ದೇಶ

ಮೋದಿ ಸಂಧಾನಕಾರರನ್ನು ಕಳುಹಿಸಿಕೊಟ್ಟಿದ್ರು: ಗಿಲಾನಿ

ಮೋದಿ ಸಂಧಾನಕಾರರನ್ನು ಕಳುಹಿಸಿಕೊಟ್ಟಿದ್ರು: ಗಿಲಾನಿ
Published On :

ನವದೆಹಲಿ: ಪ್ರತ್ಯೇಕತಾವಾದಿ ಕಾಶ್ಮೀರಿ ಮುಖಂಡ ಸಯೀದ್ ಅಲಿ ಶಾ ಗಿಲಾನಿ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಶ್ಮೀರ ವಿವಾದ ಪರಿಹಾರಕ್ಕೆ ನೆರವು ಕೋರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರು ಸಂಧಾನಕಾರರನ್ನು ತಮ್ಮ ಬಳಿ ಕಳುಹಿಸಿ ಕೊಟ್ಟಿದ್ದರು ಎಂದು ಹೇಳಿದ್ದಾರೆ. ಗಿಲಾನಿ ಈ ಹೇಳಿಕೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಬಿಜೆಪಿ ಮಾತ್ರ ಗಿಲಾನಿ ಹೇಳಿಕೆಯನ್ನು ತಿರಸ್ಕರಿಸಿದೆ. ಗಿಲಾನಿ ಹೇಳುತ್ತಿರುವುದೆಲ್ಲ ಶುದ್ಧ ಸುಳ್ಳು ಎಂದಿದೆ.

-ಗಿಲಾನಿ ಹೇಳಿದ್ದೇನು?
ಮಾ.22ರಂದು ಮೋದಿ ಸಂಧಾನಕಾರರೆಂದು ಹೇಳಿಕೊಂಡು ಇಬ್ಬರು ಕಾಶ್ಮೀರಿ ಪಂಡಿತರು ತಮ್ಮನ್ನು ಭೇಟಿಯಾಗಿದ್ದರು. ಒಂದು ವೇಳೆ ಮೋದಿ ಅವರಿಗೆ ಈ ವಿಚಾರದಲ್ಲಿ ಬೆಂಬಲ ಘೋಷಿಸಿದರೆ ಅವರ ಜತೆ ನೇರ ಅಥವಾ ಪರೋಕ್ಷ ಮಾತುಕತೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ನಾನು ಆ ಆಹ್ವಾನವನ್ನು ತಿರಸ್ಕರಿಸಿದೆ. ಗುಜರಾತ್ ಗಲಭೆಗೆ ಕಾರಣವಾದ ವ್ಯಕ್ತಿ ಜತೆ ನಾನು ಹೇಗೆ ಮಾತುಕತೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾಗಿ ಗಿಲಾನಿ ಹೇಳಿದ್ದಾರೆ. ಇದಲ್ಲದೆ, ಇದೇ ರೀತಿ ಇತರೆ ಪ್ರತ್ಯೇಕವಾದಿ ಮುಖಂಡರ ಜತೆಗೂ ಮೋದಿ ಸಂಧಾನಕಾರರು ಮಾತುಕತೆ ನಡೆಸಿದ್ದಾರೆ ಎಂದೂ ಹೇಳಿದ್ದಾರೆ ಗಿಲಾನಿ.

-ಕ್ಷಮೆ ಕೇಳಲಿ: ಬಿಜೆಪಿ
ಗಿಲಾನಿ ಹೇಳಿಕೆಯನ್ನು ಬಿಜೆಪಿ ಸುಳ್ಳಿನ ಕಂತೆ ಎಂದಿದೆ. ಈ ಹೇಳಿಕೆಗೆ ಸಂಬಂಧಿಸಿ ಗಿಲಾನಿ ಕ್ಷಮೆ ಕೋರಬೇಕು ಎಂದು ಹೇಳಿದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಚರ್ಚಿಸಲು ಮೋದಿ ಯಾವುದೇ ಪ್ರತಿನಿಧಿಗಳನ್ನು ಗಿಲಾನಿ ಬಳಿ ಕಳುಹಿಸಿಕೊಟ್ಟಿಲ್ಲ. ಗಿಲಾನಿ ಹೇಳಿಕೆ ದುರುದ್ದೇಶದಿಂದ ಕೂಡಿದ ಸುಳ್ಳಿನ ಕಂತೆ. ಕಾಶ್ಮೀರ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಮಾತುಕತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹೇಳಿಕೆಗೆ ಹುರ್ರಿಯತ್ ಖಂಡನೆ
ಶ್ರೀನಗರ:
ಗಿಲಾನಿ ಹೇಳಿಕೆಗೆ ಹುರ್ರಿಯತ್ ಕಾನ್ಫರೆನ್ಸ್‌ನ ಪ್ರಗತಿಪರ ನಾಯಕ ಮಿರ್ವೇಜ್ ಉಮೆರ್ ಫಾರೂಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಲ್ಲಿ ಗೊಂದಲ ಮೂಡಿಸಲು ಗಿಲಾನಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಮಿರ್ವೇಜ್ ಆರೋಪಿಸಿದ್ದಾರೆ. ಇದೊಂದು ಆಧಾರರಹಿತ ಮತ್ತು ಸುಳ್ಳು ಆರೋಪವಾಗಿದೆ. ಹುರ್ರಿಯತ್ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯಬಯಸುವ ಜನರನ್ನು ತಪ್ಪುದಾರಿಗೆಳೆಯಲು ಇಂಥ ಹೇಳಿಕೆ ನೀಡಲಾಗಿದೆ. ನಾವು ಮೋದಿ ಅವರಾಗಲಿ ಅಥವಾ ಅವರ ಸಂಧಾನಕಾರರನ್ನಾಗಲಿ ಭೇಟಿಯಾಗಿಯೇ ಇಲ್ಲ ಎಂದಿದ್ದಾರೆ ಮಿರ್ವೇಜ್.

ವಿವರಣೆ ಕೇಳಿದ ಕಾಂಗ್ರೆಸ್
ಗಿಲಾನಿ ಹೇಳಿಕೆಗೆ ಸಂಬಂಧಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿವರಣೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಗಿಲಾನಿ ಅವರು ಸಂಧಾನಕಾರರ ಕುರಿತು ವಿವರಣೆ ನೀಡಲು ನಿರಾಕರಸಿದ್ದಾರೆ. ಹಾಗಾಗಿ ಈ ವಿಚಾರದ ಕುರಿತು ಇನ್ನು ವಿವರಣೆ ನೀಡುವ ಹೊಣೆ ಮೋದಿ ಮೇಲಿದೆ ಎಂದು ಕಾಂಗ್ರೆಸ್ ವಕ್ತಾರ ಮೀಮ್ ಅಫ್ಜಲ್ ಹೇಳಿದ್ದಾರೆ.

ಮೋದಿ ಅವರು ಪ್ರತ್ಯೇಕವಾದಿ ಕಾಶ್ಮೀರಿ ನಾಯಕರ ಜತೆ ಮಾತುಕತೆಗೆ ಸಂಧಾನಕಾರರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಗಿಲಾನಿ ಹೇಳಿದ್ದಾರೆ. ಹಾಗಿದ್ದರೆ ಸುಳ್ಳು ಹೇಳುತ್ತಿರುವುದು ಯಾರು? ಮೋದಿಯೇ ಅಥವಾ ಗಿಲಾನಿ ಅವರೇ?
-ಒಮರ್ ಅಬ್ದುಲ್ಲಾ
 ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.