ದ್ವೇಷದ ವೇಷ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ್ವೇಷದ ಭಾಷಣಕ್ಕೇನು ಬರವಿಲ್ಲ! ಬಹಳ ಉತ್ಸುಕತೆ ಮತ್ತು ನಿರ್ಭಿಡೆಯಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ರಾಜಕಾರಣಿಗಳು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಲೇ ಇವೆ, ಚುನಾವಣಾ ಆಯೋಗ ವಾಗ್ದಂಡನೆ, ನಿಷೇಧದ ಚಾಟಿ ಬೀಸುತ್ತಲೇ ಇದೆ. ಇಷ್ಟಾದರೂ ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಕೆಂಡದ ಮಳೆಗರೆಯುವುದನ್ನು ನಿಲ್ಲಿಸುವುದಿಲ್ಲ! ದ್ವೇಷದ ಭಾಷಣ ಮಾಡುವುದರಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಕೆಲವರು ಹೇಳಿಕೆ ನೀಡಿದ ಬಳಿಕ ಕ್ಷಮೆಯಾಸಿದರೆ, ಹಲವರು ನಾವು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ. ಅಷ್ಟಕ್ಕೂ ನಮ್ಮ ರಾಜಕಾರಣಿಗಳಿಗೇಕೆ ದ್ವೇಷದ ಭಾಷಣ ಇಷ್ಟ? ಇದಕ್ಕೆ ಉತ್ತರ ಇತಿಹಾಸದ ಪುಟಗಳಲ್ಲಿದೆ!
ವಿಕ್ಟೋರಿಯನ್ ಇಂಗ್ಲೆಂಡ್ನಲ್ಲಿ ಕೆಲ ಮಹಿಳೆಯರು ಎಲ್ಲಿಗೆ ಹೋಗಬೇಕಿದ್ದರೂ ಜತೆಗಾರ್ತಿಯೊಬ್ಬಳನ್ನು ಕರೆದೊಯ್ಯುತ್ತಿದ್ದರು. ಈ ಜತೆಗಾರ್ತಿಯರು ಬಾಯ್ಬಿಟ್ಟರೆ ಬರೀ ಮತ್ಸರದ ಮಾತುಗಳೇ ಹೊರಬರುತ್ತಿದ್ದವಂತೆ! ಅಷ್ಟಕ್ಕೂ ಇಂಥ ಮಹಿಳೆಯನ್ನೇಕೆ ಜತೆಗೆ ಕರೆದೊಯ್ಯಬೇಕು? ವಿರೋಧಿಗಳನ್ನು ಸುಮ್ಮನಾಗಿಸಲು. ಈ ದೊಡ್ಡ ಬಾಯಿ ಮಹಿಳೆಯರ ಬೈಗುಳ ತಾಳಲಾರದೆ ವೈರಿಗಳು ಗುಂಪಿನಿಂದ ದೂರವಿರುತ್ತಿದ್ದರಂತೆ. ಈಗಿನ ರಾಜಕಾರಣಿಗಳು ಕೂಡ ಇದೇ ಕಾರಣಕ್ಕೆ ದ್ವೇಷದ ಭಾಷಣ ಮಾಡುತ್ತಾರಾ? ಹಾಗೇನೂ ಇಲ್ಲ. ಆದರೆ, ಹೇಳಿಕೆಗಳು ಮುಂದುವರಿಯುತ್ತಲೇ ಇವೆ. ಕಾರಣ ಮಾತ್ರ ಬದಲಾಗಿದೆ ಅಷ್ಟೆ. ಒಂದಂತು ನಿಜ. ಬಹುತೇಕ ಪಕ್ಷಗಳಲ್ಲಿ ಒಂದಷ್ಟು ಮಂದಿ ಬಾಯ್ಬಡುಕರು ಇದ್ದೇ ಇರುತ್ತಾರೆ. ತಮ್ಮ ಮುಖಂಡನ ಮೇಲೆ ಪ್ರತಿ ಪಕ್ಷ ಮುಖಂಡರು ಆರೋಪ ಮಾಡಿದಾಗ ಪ್ರತ್ಯಾರೋಪ ಮಾಡಲು ಇವರು ಸದಾ ಸಿದ್ಧರಿರುತ್ತಾರೆ.
ಇತ್ತೀಚಿನ ದ್ವೇಷದ ಭಾಷಣ
ಗಿರಿರಾಜ್ ಸಿಂಗ್
ಮೋದಿ ಅವರು ಪ್ರಧಾನಿಯಾಗುವುದನ್ನು ತಡೆಯಲು ಪ್ರಯತ್ನಿಸುವವರಿಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಜಾಗವಿಲ್ಲ. ಅವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ.
ಅಮಿತ್ ಶಾ
ಮುಜಾಫರನಗರದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಕತ್ತಿ, ಬಾಣ ಕೈಗೆತ್ತಿಕೊಳ್ಳಬೇಕಾಗಿಲ್ಲ. ಇವಿಎಂ ಗುಂಡಿ ಒತ್ತಿದರೆ ಸಾಕು.
ಹೇಳಲು ಏನೂ ಇಲ್ಲವಾದಾಗ
10 ವರ್ಷದ ಆಡಳಿತದಲ್ಲಿ ಯುಪಿಎ ಸರ್ಕಾರದ ಸಾಧನೆಗಳಿಗಿಂತ ಹಗರಣಗಳೇ ಹೆಚ್ಚು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹೊಗಳಿಕೊಳ್ಳಲು ಏನೂ ಇಲ್ಲ. ರಾಹುಲ್ ಗಾಂಧಿಯ 'ಮಹಿಳಾ ಸಬಲೀಕರಣ ಮತ್ತು ಆರ್.ಟಿ.ಐ' ಭಾಷಣಗಳು ಜನರ ಮೇಲೆ ಏನೂ ಪ್ರಯೋಜನ ಬೀರುತ್ತಿಲ್ಲ. ಆದ್ದರಿಂದ ವಿರೋಧ ಪಕ್ಷದ ದುರ್ಬಲತೆಯನ್ನು ದೊಡ್ಡದಾಗಿ ತೋರಿಸಿದಲ್ಲಿ, ತಮ್ಮ ಪಾಪ ಮುಚ್ಚುತ್ತದೆಂಬ ನಂಬಿಕೆ. ಹಾಗಾಗಿ ಮೋದಿಯ ಕೋಮುವಾದಿ ಚಿತ್ರಣ ಮತ್ತು 2002ರ ಗುಜರಾತ್ನ ಗೋಧ್ರಾ ಹತ್ಯಾಕಾಂಡದ ಬಗ್ಗೆ ಚೀರಾಡುತ್ತಿದೆ ಕಾಂಗ್ರೆಸ್ ಪಡೆ. ಅದೇ ಬಿಜೆಪಿ ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ ಎಂಬ ಸಂದೇಶ ಸಾರುತ್ತಿದೆ. ನರೇಂದ್ರ ಮೋದಿ ಅವರನ್ನು ಪಾರಸ ಮಣಿಯೆಂಬಂತೆ ಬಿಂಬಿಸುತ್ತಿದೆ. ಭ್ರಷ್ಟಾಚಾರದಿಂದ ಹಿಡಿದು ಮಹಿಳಾ ಸುರಕ್ಷತೆವರೆಗೆ ಎಲ್ಲಾ ಸಮಸ್ಯೆಗೂ ಮೋದಿಯೇ ಉತ್ತರ! ಪಕ್ಷದ ಪ್ರಣಾಳಿಕೆ ಕೂಡಾ ಕಳೆದ ಚುನಾವಣೆಗಳಲ್ಲಿ ಬಿಡುಗಡೆಯಾದ ಪ್ರಣಾಳಿಕೆಗಿಂತ ಭಿನ್ನವಾಗಿಲ್ಲ. ಮೋದಿ ಮೋದಿ ಮೋದಿ... ಅದು ಬಿಟ್ಟರೆ ಬಿಜೆಪಿ ಕೈಯಲ್ಲಿ ಬೇರಿನ್ನೇನೂ ಅಸ್ತ್ರ ಇಲ್ಲ.
ತಮ್ಮನ್ನು ಯಾರೂ ಪ್ರಶ್ನಿಸದಿದ್ದಾಗ
ರಾಜಕಾರಣಿಗಳು ಹಿಂದಿನಿಂದಲೂ ಪ್ರಾದೇಶಿಕ ಸಮಸ್ಯೆಗಳ ಮೂಲಕವೇ ಜನರನ್ನು ತಲುಪುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರತಿ ಚುನಾವಣೆಯಲ್ಲೂ ಈ ತಂತ್ರಕ್ಕೆ ಜನ ಮರುಳಾಗುವುದಿಲ್ಲ. ಕಳೆದೈದು ದಶಕಗಳಿಂದ ಗೋರಖ್ಪುರದಲ್ಲಿ ನೂರಾರು ಮಕ್ಕಳು ನಿಗೂಢ ಕಾಯಿಲೆಯೊಂದಕ್ಕೆ ಬಲಿಯಾಗುತ್ತಿದ್ದಾರೆ. ಇದು ಜಾಪನೀಸ್ ಎನ್ಸೆಫಲಿಟಿಸ್ ರೋಗದ ಇನ್ನೊಂದು ಪ್ರಕಾರವಿರಬಹುದೆಂದು ಊಹಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಬುಂದೇಲ್ಖಂಡ ಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ವಿದರ್ಭದ ರೈತರು 1990ರಿಂದ ಪ್ರತಿ ವರ್ಷ ಆತ್ಮಹತ್ಯೆ ಮಾಡುತ್ತಲೇ ಇದ್ದಾರೆ. ಇದನ್ನು ಮೊಟ್ಟ ಮೊದಲ ಬಾರಿಗೆ ಎಲ್ಲರ ಗಮನಕ್ಕೆ ತಂದಿದ್ದು ಪತ್ರಕರ್ತ ಪಿ. ಸಾಯಿನಾಥ್. ಒಡಿಶಾದ ಕಾಲಹಂಡಿ- ಬೊಲಂಗಿರ್- ಕೋರಾಪುಟ್ ಪ್ರದೇಶದಲ್ಲಿ ಹಸಿವಿನಿಂದ ಜನರು ಸಾಯುತ್ತಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿಗಾಗಿ ಕಾದಾಟ ನಡೆಯುತ್ತಿದೆ. ರಾಸಾಯನಿಕ ಗೊಬ್ಬರಗಳ ಅತಿಬಳಕೆಯಿಂದ ಪಂಜಾಬ್ನ ಮಾಲ್ವಾ ಪ್ರದೇಶದಲ್ಲಿ ಕ್ಯಾನ್ಸರ್ ಜನರನ್ನು ಭಕ್ಷಿಸುತ್ತಿದೆ. ದಶಕಗಳು ಕಳೆದರೂ ಈ ಸಮಸ್ಯೆಗಳು ಹೇಗಿದ್ದವೋ ಹಾಗೇ ಇವೆ. ರಾಜಕಾರಣಿಗಳು ಈ ವಿಚಾರಗಳನ್ನು ತಪ್ಪಿ ಕೂಡ ಚುನಾವಣಾ ಭಾಷಣಗಳಲ್ಲಿ ಉಲ್ಲೇಖಿಸುವುದಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡದ ರಾಜಕಾರಣಿಗಳು ಮತದಾರರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಜನರ ಮನಸ್ಸು ಗೆಲ್ಲಲು ಏನಾದರೂ ಮಾರ್ಗ ಕಂಡುಕೊಳ್ಳಲೇಬೇಕಲ್ಲ... ಇದೇ ಕಾರಣಕ್ಕೆ ಬಹುತೇಕ ಕಡೆ ಸ್ಥಳೀಯ ಅಭ್ಯರ್ಥಿಗಳಿಗಿಂತ ಹೊರಗಿನವರನ್ನು ಚುನಾವಣೆಯಲ್ಲಿ ನಿಲ್ಲಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಅಚ್ಚರಿ ಮೂಡಿಸಲಾಗದಿದ್ದರೆ ಆಘಾತ ನೀಡಿ!
ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ. ಜನರ ಪ್ರಶ್ನೆಗೆ ಉತ್ತರಿಸಲೂ ಆಗುವುದಿಲ್ಲ. ಹಾಗಿದ್ದಾಗ ಮತದಾರರ ಗಮನವನ್ನು ಸೆಳೆಯುವುದು ಹೇಗೆ? ಜನರನ್ನು ಆಕರ್ಷಿಸಲು ವಿಶೇಷ ಕೆಲಸವೇನೂ ಮಾಡಿಲ್ಲ. ಆದ್ದರಿಂದ ದ್ವೇಷದ ಭಾಷಣದ ಮೂಲಕ ಆಘಾತ ನೀಡಿ ಜನರ ಗಮನ ಸೆಳೆಯುವ ಯತ್ನ ಮಾಡುತ್ತಿದ್ದಾರೆ ರಾಜಕಾರಣಿಗಳು. ಬರೀ ಭಾಷಣಗಳಲ್ಲಿ ಬಳಸುವ ಪದಗಳನ್ನು ಬದಲಾಯಿಸಿದರೆ, ರಾಜಕೀಯವೇ ಬದಲಾಗುವುದಿಲ್ಲ. ಭಾಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಎಲ್ಲಾ ಪ್ರಯತ್ನ ನಡೆಯುತ್ತಿವೆ. ಆದರೆ ಸಮಯ ಕೈ ಮೀರುತ್ತಿದೆ...
ಹಿಂದೂಗಳಿರುವ ಪ್ರದೇಶದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಗೆ ಅವಕಾಶ ನೀಡಬೇಡಿ.
- ಪ್ರವೀಣ್ ತೊಗಾಡಿಯಾ, ವಿಎಚ್ಪಿ ಮುಖಂಡ
ಕಾರ್ಗಿಲ್ ಯುದ್ಧ ಗೆದ್ದುಕೊಟ್ಟದ್ದು ಹಿಂದೂಗಳಲ್ಲ. ಮುಸ್ಲಿಂ ಯೋಧ!
- ಅಜಂಖಾನ್, ಎಸ್ಪಿ ಮುಖಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


