ದೇಶ

46 ವರ್ಷದಿಂದ ಇವರು ಗೆದ್ದೇ ಇಲ್ಲ!

46 ವರ್ಷದಿಂದ ಇವರು ಗೆದ್ದೇ ಇಲ್ಲ!
Published On :

ಶ್ಯಾಮ್ ಬಾಬು ಸುಬುಧಿ. ಒರಿಸ್ಸಾದವರು. ವಯಸ್ಸು ಎಪ್ಪತ್ತೆಂಟು. 1968ರಿಂದ ಒಂದಲ್ಲ, ಎರಡೆರಡು ಕಡೆ ಎಲೆಕ್ಷನ್ನಿಗೆ ನಿಲ್ಲುತ್ತಿದ್ದಾರೆ. ಆದರೆ, ಒಮ್ಮೆಯೂ ಗೆದ್ದಿಲ್ಲ...

ಬಹುಶಃ ಇವರು ಈ ಬಾರಿ ವಿಶ್ವದ 'ಅತಿದೊಡ್ಡ ಚುನಾವಣೆಯ ಸೋಲಿಗ' ಎನಿಸಿಕೊಳ್ಳಬಹುದು!
ಪೂರ್ಣ ಹೆಸರು ಶ್ಯಾಮ್ ಬಾಬು ಸುಬುಧಿ. ಒರಿಸ್ಸಾದವರು. ವಯಸ್ಸು ಎಪ್ಪತ್ತೆಂಟು. 1968ರಿಂದ ಒಂದಲ್ಲ, ಎರಡೆರಡು ಕಡೆ ಎಲೆಕ್ಷನ್ನಿಗೆ ನಿಲ್ಲುತ್ತಿದ್ದಾರೆ. ಆದರೆ, ಒಮ್ಮೆಯೂ ಗೆದ್ದಿಲ್ಲ. ಈ ಬಾರಿ ಮತ್ತೆ ಮತಪರೀಕ್ಷೆಗೆ ನಿಂತಿದ್ದಾರೆ. ಬೆಹ್ರಾಮ್‌ಪುರ್, ಅಸ್ಕಾ ಕ್ಷೇತ್ರ ಇವರ ಹಣೆಬರಹವನ್ನು ನಿರ್ಧರಿಸಲಿರುವ ಎರಡು ಕ್ಷೇತ್ರಗಳು.
ಸುಬುಧಿ ವೃತ್ತಿಯಲ್ಲಿ ಡಾಕ್ಟರ್. ಹೋಮಿಯೋಪತಿ ಇವರಿಗೆ ಚೆನ್ನಾಗಿ ಗೊತ್ತು. ದೇಶದ ಹದಗೆಟ್ಟ ಆರೋಗ್ಯವನ್ನು ಹೇಗೆ ಸಹಜ ಸ್ಥಿತಿಗೆ ತರಬಹುದೆಂಬುದರ ಬಗ್ಗೆಯೂ ನಿರರ್ಗಳ ಮಾತಾಡುತ್ತಾರೆ. ಇದು ಇವರಿಗೆ ಹದಿಮೂರನೇ ಎಲೆಕ್ಷನ್. ಸ್ಪರ್ಧಿಸಿದ ಪ್ರತೀ ಬಾರಿಯೂ ಠೇವಣಿ ಕಳೆದುಕೊಂಡಿದ್ದಾರೆ. ಹಾಗಂತ ಪ್ರಮುಖ ಅಭ್ಯರ್ಥಿಗಳು ಇವರನ್ನು ನೆಗ್ಲೆಕ್ಟ್ ಮಾಡುವ ಹಾಗೂ ಇಲ್ಲ. ಶೇ.6ರಷ್ಟು ಮತಗಳನ್ನು ಅನೇಕ ಸಲ ಪಡೆದಿದ್ದಾರೆ. ಆದರೆ, ಈ ಬಾರಿ ಇವರು 'ನಾನು ಸೋಲುವುದೇ ಇಲ್ಲ' ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಕ್ಷೇತ್ರದ ಜನ ಆಶೀರ್ವದಿಸಿದರೆ ಮುಂದೊಂದು ದಿನ ಖಂಡಿತಾ ಪ್ರಧಾನಿ ಆಗುವೆ ಅಂತಲೂ ಭವಿಷ್ಯ ಸ್ಫೂರ್ತಿಯಲ್ಲಿ ಮಾತಾಡುತ್ತಾರೆ.
'ಅರವಿಂದ ಕೇಜ್ರಿವಾಲ ಹುಟ್ಟುವ ಮೊದಲೇ ನಾನು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದೆ' ಎನ್ನುವ ಡಾ. ಸುಬುಧಿ, ಇಲ್ಲಿಯ ತನಕ ಯಾವುದೇ ಪಕ್ಷವನ್ನು ಸೇರಿದವರಲ್ಲ. ಬೆಂಬಲಿಸಲೂ ಇಲ್ಲ. ಸ್ವಂತದ್ದೊಂದು ಪಕ್ಷವೂ ಇವರಿಗಿಲ್ಲ. ಸದಾ ಪಕ್ಷೇತರ ಅಭ್ಯರ್ಥಿ. ಲೋಕಸಭಾ ಚುನಾವಣೆ ಅಷ್ಟೇ ಇವರ ಟಾರ್ಗೆಟ್ ಅಲ್ಲ. ಒರಿಸ್ಸಾ ವಿಧಾನಸಭೆಗೂ ಸ್ಪರ್ಧಿಸಿದ್ದರಿವರು. 1980ರಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಬಿ.ಜೆ. ಪಟ್ನಾಯಕ್ ವಿರುದ್ಧ ಬೆಗುನಿಯಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಠೇವಣಿಯೂ ಸಾಧ್ಯವಾಗಲಿಲ್ಲವಾದರೂ, ಡಾ. ಸುಬುಧಿ ಇಡೀ ರಾಜ್ಯಕ್ಕಂತೂ ಪರಿಚಿತರಾದರು. ನಂತರ ಇವರು ಕೇವಲ ಲೋಕಸಭಾ ಚುನಾವಣೆಗಷ್ಟೇ ಗಮನ ಕೊಟ್ಟರು.
ಮತ್ತೆ ಡಾ. ಸುಬುಧಿ ದೇಶದ ಮಂದಿಗೆ ಪರಿಚಯವಾಗಿದ್ದು, 1996ರಲ್ಲಿ. ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಬೆಹ್ರಾಮ್‌ಪುರದಲ್ಲಿ ನಿಂತಾಗ, ಅವರಿಗೂ ಸ್ಪರ್ಧೆಯೊಡ್ಡಿದರು. ಈಗಿನ ಸಿಎಂ ನವೀನ್ ಕುಮಾರ್ ಪಟ್ನಾಯಕ್ ತಂದೆ ಹಾಗೂ ಮಾಜಿ ಸಿಎಂ ಬಿಜು ಪಟ್ನಾಯಕ್ ಕೂಡ ಒಂದೊಮ್ಮೆ ಇವರ ಎದುರಾಳಿಯೇ. 'ಈ ದೇಶದಲ್ಲಿ ಭ್ರಷ್ಟಾಚಾರ ನಿಲ್ಲುವವರೆಗೂ ನಾನು ಸ್ಪರ್ಧಿಸುತ್ತಲೇ ಇರುತ್ತೇನೆ' ಎನ್ನುತ್ತಾರೆ ಡಾ. ಸುಬುಧಿ.
'ಯಾವ ಪಕ್ಷವನ್ನೂ ಸೇರದೆ, ಪಕ್ಷೇತರರಾಗಿರುವ ನಿಮಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹೇಗೆ ಸಾಧ್ಯವಾಗುತ್ತದೆ' ಎಂದು ಕೇಳಿದರೆ, ಅದಕ್ಕೂ ಉತ್ತರ ಸಿದ್ಧಪಡಿಸಿಕೊಂಡಿದ್ದಾರೆ ಸುಬುಧಿ. 'ನಾನು ಪ್ರಣಬ್ ಮುಖರ್ಜಿ ಥರ. ಎಲ್ಲ ಪಕ್ಷಗಳನ್ನೂ ಸ್ನೇಹಕ್ಕೆ ತೆಗೆದುಕೊಳ್ಳಬಲ್ಲೆ' ಅಂತಾರೆ.
ಡಾ. ಸುಬುಧಿ ತಮ್ಮ ಎರಡು ಕ್ಷೇತ್ರಕ್ಕೆ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು ಈ ಬಾರಿಯ ವಿಶೇಷ. 60 ವರ್ಷ ದಾಟಿದ ವ್ಯಕ್ತಿಗಳ ಕಲ್ಯಾಣ ಬದುಕಿಗೆ ಇದರಲ್ಲಿ ಒತ್ತು ನೀಡಲಾಗಿದೆ. ಇವರ ಕ್ಯಾಂಪೇನ್ ಸ್ಟೈಲ್ ಕೂಡ ಇವತ್ತಿನ ರಾಜಕಾರಣಿಗಳನ್ನು ಹೋಲುವುದಿಲ್ಲ. ಮನೆ ಮನೆಗೆ ನಡೆದೇ, ಇಲ್ಲವೇ ಸೈಕಲ್‌ನಲ್ಲಿ ಭೇಟಿ ನೀಡುತ್ತಾರೆ. ಇವರೊಂದಿಗೆ ನಾಲ್ಕಾರು ಜನ ಬಿಟ್ಟರೆ ಯಾರೂ ಇರುವುದಿಲ್ಲ. ಒಂದೂ ಜೈಕಾರವಿಲ್ಲ. ಮತದಾನದ ಹಿಂದಿನ ದಿನ ದುಡ್ಡಾಗಲಿ, ಸಾರಾಯಿಯನ್ನಾಗಲಿ ಹಂಚುವವರಲ್ಲ ಸುಬುಧಿ. ಆರಂಭದಲ್ಲಿ ನಾಲ್ಕೈದು ಚುನಾವಣೆ ಬಿಟ್ಟರೆ, ಇವರ ಹೆಂಡತಿ- ಮಕ್ಕಳು ಇವರಿಗೆ ಮತವನ್ನೇ ಹಾಕಲಿಲ್ಲ. 'ಸುಮ್ಮನೆ ಚುನಾವಣೆಗೆ ನಿಂತು, ದುಡ್ಡು- ಸಮಯವನ್ನು ವ್ಯರ್ಥ ಮಾಡ್ತೀರಿ' ಎಂಬ ಪುಕ್ಕಟೆ ಬೈಗುಳ ಇವರಿಗೆ ಪ್ರತೀ ಚುನಾವಣೆಯಲ್ಲೂ ಇದ್ದಿದ್ದೇ. ಚುನಾವಣೆಗೆ ಕೇವಲ ಮಿನಿಮಂ ಅಮೌಂಟನ್ನು ಮೀಸಲಿಡುವ ಇವರು, ಯಾವ ಚುನಾವಣೆಯಲ್ಲೂ ಹಣದ ಕೊರತೆ ಎದುರಿಸಿಲ್ಲ. ಹೋಮಿಯೋಪತಿ ವೈದ್ಯವೃತ್ತಿ ಇವರ ಸಕಲ ರಾಜಕೀಯ ಆಸೆಗಳನ್ನೂ ಈಡೇರಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.