ಸಂಪಾದಕೀಯ

ಸಾಕಿನ್ನು ಈ ಕುರ್ಚಿಯಾಟ

Published On :

ಇದೊಂದು ಹಳೆಯ ರಾಜಕೀಯ ಪೀಡೆ ಎನ್ನಬಹುದು. ರಾಜಕೀಯ ವಲಯಗಳಲ್ಲಿ ತಾವು ಚುನಾಯಿತ ಸ್ಥಾನಗಳಲ್ಲಿರುವುದು ಜನ್ಮಸಿದ್ಧ ಹಕ್ಕು ಎನ್ನುವ ಭಾವನೆ ಅನೇಕರಲ್ಲಿದೆ. ಆ ಭಾವನೆಗೆ ಬೇರೆ ಬೇರೆ ಕಾರಣಗಳಿಂದ ಅದರದ್ದೇ ಆದ ಮೌಲ್ಯವೂ ಬಂದಿರಬಹುದು. ಆದರೆ ಅದಕ್ಕೆ ರಾಜಕೀಯ ಪಕ್ಷಗಳು ಸೊಪ್ಪು ಹಾಕಬಾರದು.
ಲೋಕಸಭೆ ಚುನಾವಣೆ 2014. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅನಿರೀಕ್ಷಿತವಾದ ಫಲಿತಾಂಶ ಪ್ರಕಟವಾಗಿದೆ. ತಾವು ಗೆಲ್ಲಲೇಬೇಕೆಂದು ಭಾವಿಸಿದ್ದ ಅನೇಕರು ಹೇಳಲು ಹೆಸರೇ ಇಲ್ಲದವರ ವಿರುದ್ಧ ಸೋತಿದ್ದಾರೆ. ಇಂದು ರಾಜಕೀಯ ವಿಪ್ಲವದಲ್ಲಿ ಇಂತಹ ಬೆಳವಣಿಗೆ ಅನಿವಾರ್ಯ. ಹೀಗಾಗುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ. ಈಗಿನ ಲೋಕಸಭೆ ಚುನಾವಣೆ ನಡೆದ ಅನಂತರ ವಿಧಾನ ಪರಿಷತ್ತಿಗೆ ಹಲವು ಸ್ಥಾನಗಳನ್ನು ತುಂಬುವ ಚುನಾವಣೆ ನಡೆಯಬೇಕಾಗಿದೆ. ಆ ಸದನಕ್ಕೆ ಈಗ ಐದು ಮಂದಿ ಸದಸ್ಯರನ್ನು ನಾಮಕರಣ ಮಾಡುವ ಅವಕಾಶವೂ ಸರ್ಕಾರಕ್ಕೆ ಇದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳೂ ಭರ್ತಿಯಾಗಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತ ಕೆಲವು "ಅತಿ ಪ್ರಭಾವಿಗಳು", ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಕೇಂದ್ರ ನಾಯಕರನ್ನು ತಮಗೆ ರಾಜ್ಯಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರಾಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಪಡಿಸುತ್ತಿದ್ದಾರೆ. ಇನ್ನು ಕೆಲವು ಪ್ರಭಾವಿಗಳ ಪರವಾಗಿ ಅವರ ಬೆಂಬಲಿಗರು ಅಧಿಕಾರದಲ್ಲಿರುವ ವ್ಯಕ್ತಿಗಳಿಗೆ ದುಂಬಾಲು ಬಿದ್ದಿದ್ದಾರೆ.
ನಿಜ. ಹಿಂದೆ ಹೀಗಾಗಿದೆ. ವಿಧಾನಸಭೆ ಚುನಾವಣೆಗಳಲ್ಲಿ ಸೋತು ರಾಜ್ಯಸಭೆಗೆ ಹೋದವರೂ ಇದ್ದಾರೆ. ಕೆಲವರ ವಿಚಾರದಲ್ಲಿ ಪಕ್ಷದ ದೃಷ್ಟಿಯಿಂದ ಅವರನ್ನು ಸಂಸದರನ್ನಾಗಿ ಮಾಡುವುದು ಒಳ್ಳೆಯದೇ ಆಗಿರಬಹುದು. ಆದರೆ ಅದು ತುಂಬಾ ಅಪರೂಪದ ವಿಶೇಷ ಪ್ರಕರಣಗಳಲ್ಲಿ ಮಾತ್ರ ಪಕ್ಷದ ಹಿರಿಯರ ಪರಿಗಣನೆಗೆ ಅರ್ಹ.
ಉದಾಹರಣೆಗೆ ಈಗಿನ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಅರುಣ ಜೈಟ್ಲಿ ಸೋತಿದ್ದಾರೆ. ಅವರ ರಾಜ್ಯಸಭೆಯ ಸದಸ್ಯತ್ವದ ಅವಧಿ ಮುಗಿದ ಅನಂತರ ಅವರನ್ನು ಸಂಸತ್ತಿಗೆ ಕರೆತರಲೇಬೇಕೆನ್ನುವ ಅನಿವಾರ್ಯತೆ ಆ ಪಕ್ಷಕ್ಕೆ ಇರಬಹುದು. ಅದೇ ರೀತಿ ಕಾಂಗ್ರೆಸ್ಸಿಗೂ ಚುನಾವಣೆಯಲ್ಲಿ ಸೋತಿರುವ ತನ್ನ ಹಿರಿಯ ನಾಯಕರನ್ನು ಹೇಗಾದರೂ ಮಾಡಿ ಸಂಸತ್ತಿನ ಸದಸ್ಯರನ್ನಾಗಿ ಮಾಡಲೇಬೇಕಾದ ಅಗತ್ಯವೂ ಇರಬಹುದು.
ಆದರೆ ಇದನ್ನೇ ಒಂದು ನಿಯಮವಾಗಿಟ್ಟುಕೊಂಡರೆ ರಾಜಕೀಯವೇ ಪಟ್ಟಭದ್ರ ಆಸಕ್ತಿಗಳ ಆಡೊಂಬಲವಾಗಲೂ ಬಹುದು. ಹಿಂದೆ ಕೆಲವು ರಾಜಕೀಯ ಪಕ್ಷಗಳು ನೇರ ಚುನಾವಣೆಯಲ್ಲಿ ಸೋತವರನ್ನು ಹಿಂದಿನ ಬಾಗಿಲಿನಿಂದ ಮೇಲ್ಮನೆಗಳಿಗೆ ಆರಿಸುವುದನ್ನು ತಮ್ಮ ಪಕ್ಷದ ಮಟ್ಟಿಗೆ ನಿಷೇಧ ಎನ್ನುವ ನಿಯಮವನ್ನು ಅಂಗ ರಚನೆಯಲ್ಲೇ ಅಳವಡಿಸಿಕೊಂಡಿದ್ದವು. ಅದರ ಪಾಲನೆಯೂ ಆಗುತ್ತಿತ್ತು. ಈಗ ಆ ಪಕ್ಷಗಳೂ ಇಲ್ಲ, ಆ ನಿಯಮದ ವಿಚಾರವೂ ಅನೇಕರಿಗೆ ಗೊತ್ತೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಈಗ ಕೆಲವು ಆಸಕ್ತ ಹಿತಗಳು, ಚುನಾವಣೆಯಲ್ಲಿ ಸೋತ "ನಾಯಕರ" ಪುನರ್‌ವ್ಯವಸ್ಥೆಗೆ ಒತ್ತಾಯಪಡಿಸಿದಾಗ, ಅವರು ಅದೆಲ್ಲಾ ಸಾಧ್ಯವಿಲ್ಲವೆಂದು ಕಟ್ಟು ನಿಟ್ಟಾಗಿ ಹೇಳಿದ್ದಾರಂತೆ. ಇಂತಹ ಕಠೋರವಾದ ಮಾತನ್ನಾಡಬಲ್ಲ ನಾಯಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಒಮ್ಮತವನ್ನು ಮೂಡಿಸುವ ಪ್ರಯತ್ನ ನಡೆಯಬೇಕು. ರಾಜಕೀಯವನ್ನು ಕುರ್ಚಿಯ ಆಟವನ್ನಾಗಿ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.