ದೇಶ

ಪಿಎಂ ಘನತೆಗೆ ಕಾಂಗ್ರೆಸ್ ಮಸಿ

ಪಿಎಂ ಘನತೆಗೆ ಕಾಂಗ್ರೆಸ್ ಮಸಿ
Published On :

ನವದೆಹಲಿ: ಪ್ರಧಾನಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ 'ದಿ ಆಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್‌' ಕೃತಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ಯುಪಿಎ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ದೇಶವನ್ನು ಅನೇಕ ದಿನಗಳಿಂದ ಕಾಡುತ್ತಿದ್ದ ಅನುಮಾನವನ್ನು ಬಾರು ಅವರ ಕೃತಿ ನಿಜವಾಗಿಸಿದೆ. ಪ್ರಧಾನಿಗಳು ತಮ್ಮ ಬಹುತೇಕ ಎಲ್ಲ ನಿರ್ಧಾರಗಳಿಗೆ ಕಾಂಗ್ರೆಸ್ ಅಧ್ಯಕ್ಷೆ ಒಪ್ಪಿಗೆ ಪಡೆಯಬೇಕಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಘನತೆ ಕಳೆದುಕೊಂಡ ಅನೇಕ ಸಂವಿಧಾನದತ್ತ ಸಂಸ್ಥೆಗಳಲ್ಲಿ ಪ್ರಧಾನಿ ಹುದ್ದೆ ಕೂಡ ಒಂದು ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ. ಪ್ರಧಾನಿ ಸಿಂಗ್ ಅವರು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ತಮ್ಮ ಅಧಿಕಾರಾವಧಿ ಪ್ರಧಾನಿ ಹುದ್ದೆ ಮೇಲೆ ಹೇಗೆ ಪರಿಣಾಮ ಬೀರಿತು ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿಯೊಂದು ವಿಚಾರದಲ್ಲೂ ಪ್ರಧಾನಿ ಮಾತೇ ಅಂತಿಮವಾಗಿತ್ತೇ? ಮೂಲ ಕಮ್ಯುನಿಸ್ಟ್ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಮುಖ್ಯಸ್ಥನಿಗಿಂತ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ಹೆಚ್ಚು ಪ್ರಭಾವಿ. ಪ್ರಧಾನಿ ಸಿಂಗ್ ಈ ರೀತಿಯ ವ್ಯವಸ್ಥೆಯ ಒಂದು ಭಾಗವಾಗಿದ್ದರೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ ಜೇಟ್ಲಿ.
ಪ್ರಧಾನಿಗಳನ್ನು ಅವರು ಬಿಟ್ಟು ಹೋದ ಹೆಜ್ಜೆಗುರುತುಗಳ ಆಧಾರದ ಮೇಲೆ ಗುರುತಿಸಲಾಗುತ್ತದೆಯೇ ಹೊರತು ಎಷ್ಟು ವರ್ಷ ಆ ಹುದ್ದೆಯಲ್ಲಿ ಕಳೆದರು ಎನ್ನುವುದರ ಮೇಲಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಪಿಎಂಒ ಸ್ಪಷ್ಟನೆ: ಆ್ಯಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್ ಕೃತಿಯ ಲೇಖಕ ಹಾಗೂ ಪ್ರಧಾನಿ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅಭಿಪ್ರಾಯವನ್ನು ಪ್ರಧಾನಿ ಕಾರ್ಯಾಲಯ(ಪಿಎಂಒ) ತೀವ್ರವಾಗಿ ಖಂಡಿಸಿದೆ. ಇದು ಆಧಾರರಹಿತ ಮತ್ತು ದುರುದ್ದೇಶದಿಂದ ಕೂಡಿದ ಆರೋಪ ಎಂದು ಪಿಎಂಒ ಹೇಳಿದೆ. ಮನಮೋಹನ ಸಿಂಗ್ ಕಾರ್ಯಾಲಯದ ಯಾವುದೇ ಕಡತಗಳು ಸೋನಿಯಾ ಕೈಗೆ ಹೋಗುತ್ತಿರಲಿಲ್ಲ ಎಂದು ಪಿಎಂಒ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.