ವಿಶಿಷ್ಟ ಚೇತನರನ್ನು ಹೀಗೆ ನಡೆಸಿಕೊಳ್ಳುವುದಾ?
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ವಿಕಲಚೇತನಳಾಗಿದ್ದು, ನನ್ನ ಎರಡೂ ಕಾಲುಗಳಿಗೆ ಶಸ್ತ್ರಕ್ರಿಯೆ ಆಗಿರುವುದರಿಂದ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿರುವುದಿಲ್ಲ. ಆದರೆ ಇಲ್ಲಿ ಕಚೇರಿಯು ಮಹಡಿಯ ಮೇಲಿದ್ದು ವಿಶಿಷ್ಟ ಚೇತನರಿಗೆ ಅವಶ್ಯವಾದ ರಾಂಪ್ ವ್ಯವಸ್ಥೆಯಾಗಲೀ, ಲಿಫ್ಟ್ ವ್ಯವಸ್ಥೆಯಾಗಲೀ ಇರುವುದಿಲ್ಲ. ಆದ್ದರಿಂದ ಇಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ತುಂಬಾ ಕಷ್ಟವಾಗಿದೆ. ಇಲ್ಲಿನ ಜೀಪ್ಶೆಡ್ನಲ್ಲಿ ನನಗೆ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಇಲ್ಲಿನ ವಾತಾವರಣ ತುಂಬಾ ಕೆಟ್ಟದಾಗಿದೆ. ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಈ ಜೀಪ್ಶೆಡ್ ಪೆಟ್ರೋಲ್, ಡೀಸೆಲ್ ಮತ್ತು ಆಯಿಲ್ ವಾಸನೆಯಿಂದ ತುಂಬಿರುತ್ತದೆ. ಮುಖ್ಯವಾಗಿ ಇಲ್ಲಿ ನನಗೆ ಶೌಚದ ವ್ಯವಸ್ಥೆ ಇರುವುದಿಲ್ಲ. ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಹಾಗೆಯೇ ಕುಳಿತಿರಬೇಕು. ಇದು ಒಂದು ರೀತಿಯ ನರಕಯಾತನೆಯಾಗಿದೆ. ಅಲ್ಲದೇ ಬೆಳಗ್ಗೆಯಿಂದ ಸಂಜೆಯವರೆಗೆ ಒಬ್ಬಳೇ ಏಕಾಂಗಿಯಾಗಿ ಕುಳಿತು ಕೆಲಸ ಮಾಡಬೇಕು. ಕಚೇರಿಯಲ್ಲಿ ಬಹಳಷ್ಟು ಸಿಬ್ಬಂದಿ ವರ್ಗದವರಿದ್ದರೂ ನಾನು ಮಾತ್ರ ಒಂಟಿಯಾಗಿ ಕುಳಿತು ಕರ್ತವ್ಯ ನಿರ್ವಹಿಸಬೇಕು. ಏನಾದರೂ ಸಮಸ್ಯೆಯಾದರೆ ಹೇಳಿಕೊಳ್ಳುವುದಕ್ಕೂ ಯಾರೂ ಹತ್ತಿರ ಇರುವುದಿಲ್ಲ. ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನನ್ನ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಕಚೇರಿಯನ್ನು ನೆಲಮಹಡಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಸ್ಥಳೀಯ ಶಾಸಕರಿಗೂ ಮನವಿ ನೀಡಿದರೂ ಅವರೂ ಇತ್ತ ಗಮನ ಹರಿಸಿಲ್ಲ. ಆದ್ದರಿಂದ ನಾನು ನನ್ನ ಸಮಸ್ಯೆಗಳ ಬಗ್ಗೆ ನೇರವಾಗಿ ಪತ್ರ ಬರೆಯುತ್ತಿದ್ದೇನೆ.
-ನಾಗರತ್ನ, ತುಮಕೂರು
ಮೋದಿ ಆಡಳಿತ ವಿಶ್ವಕ್ಕೆ ಮಾದರಿಯಾಗಲಿ
ಕೇಂದ್ರ ಸರ್ಕಾರದ ದುರ್ಬಲ ಆಡಳಿತದ ಸವಿಯನ್ನು ಮೆದ್ದ ಭಯೋತ್ಪಾದಕರು, ಮತ್ತವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಐಎಸ್ಐ, ಅಲ್ಲಿ ಬಚ್ಚಿಟ್ಟುಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಬಾಂಗ್ಲಾದೇಶದ ಮತಾಂಧರು ಮತ್ತಿತರರು ನರೇಂದ್ರ ಮೋದಿಯ ಸರ್ಕಾರ ಬರುವುದೆಂಬ ಚಿಂತನೆಯಲ್ಲಿಯೇ ನಡುಗಲಾರಂಭಿಸಿರುವುದು ಸತ್ಯ. ಇನ್ನೊಂದೆಡೆ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಈಗಾಗಲೇ ಭಾರತಕ್ಕೆ ಬೆಣ್ಣೆ ಹಚ್ಚುವ ಮಾತನ್ನಾಡಿದ್ದಾರೆ. ದೊಡ್ಡಣ್ಣನ ಬಾಲಂಗೋಚಿಗಳಾದ ಯುರೋಪಿನ ರಾಷ್ಟ್ರಗಳು ಕಣ್ಣೆವೆ ಮುಚ್ಚದೆ ಭಾರತದೆಡೆ ನೋಡುತ್ತಿವೆ. ಈಗಾಗಲೇ ಅಮೆರಿಕದಲ್ಲಿ ಆಡಳಿತಶಾಹಿಯು ನರೇಂದ್ರ ಮೋದಿಗೆ ವೀಸಾ ನಿರಾಕರಿಸಿದ ಕುರಿತು ಪಶ್ಚಾತ್ತಾಪ ಪಡುತ್ತಿರುವುದು ಅಲ್ಲಿನ ಅಧಿಕಾರಿವರ್ಗದ ಚಿಂತನೆಯಿಂದ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೆ ಮೋದಿಯವರು ನೀಡಿದ ಭರವಸೆಗಳು ಈಡೇರಲೆಂದು ಜನತೆ ಕಾದಿದೆ. ಅವರು ಪ್ರಧಾನ ಮಂತ್ರಿ ಗದ್ದುಗೆಯೇರಿದ ನಂತರ ಅಗೋಚರ ಒತ್ತಡಕ್ಕೆ ಮಣಿಯದೆ, ಭಾರತದ ಕೀರ್ತಿಯನ್ನು ವಿಶ್ವಮಟ್ಟಕ್ಕೇರಿಸಲಿ. ಸಂಪುಟ ಮಂತ್ರಿಗಳ ಆಯ್ಕೆಯಲ್ಲಿ ವಶೀಲಿಬಾಜಿಗೆ ಮಣಿಯದಿರಲಿ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು
ಬಿಎಂಟಿಸಿ ಬಸ್ ದರ ಏರಿಕೆ ಖಂಡನೀಯ
ಬಿಎಂಟಿಸಿ ದರ ಶೇಕಡ 15ರಷ್ಟು ಏರಿಸಿರುವುದು (ಮತ್ತು ಮಾಸಿಕ ಪಾಸಿನ ಬೆಲೆ) ಪ್ರಯಾಣಿಕರಿಗೆ ತುಂಬಾ ಹೊರೆಯಾಗಿದೆ. ಬಿಎಂಟಿಸಿಯವರ ತಪ್ಪಿನಿಂದ ಆದ ನಷ್ಟವನ್ನು ಪ್ರಯಾಣಿಕರ ಮೇಲೆ ಹೇರುತ್ತಿರುವುದು ಯಾವ ನ್ಯಾಯ? ಬೆಲೆ ಏರಿಕೆಯಿಂದಾಗಿ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಜನಸಾಮಾನ್ಯರಿಂದಲೇ ಬಿಎಂಟಿಸಿ ಸಂಸ್ಥೆ ನಡೆಯುತ್ತಿರುವುದು, ಅಲ್ಲದೇ ಬಿಎಂಟಿಸಿ ಸಂಸ್ಥೆ ಲಾಭದಲ್ಲಿ ಬರಲು ತುಂಬಾ ಮಾರ್ಗಗಳಿವೆ. ಇದನ್ನು ಮರೆತು ಬಿಎಂಟಿಸಿ ಬಸ್ ದರ ಏರಿಸಿರುವುದು ಖಂಡನೀಯ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಜನಸಾಮಾನ್ಯರಿಗೆ ಬಿಎಂಟಿಸಿ ಬರೆ ಕೊಟ್ಟಿದೆ. ಹಲವಾರು ಬಾರಿ ವೋಲ್ವೋ ಬಸ್ (ವಜ್ರ ಬಸ್)ನಲ್ಲಿ ಕೇವಲ 2-3 ಪ್ರಯಾಣಿಕರು ಮಾತ್ರ ಇರುತ್ತಾರೆ. ಇನ್ನು ಒಂದೇ ಮಾರ್ಗಕ್ಕೆ ಸತತವಾಗಿ 3-4 ಬಸ್ಗಳನ್ನು ಓಡಿಸುತ್ತಾರೆ. ಹೀಗಾದರೆ ಲಾಭ ಬರುವುದು ಹೇಗೆ? ಬಿಎಂಟಿಸಿ ಸಂಸ್ಥೆ ಜನಾಭಿಪ್ರಾಯದಂತೆ ತಕ್ಷಣದಿಂದಲೇ ಮೊದಲಿನ ದರವನ್ನೇ ಮುಂದುವರೆಸಬೇಕು ಮತ್ತು ಎರಡು ವರ್ಷಗಳ ತನಕ ಬಸ್ ದರ ಏರಿಕೆ ಮಾಡಬಾರದಾಗಿ ಕೋರಿಕೆ.
-ಲಕ್ಷ್ಮೀ. ಪಿ.ಎ. ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

