ದೇಶದಲ್ಲಿ ಮೋದಿ ಅಲೆ ಇಲ್ಲ; ಬಿಜೆಪಿ ಅಲೆ ಮಾತ್ರ: ಮುರಳಿ ಮನೋಹರ ಜೋಶಿ

ಗುಜರಾತ್ ಮಾದರಿ ಎಲ್ಲೆಡೆಗೆ ಒಗ್ಗದು
ಪಿಟಿಐ ನವದೆಹಲಿ ಏ.13
'ದೇಶದಲ್ಲಿ ನರೇಂದ್ರ ಮೋದಿ ಅಲೆಯೇ ಇಲ್ಲ. ಇರುವುದೆಲ್ಲ ಬಿಜೆಪಿ ಅಲೆ. ಗುಜರಾತ್ ಮಾದರಿ ಅಭಿವೃದ್ಧಿ ಎಲ್ಲ ರಾಜ್ಯಗಳಿಗೆ ಹೊಂದಾಣಿಕೆಯಾಗದು'
- ಹೀಗೆಂದು ಮತ್ತೊಮ್ಮೆ ಭಿನ್ನ ಧ್ವನಿ ಸ್ಫೋಟಿಸಿದ್ದು ಬಿಜೆಪಿ ನಾಯಕ ಡಾ.ಮುರಳಿ ಮನೋಹರ ಜೋಶಿ. ಪ್ರಣಾಳಿಕೆ ವಿಚಾರದಲ್ಲಿ ನರೇಂದ್ರ ಮೋದಿಯವರ ಜತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ವದಂತಿಗಳಿಗೆ ತೆರೆ ಬೀಳುತ್ತಿದ್ದಂತೆ ಮತ್ತೆ ಜೋಶಿ 'ಮೋದಿ ಅಲೆ ಇಲ್ಲವೇ ಇಲ್ಲ' ಎನ್ನುವ ಮೂಲಕ ಭಿನ್ನರಾಗ ಹಾಡಿದ್ದಾರೆ. ಕೇರಳದ ಖಾಸಗಿ ಸುದ್ದಿವಾಹಿನಿ ಜತೆ ಅವರು ಮಾತನಾಡಿದರು.
ಜೋಶಿ ಹೇಳಿದ್ದೇನು?
-ದೇಶಾದ್ಯಂತ ಮೋದಿ ಅಲೆ ಇಲ್ಲ. ಇರುವುದೆಲ್ಲ ಬಿಜೆಪಿ ಪರವಾದ ಅಲೆಯಾಗಿದೆ.
-ಗುಜರಾತ್ ಮುಖ್ಯಮಂತ್ರಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಹೀಗಾಗಿ ಅವರು ನಮ್ಮ ಪಕ್ಷದ ಪ್ರತಿನಿಧಿಯಾಗಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿಯ ಎಲ್ಲ ನಾಯಕರು ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
-ಪ್ರಧಾನಿ ಅಭ್ಯರ್ಥಿ ಎಂಬ ಕಾರಣಕ್ಕೆ ತೀರಾ ವೈಯಕ್ತಿಕವಾದ ಪ್ರಭಾವಳಿಯಿಂದ 'ಮೋದಿ ಅಲೆ' ಇದೆ ಎಂಬ ಅಂಶವೇನೂ ಗೊತ್ತಾಗುತ್ತಿಲ್ಲ.
-ಗುಜರಾತ್ ಮಾದರಿ ಅಭಿವೃದ್ಧಿ ಎಂಬ ವಾದ ಸರಿಯಲ್ಲ. ಅದು ಆ ರಾಜ್ಯಕ್ಕೆ ಮಾತ್ರ ಹೊಂದಾಣಿಕೆಯಾಗುತ್ತದೆ. ಎಲ್ಲ ರಾಜ್ಯಗಳಿಗೆ ಅದು ಹೊಂದಾಣಿಕೆಯಾಗಲಾರದು. ಬಿಜೆಪಿ ನೇತೃತ್ವದ ಎನ್‌ಡಿಎ ಅದನ್ನೇ ಅನುಸರಿಸುತ್ತಿಲ್ಲ.
-ಮಹಾರಾಷ್ಟ್ರದಲ್ಲಿ ಅನುಸರಿಸಲಾಗುತ್ತಿರುವ ಅಭಿವೃದ್ಧಿಯ ಮಾದರಿ ಜಮ್ಮು-ಕಾಶ್ಮೀರಕ್ಕೆ, ಅರುಣಾಚಲ ಪ್ರದೇಶಕ್ಕೋ ಹೊಂದಾಣಿಕೆಯಾಗದು. ಹೀಗಾಗಿ ಅಭಿವೃದ್ಧಿ ಮಾದರಿ ಎಂಬ ವಿಚಾರವನ್ನು ರಾಜ್ಯವೊಂದಕ್ಕೇ ನಿಗದಿ ಮಾಡುವುದು ಸರಿಯಲ್ಲ. ಎಲ್ಲ ರಾಜ್ಯಗಳಲ್ಲೂ ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಮಾದರಿ ಇರುತ್ತದೆ.
-ತ್ರಿಪುರ ಸರ್ಕಾರ ಉತ್ತಮ ರೀತಿಯ ಅಭಿವೃದ್ಧಿ ಕ್ರಮಗಳು ಇದ್ದಾಗ ಅವುಗಳನ್ನೂ ಅನುಷ್ಠಾನ ಮಾಡಬಹುದು. ಎಲ್ಲ ರಾಜ್ಯಗಳಲ್ಲಿನ ಅಭಿವೃದ್ಧಿಯ ಅಂಶಗಳನ್ನು ಅನುಷ್ಠಾನ ಮಾಡಲು ಎನ್‌ಡಿಎ ಮುಂದಾಗಿದೆ.
-ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನೀಡಬಹುದಿತ್ತು. ಈ ಬಗ್ಗೆ ಉಂಟಾಗಿದ್ದ ವಿವಾದವನ್ನು ತಪ್ಪಿಸಬಹುದಿತ್ತು.
-ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನೀಡುವ ವಿಚಾರ ಬಿಜೆಪಿಯ ಕೇಂದ್ರೀಯ ಚುನಾವಣಾ ಮಂಡಳಿಯಲ್ಲಿ ಚರ್ಚೆಯೇ ಆಗಿರಲಿಲ್ಲ. ಮುಖ್ಯಮಂತ್ರಿ ವಸುಂಧರಾರಾಜೇ ಮತ್ತು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ನಡುವೆ ಈ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಸಿಂಗ್ ಅವರಿಗೆ ಟಿಕೆಟ್ ನೀಡದೆ ಇರುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


