ಸಂಪಾದಕೀಯ

ಮೋದಿ ಅಧಿಕಾರದ ಮೊದಲ ದಿನ ನೆರೆ ಹೊರೆ ನಾಯಕರ ಪರಿಚಯ

Published On :

ಪ್ರಧಾನಿ ನರೇಂದ್ರ ಮೋದಿ ಅವರು ತಾವೇ ಆರಂಭಿಸಿದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೂತನ ಆವಿಷ್ಕಾರದಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ನೆರೆಹೊರೆಯ ರಾಷ್ಟ್ರಗಳ ಪ್ರಮುಖರು ಹಾಗೂ ಅವರ ಸಹಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದೇ ಒಂದು ವಿಶೇಷ. ಎಲ್ಲ ಸಾರ್ಕ್ (ದಕ್ಷಿಣ ಏಷ್ಯಾ ಸಹಕಾರ ರಾಷ್ಟ್ರಗಳ ಸಂಘಟನೆ) ರಾಷ್ಟ್ರಗಳೂ ಆಹ್ವಾನವನ್ನು ಒಪ್ಪಿ ಬಂದಿದ್ದೇ ಒಂದು ಸಾಧನೆ.
ಮಂಗಳವಾರ ಎಲ್ಲ ವಿದೇಶಿ ಪ್ರಮುಖರ ಜತೆ ಮೋದಿ ಅವರು ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದರೂ ನಿಜವಾದ ಆಸಕ್ತಿ ಇದ್ದಿದ್ದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ರ ಭೇಟಿಯ ಕಾಲದ ಚರ್ಚೆಯಲ್ಲಿ. ನಿಜ. ಇದೇನೂ ವಿದೇಶಾಂಗ ನೀತಿಯ ಪ್ರಯೋಗವಲ್ಲ. ನವಾಜ್ ಷರೀಫ್, ಮೋದಿ ಪ್ರತಿಜ್ಞಾ ವಚನ ಸ್ವೀಕಾರದ ಸಮಾರಂಭಕ್ಕಷ್ಟೇ ಬಂದಿದ್ದು. ಉಭಯ ರಾಷ್ಟ್ರಗಳ ನಡುವಣ ಗಂಭೀರ ಸಮಸ್ಯೆಗಳ ವಿಚಾರ ವಿನಿಮಯಕ್ಕಲ್ಲ. ಇಲ್ಲಿ ರಾಜಕೀಯ ಗೌಣವಾಗಿತ್ತು. ಆದರೂ ಈಗಿನ ಸನ್ನಿವೇಶದಲ್ಲಿ ಭಾರತ ಪಾಕಿಸ್ತಾನದ ಪ್ರಧಾನಿಗಳು ಬಹಿರಂಗವಾಗಿ ಪರಸ್ಪರ ಕೈ ಕುಲುಕಿ, ಒಟ್ಟಿಗೇ ಊಟ ಮಾಡಿ, ಇಬ್ಬರಿಗೂ ಆಸಕ್ತಿ ಇರುವ ವಿಚಾರಗಳನ್ನು ಕುರಿತು "ಮಾತಾಡಿದ್ದು" ಸ್ವಾಗತಾರ್ಹವೇ. ಉಭಯ ರಾಷ್ಟ್ರಗಳ ನಡುವೆ ಅಂತಹ ಸಂಬಂಧ ಇರುವುದು ಒಳ್ಳೆಯದೇ.
ಭಾರತ- ಪಾಕಿಸ್ತಾನ ಪ್ರಧಾನಿಗಳು ಭೇಟಿಯಾದರೆ ಏನನ್ನು ಮಾತಾಡಬಹುದೋ ಅಂತಹ ಮಾತುಗಳನ್ನೇ ಆಡಿರುತ್ತಾರೆ. ಆದರೆ ಸಮಸ್ಯೆಗಳ ಪರಿಹಾರದ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿರಲಾರರು. ಅಲ್ಲಿಗೆ ಆ ಭೇಟಿಯಾಗಿದ್ದೇ ಒಂದು ಗಮನಾರ್ಹ ಘಟನೆ ಎಂದಾಯಿತು. ಉಳಿದ ವಿದೇಶೀ ರಾಷ್ಟ್ರಗಳ ಪ್ರಮುಖರ ಜತೆ ಮೋದಿ ಅವರಿಗೆ ಹೆಚ್ಚು ಮಾತಾಡುವುದು ಏನೂ ಇರಲಿಲ್ಲ. ಆದರೂ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳೂ ಬಂದಿದ್ದರು ಎನ್ನುವುದೇ ಮುಖ್ಯ.ಉಳಿದಂತೆ, ಮೋದಿ ಅವರು ಆಹ್ವಾನ ಪತ್ರಗಳನ್ನು ಹಂಚುವುದರಲ್ಲಿ ಜಿಪುಣತನವನ್ನು ಪ್ರದರ್ಶಿಸಲಿಲ್ಲ. ಅವರ ವೈಯಕ್ತಿಕ ಬೇಕು ಬೇಡಗಳನ್ನು ಪ್ರಕಟಿಸಲಿಲ್ಲ. ಅದು ಬಿಜೆಪಿ ಅಥವಾ ಮೋದಿ ಅವರ ಸಮಾರಂಭ ಅಲ್ಲ. ದೇಶದ ಪ್ರಧಾನಿಯ ಪ್ರತಿಜ್ಞಾವಚನದ ಸಮಾರಂಭ.
ಬಹುತೇಕವಾಗಿ ಆಹ್ವಾನಿತರೆಲ್ಲರೂ ಸಮಾರಂಭದಲ್ಲಿ ಪಾಲುಗೊಂಡಿದ್ದೂ ಒಂದು ಸಾಧನೆಯೇ. ಪ್ರಮಾಣವಚನ ಸ್ವೀಕಾರದ ಸಮಾರಂಭಕ್ಕೆ ಮುಂಚೆ ಮೋದಿ ಅವರು ತಮ್ಮ ಮಂತ್ರಿಮಂಡಲದ ಸ್ವರೂಪಕ್ಕೆ ಕೊನೆಯ ನಿಮಿಷದ ಬದಲಾವಣೆಗಳಲ್ಲಿ ನಿರತರಾಗಿದ್ದರು. ಮಂತ್ರಿಮಂಡಲದ ರಚನೆಯಂತಹ ಕಷ್ಟದ ಕೆಲಸ ಮುಗಿಸಿದ ತಕ್ಷಣವೇ ಹೆಚ್ಚು ಕಡಿಮೆ ಸಮಾರಂಭದಲ್ಲಿ ಪಾಲುಗೊಂಡಿದ್ದು ದೊಡ್ಡ ಸುದ್ದಿ. ಆಹ್ವಾನಿತರಲ್ಲಿ ರಾಜಕಾರಣಿಗಳೇ ವಿಜೃಂಭಿಸಿದ್ದು. ಆದರೆ ನಿಜವಾದ ಉತ್ಸಾಹ ಹಾಗೂ ಸಂತೃಪ್ತಿ ಕಂಡು ಬಂದಿದ್ದು ವಾಣಿಜ್ಯೋದ್ಯಮಿಗಳ ವಲಯದಲ್ಲಿ. ಆ ವಲಯದ ಅತಿರಥ ಮಹಾರಥರೆಲ್ಲರೂ ಹಾಜರಿದ್ದರು. ಅದೂ ಮೋದಿಯವರ ಸಾಧನೆಯೇ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.