ರಾಜಕಾರಣಿಗಳ ಅಡ್ಡಾಟಗಳು
ಚುನಾವಣೆಯ ಸಮಯದಲ್ಲಿ ಪಕ್ಷಗಳು ಹೋಳಾಗುವುದು, ಒಟ್ಟಿಗೇ ಇದ್ದವರು ಪರಸ್ಪರ ಎದುರಾಳಿಗಳಾಗುವುದು ರಾಜಕಾರಣದಲ್ಲಿ ಮಾಮೂಲಿ ಎನ್ನುವಂತಾಗಿರುವುದು ಜನತಂತ್ರದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಪ್ರವೃತ್ತಿ ಹೀಗೇ ಮುಂದುವರಿದರೆ, ಈಗಾಗಲೇ ರಾಜಕಾರಣಿಗಳ ವಿಚಾರದಲ್ಲಿ ಕಡಿಮೆಯಾಗಿರುವ ಜನರ ವಿಶ್ವಾಸ ಇನ್ನಷ್ಟು ಕುಗ್ಗಲಿದೆ. ಸಾಮಾನ್ಯ ದಿನಗಳಲ್ಲಿ ಒಟ್ಟಿಗೇ ಇರುವ ಜನ, ಚುನಾವಣೆ ಸಮಯದಲ್ಲಿ ಮಾತ್ರ ಬೇರೆ ಬೇರೆ ಶಿಬಿರಗಳಲ್ಲಿ ಕಾಣಿಸಿಕೊಂಡು, ಚುನಾವಣೆ ಮುಗಿದ ಮೇಲೆ ಮತ್ತೆ ಒಂದೇ "ಅಡ್ಡಾ"ಗಳತ್ತ ಕಾಲು ಹಾಕುವುದರ ಹಿನ್ನೆಲೆ ಏನು?
ನಿಜಕ್ಕೂ ಅದು ಒಂದು ಆಳವಾದ ಅಧ್ಯಯನಕ್ಕೆ ಅರ್ಹವಾದ ವಸ್ತು. ಉದಾಹರಣೆಗೆ ಈಗ ಮುಂಬೈ ಮಹಾರಾಷ್ಟ್ರದಲ್ಲಿ ಶಿವಸೇನೆ - ಮಹಾರಾಷ್ಟ್ರ ನವನಿರ್ಮಾಣ ಸೇನೆಗಳ ನಡುವೆ ಇರುವ ವ್ಯತ್ಯಾಸವಾದರೂ ಏನು? ಈ ಪಕ್ಷಗಳ ರಾಜಕೀಯ ಎಂದರೆ ಪರಸ್ಪರವಾಗಿ ತೀವ್ರವಾಗಿ ದ್ವೇಷಿಸುವುದು, ಹಾಗೂ ಒಬ್ಬರದ್ದು ಒಂದು ಕಣ್ಣು ಹೋದರೆ, ಇನ್ನೊಬ್ಬರಿಗೆ ಎರಡೂ ಕಣ್ಣು ಹೋಗಬೇಕೆನ್ನುವ ರಾಜಕೀಯವೇ.
ಈಗ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜಕೀಯ ನಿಲವನ್ನೇ ಗಮನಿಸಿ; ಆ ಪಕ್ಷ ಪ್ರತ್ಯೇಕವಾಗಿ ಲೋಕಸಭೆ ಚುನಾವಣೆಯಲ್ಲಿ ಇತರ ಪಕ್ಷಗಳಂತೆಯೇ ಶಿವಸೇನೆ - ಭಾರತೀಯ ಜನತಾ ಪಕ್ಷಗಳನ್ನು ವಿರೋಧಿಸುವುದಂತೆ. ಆದರೆ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದಂತೆ. ಅದು ಹೇಗೆ ಸಾಧ್ಯ? ಈ ರಾಜಕೀಯ ನಿಜಕ್ಕೂ ಅನರ್ಥಕಾರಿ ರಾಜಕೀಯವೇ.
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ ಮತ್ತೆ ಮಾಜಿ ಮಂತ್ರಿಗಳಾದ ಎ. ರಾಜಾ ಹಾಗೂ ದಯಾನಿಧಿ ಮಾರನ್ ಅವರಿಗೆ ಟಿಕೆಟ್ ನೀಡಿದೆ. ಅದೇ ಸಮಯದಲ್ಲೇ ಇನ್ನೊಬ್ಬ ಮಾಜಿ ಮಂತ್ರಿಯಾದ ತಮ್ಮ ಹಿರಿಯ ಪುತ್ರ ಅಳಗಿರಿ ಅವರಿಗೇ ಕರುಣಾನಿಧಿ ಸ್ಥಾನವನ್ನು ನಿರಾಕರಿಸಿದ್ದಾರೆ. ಡಿಎಂಕೆ ವಿಭಜನೆ ಅನಿವಾರ್ಯವೆನ್ನುವಂತಾಗಿದೆ. ಡಿಎಂಕೆ ನಾಯಕ ಸ್ಟಾಲಿನ್, ಅಳಗಿರಿ ನಡುವೆ ಇರುವ ರಾಜಕೀಯ ವ್ಯತ್ಯಾಸವೇನು?
ಆಂಧ್ರ ಪ್ರದೇಶದಲ್ಲಂತೂ ಈಗ ಕಾಂಗ್ರೆಸ್ಸನ್ನು ಬಿಟ್ಟು ಹೊರಬಂದಿರುವ ಹಲವು ಪಕ್ಷಗಳಿವೆ. ಮಾಜಿ ಮುಖ್ಯಮಂತ್ರಿ ಜೈ ಸೀಮಾಂದ್ರ ಪಾರ್ಟಿ ಈಚಿನ ಹೊಸ ಪಕ್ಷ. ಅವರು ಪ್ರತಿಪಾದಿಸುವ ನೀತಿಯನ್ನೇ ಇತರ ಪಕ್ಷಗಳೂ ಪ್ರತಿಪಾದಿಸುತ್ತಿವೆ. ಹೊಸ ಪಕ್ಷದ ಆಗತ್ಯವಿತ್ತೆ? ಬಿಹಾರದಲ್ಲಿ ಲಾಲೂಪ್ರಸಾದ ಯಾದವ್ರ ರಾಷ್ಟ್ರೀಯ ಜನತಾದಳ ವಿಭಜನೆಯ ಅಂಚಿನಲ್ಲಿ ಬಂದು ನಿಂತಿದೆ. ಇಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳೇನೂ ಇಲ್ಲ. ವೈಯಕ್ತಿಕವಾಗಿ ಇರುವ ಭಿನ್ನಾಭಿಪ್ರಾಯಗಳಿಗೆ (ಸ್ಥಾನಗಳ ಹಂಚಿಕೆ) ರಾಜಕಾರಣದ ಲೇಪ ಕೊಡಲಾಗಿದೆ. ಉತ್ತರ ಪ್ರದೇಶದಲ್ಲಿ ಅಮರಸಿಂಗ್ - ಜಯಪ್ರದಾ ಅವರು ಮುಲಾಯಂ ಸಿಂಗ್ ಯಾದವ್ರ ಸಮಾಜವಾದಿ ಪಾರ್ಟಿಯನ್ನು ತೊರೆದು ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳವನ್ನು ಸೇರಿಕೊಂಡಿದ್ದಾರೆ. ಅದಕ್ಕೆ ಈಗಲೇ ಪ್ರಶಸ್ತ ಮುಹೂರ್ತವನ್ನು ಇಟ್ಟವರು ಯಾರು? ತುಂಬಾ ಹಿಂದೆ ಶರದ್ ಪವಾರ್ ಅವರು ಕಾಂಗ್ರೆಸ್ಸಿನಿಂದ ಸಿಡಿದು ಹೊರಗೆ ಬಂದು ರಾಷ್ಟ್ರೀಯತಾ ಕಾಂಗ್ರೆಸ್ ಕಟ್ಟಿದರು. ಈಗ ಅಧಿಕಾರದ ಹಂಚಿಕೆಯ ಅವಕಾಶ ಸಿಕ್ಕರೆ ಮತ್ತೆ ಇಬ್ಬರೂ ಒಂದು. ಈಗ ಈ ಪಕ್ಷಗಳ ನಡುವೆ ಒಪ್ಪಂದ ಆಗಿದೆ.
ಇಂತಹ ಕಲಸು ಮೇಲೋಗರದ ರಾಜಕೀಯ ವ್ಯವಸ್ಥೆ ಹಾಗೂ ಪರಸ್ಪರ ದ್ವೇಷ ಸಾಧಿಸುವ ಕಾರಣದಿಂದಲೇ ಚುನಾವಣೆ ಕಣವನ್ನು ಪ್ರವೇಶಿಸುವ ಪ್ರವೃತ್ತಿಯ ತಾಂಡವದಲ್ಲಿ ಒಂದು ಸುಭದ್ರ ಸರ್ಕಾರದ ರಚನೆ ಸಾಧ್ಯವಾಗುವಂತಹ ಲೋಕಸಭೆಯ ಉದಯವನ್ನು ನಿರೀಕ್ಷಿಸುವುದು ಕಷ್ಟ. ಅಭದ್ರ, ಅನಿಶ್ಚಿತ ವಾತಾವರಣ ದೇಶದ ಪ್ರಗತಿ ಸಾಧನೆಗೆ ಮಾರಕ. ಕಳೆದ ಐದು ವರ್ಷಗಳಲ್ಲಿ ಅದು ಅನುಮಾನಕ್ಕೆ ಆಸ್ಪದವೇ ಇಲ್ಲದ ರೀತಿಯಲ್ಲಿ ಋಜುವಾತಾಗಿದೆ. ಈ ಬಾರಿಯಾದರೂ ಅತಂತ್ರ ಅವ್ಯವಸ್ಥೆಯ ಲೋಕಸಭೆಯನ್ನು ಆಳಿಸಿ ಹಾಕುವ ರೀತಿಯಲ್ಲಿ ಜನ ಮತ ನೀಡಬೇಕು. ಚುನಾವಣೆ ಆನಂತರದ ಒಪ್ಪಂದ ಎನ್ನುವುದು ಮತ್ತೆ ಅನಾಹುತಕ್ಕೆ ನೀಡುವ ಆಹ್ವಾನವೇ. ಈಗ ದೊಡ್ಡ ಪಕ್ಷಗಳು ದೊಡ್ಡತನವನ್ನು ಪ್ರದರ್ಶಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

