ನಟರ ಸ್ಪರ್ಧೆಯಿಂದಾಗಿಯೇ ಸುದ್ದಿಯಾಗಿರುವ ಮಂಡ್ಯದಲ್ಲಿ ಸ್ಟಾರ್ ನಟರ ಪ್ರಚಾರ ತಾರಕಕ್ಕೇರುವುದರಲ್ಲಿ ಎರಡು ಮಾತಿಲ್ಲ. ಸುಮಲತಾ ಅವರ ಪರವಾಗಿ, ದೊಡ್ಡಣ್ಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಸ್ಯಾಂಡಲ್ ವುಡ್ ಸ್ಟಾರ್ ನಟರಾದ ದರ್ಶನ್ ಹಾಗೂ ಯಶ್ ಅವರು ಪ್ರಚಾರ ನಡೆಸಲಿದ್ದು, ಇವರು ಮಾತ್ರವಲ್ಲದೇ ಪ್ರಸ್ತುತ ಬಿಜೆಪಿಯಲ್ಲಿರುವ ನಟ ಜಗ್ಗೇಶ್ ರಂತಹ ಘಟಾನುಘಟಿ ನಟರು ಸುಮಲತಾ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಹೀಗಾಗಿ ಸುಮಲತಾ ಪರ ಸ್ಯಾಂಡಲ್ ವುಡ್ ನಿಂತಿದ್ದರೆ, ಅತ್ತ ನಿಖಿಲ್ ಪರ ಎಚ್ ಡಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಜೆಡಿಎಸ್ ಮಿತ್ರ ಪಕ್ಷ ಕಾಂಗ್ರೆಸ್ ಕೂಡ ನಿಖಿಲ್ ಪರ ಪ್ರಚಾರ ಮಾಡುವಂತೆ ಕೈ ಕಾರ್ಯಕರ್ತರಿಗೆ ಮನವಿ ಮಾಡುತ್ತಿದೆ.