ಈ ಮಹತ್ವದ ಸಾಧನೆಯಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದಂತೂ ಸತ್ಯ. ತೀರ ಇತ್ತೀಚಿನ ವರ್ಷಗಳವರೆಗೂ ಬಿಹಾರದಂಥ ಉತ್ತರದ ರಾಜ್ಯಗಳಲ್ಲಿ ಮಾತ್ರ ಸಾಧನೆ ಕಾಣುತ್ತಿತ್ತು. ಕನ್ನಡಿಗರಾದ ನಮಗೆ ಯಾವುದೂ ಅಸಾಧ್ಯವಲ್ಲ ಎನ್ನುವುದು ಇದರಿಂದ ವಿದಿತವಾಗಿದೆ. ತಮ್ಮ ಮಕ್ಕಳು ಕೇವಲ ಇಂಜಿನಿಯರ್, ಡಾಕ್ಟರರಾಗಲಿ ಎಂದು ಆಶಾಸೌಧ ಕಟ್ಟಿಕೊಳ್ಳುತ್ತಿರುವ ಪಾಲಕರು ಇದನ್ನು ಗಮನಿಸಿ ತಮ್ಮ ಭ್ರಮಾಸ್ಥಿತಿಯಿಂದ ಹೊರಬಂದರೆ ಮಕ್ಕಳಿಗೂ ಒತ್ತಡ ತಪ್ಪೀತು!
ಪಿಯುಸಿ ಮತ್ತು ಪದವಿ ಹಂತದ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು, ಪಾಲಕರು ಉತ್ತೇಜನದ ಮೂಲಕ ಐ.ಎ.ಎಸ್, ಐ.ಪಿ.ಎಸ್ ಕಡೆಗೆ ಮಕ್ಕಳ ಆಸಕ್ತಿಯನ್ನು ಹರಿಯಿಸಬೇಕಿದೆ. ಅದಲ್ಲದೆ ಇಂತಹ ತರಬೇತಿಗಳು ಅತ್ಯಂತ ಕಡಿಮೆ ಶುಲ್ಕದಲ್ಲಿ ದೊರಕುವಂತಾದರೆ ಕನ್ನಡ ತಾಯಿ ಸಂತಸಪಟ್ಟಾಳು. ಪ್ರತಿ ಜಿಲ್ಲೆಯಲ್ಲಿಯೂ ಉಚಿತ ಇಲ್ಲವೇ ಕಡಿಮೆ ಶುಲ್ಕದ ತರಬೇತಿಗಳು ಅಧಿಕ ಪ್ರಮಾಣದಲ್ಲಿ ಒದಗಿಬರಲಿ ಎಂದು ಹಾರೈಸೋಣ. ಗಡಿ, ಭಾಷೆ, ಭಾಷಾಮಾಧ್ಯಮ ಮುಂತಾದವುಗಳ ಹೊಯ್ದಾಟದಲ್ಲಿ ಕನ್ನಡದ ಬೇರುಗಳು ಒಣಗುತ್ತಿವೆ ಎಂಬ ಆಪಾದನೆಯ ಮಧ್ಯೆ ಕನ್ನಡ ಕುವರರ ಈ ಸಾಧನೆ ನಿಜಕ್ಕೂ ವರ್ಣಿಸಲಸದಳ.
-ಪ್ರೊ. ಎ.ಎಲ್.ನಾಗೂರ, ಬಿಜಾಪೂರ
ಪಾದಚಾರಿಗಳ ಪರದಾಟ
ಮಂತ್ರಿಯೋರ್ವರು ವರ್ತುಲ ರಸ್ತೆಯ ಬಗ್ಗೆ ಮಾತನಾಡಿದರೆ, ಆರೋಗ್ಯ ಮಂತ್ರಿಗಳು ದ್ವಿಚಕ್ರದ ಅಂಬುಲೆನ್ಸ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಒಟ್ಟಾರೆಯಾಗಿ ಶ್ರೀಮಂತರು ಕುಟುಂಬದಲ್ಲಿರುವ ಎಲ್ಲರಿಗಾಗಿ ಕಾರು ಕೊಂಡರೆ ದ್ವಿಚಕ್ರ ವಾಹನವುಳ್ಳವರು ಅದನ್ನು ಬಿಸಾಕಿ ಕಾರು ಕೊಳ್ಳುತ್ತಾರೆ. ಶ್ರೀಮಂತರ ಮನೆಯಲ್ಲಿ ಕನಿಷ್ಠ ನಾಲ್ಕೈದು ಕಾರುಗಳು, ಮೂರು ನಾಲ್ಕು ದ್ವಿಚಕ್ರ ವಾಹನಗಳು. ಇವತ್ತು ಒಬ್ಬ ಸಾಮಾನ್ಯ ವ್ಯಕ್ತಿಗಳೂ ಸಹ ಕಾರಿಟ್ಟಿದ್ದಾರೆ. ಇರ್ಲಿ ಬಿಡಿ. ಅವರ ಹಣ, ಅವರ ಶೋಕಿ. ನಮ್ಮ ಸರ್ಕಾರ ಕಾರು ತಯಾರಕರಿಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಮಣೆ ಹಾಕುತ್ತಿದ್ದು ಹೊಸ ಹೊಸ ಕಾರುಗಳು ಬರುತ್ತಿರುವುದು ಒಂದು ಮುಖ್ಯ ಕಾರಣವಾಗಿದೆ.
ಹಿಂದೊಮ್ಮೆ ಬಿ.ಜೆ.ಪಿ. ಸರ್ಕಾರದ ಸಾರಿಗೆ ಮಂತ್ರಿಗಳು ಸಿಂಗಪುರದಲ್ಲಿ ಕುಟುಂಬಕ್ಕೆ ಒಂದು ಕಾರು ಹೊಂದುವ ಅವಕಾಶವಿದ್ದು, ನಮ್ಮಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿಕೆ ಕೊಟ್ಟಿದ್ದರು. ಅವರ ಈ ಯೋಜನೆ ಅವರ ಸರ್ಕಾರ ಬಿದ್ದು ಅವರೊಂದಿಗೆ ಹೊರಟು ಹೋಯಿತು. ಈಗೇನಾಗಿದೆ ಎಂದರೆ ಊರೆಲ್ಲಾ ಕಾರೇ. ವಾಹನಗಳ ನಿಯಂತ್ರಣವಾಗದೆ ವರ್ತುಲ ರಸ್ತೆ, ಫ್ಲೈ ಓವರ್ ಮತ್ತು ಊರೆಲ್ಲಾ ರಸ್ತೆ ಅಗಲೀಕರಣ ಮಾಡಿದರೂ ಜನರ ಬವಣೆ ತಪ್ಪುವುದಿಲ್ಲ. ಹೀಗಾಗಿ ಜನಸಂಖ್ಯೆಯಲ್ಲಿ, ಭೌಗೋಳಿಕವಾಗಿ ಭಿನ್ನ ರಚನೆ ಹೊಂದಿರುವ ಯಾವುದೋ ದೇಶದ ಉದಾಹರಣೆಯಲ್ಲಿ ಕೇವಲ ಹೈ-ಫೈ ಕನಸುಗಳನ್ನೇ ಕಾಣುವುದನ್ನು ಬಿಟ್ಟು, ಇಂತಹ ಅತಿ ಮುಖ್ಯವಾದ ಕಾರ್ಯಕ್ರಮ ಅನುಷ್ಠಾನಕ್ಕೆ ತನ್ನಿ. ಇಂಥ ಮೂಲಭೂತ ಸೌಕರ್ಯಕ್ಕೆ ಮನಸ್ಸು ಮಾಡಿದರೆ ಪಾದಚಾರಿ ನಾಗರೀಕರ ಶಾಪ ಆಶೀರ್ವಾದವಾಗಿ ಮಾರ್ಪಡುವುದು.
-ಅನಂತ ಸುಬ್ಬರಾಯ, ಬೆಂಗಳೂರು
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

