ಯಾರೀ ಇಮ್ರಾನ್ ಮಸೂದ್; ಈ ಪರಿ ಅಸಹನೆಗೇನು ಕಾರಣ?

ಮೋದಿಯನ್ನು ತುಂಡರಿಸುತ್ತೇನೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿರುವ ಉತ್ತರಪ್ರದೇಶದ ಸಹರನ್ಪುರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಇಮ್ರಾನ್ ಮಸೂದ್ ಈಗ ಜೈಲು ಸೇರಿದ್ದಾನೆ. ಶನಿವಾರ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ 14 ದಿನಗಳು ಜೈಲುವಾಸ ಶಿಕ್ಷೆ ವಿಧಿಸಿದೆ. ಇಮ್ರಾನ್ನ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆಯಾದರೂ, ಆತನ ವಿರುದ್ಧ ಕ್ರಮ ಕೈಗೊಳ್ಳುತ್ತದಾ ಎನ್ನುವ ಪ್ರಶ್ನೆಗೆ ಬಗ್ಗೆ ಮಾತ್ರ ಅದು ತುಟಿ ಬಿಚ್ಚುತ್ತಿಲ್ಲ. ಸಹರನ್ಪುರಕ್ಕೆ ಪ್ರಚಾರ ನಿಮಿತ್ತ ತೆರಳಿದ್ದ ರಾಹುಲ್ ಗಾಂಧಿಯವರೂ ಇಮ್ರಾನ್ ಮಾತನ್ನು ಖಂಡಿಸುವ ನೆಪದಲ್ಲಿ, ಬಿಜೆಪಿಯನ್ನೇ ಕುಟುಕಿದ್ದಾರೆ. ಆದರೆ ಇಮ್ರಾನ್ನನ್ನು ತೆಗೆದುಹಾಕುವ ಮಾತನಾಡುತ್ತಿಲ್ಲ. ಹಾಗಿದ್ದರೆ ಇಮ್ರಾನ್ ಮಸೂದ್ ಸಹರನ್ಪುರದಲ್ಲಿ ಅಷ್ಟು ಬಿಗಿ ಹಿಡಿತ ಹೊಂದಿರುವ ವ್ಯಕ್ತಿಯೇ?
ಇಮ್ರಾನ್ ಅಷ್ಟೇ ಅಲ್ಲ, ಸಹರನ್ಪುರದಲ್ಲಿ ಇಮ್ರಾನ್ ಕುಟುಂಬದ್ದೇ ಮೊದಲಿನಿಂದಲೂ ಕಾರುಬಾರು. ಇಮ್ರಾನ್ನ ಚಿಕ್ಕಪ್ಪ ರಶೀದ್ ಮಸೂದ್ ಆ ಕ್ಷೇತ್ರದಿಂದ ಸುಮಾರು 5 ಬಾರಿ ಲೋಕಸಭೆಗೆ ಆಯ್ಕೆಯಾದವರು. ವಿ.ಪಿ. ಸಿಂಗ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಅವರು ಮೆಡಿಕಲ್ ಅಡ್ಮಿಶನ್ ಹಗರಣದಲ್ಲಿ ಸಿಲುಕಿ ಈಗ ಜೈಲಲ್ಲಿದ್ದಾರೆ.
ರಶೀದ್ ಯಾವ ಪಕ್ಷದಲ್ಲೇ ಇದ್ದರೂ, ಸಹರನ್ಪುರ ಕ್ಷೇತ್ರದ ಸುಮಾರು 41.5 ಪ್ರತಿಶತ ಮುಸ್ಲಿಂ ಮತಗಳು ಮಸೂದ್ ಕುಟುಂಬದ ಹಿಡಿತದಲ್ಲೇ ಇವೆ.
ಆದರೆ ಸಹರನ್ಪುರದಲ್ಲಿ ಹಿಂದೆಂದೂ ಈಗಿನಂಥ ಧ್ರುವೀಕೃತ ಮತ್ತು ವಿಷಮ ಚುನಾವಣೆ ಎದುರಾಗಿರಲಿಲ್ಲ ಎಂದು ಅಲ್ಲಿನವರು ಹೇಳುತ್ತಿದ್ದಾರೆ. ರಶೀದ್ ಮಸೂದ್ ಮೊದಲಿನಿಂದಲೂ ತಮ್ಮನ್ನು 'ಜಾತ್ಯತೀತ'ರೆಂದು ಬಿಂಬಿಸಿಕೊಂಡು ಬಂದು, ಅದರಿಂದ ಲಾಭಪಡೆದವರು. ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಸಹಾಯಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ಮುಸ್ಲಿಂಮೇತರ ಅಭ್ಯರ್ಥಿಗಳಿಗೂ ವಿಧಾನಸಭಾ ಚುನಾವಣೆಗಳಲ್ಲಿ ಅನೇಕ ಬಾರಿ ಬೆಂಬಲ ನೀಡಿದ್ದಾರೆ. ಅಂದರೆ ಸಹರನ್ಪುರ ರಶೀದ್ ಮಸೂದ್ ಹಿಡಿತದಲ್ಲಿದ್ದರೂ, ಕಳೆದ 3 ದಶಗಕಗಳಲ್ಲಿ 5 ಬಾರಿ ಮುಸ್ಲಿಮೇತರ ನಾಯಕರು ಅಲ್ಲಿನ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದಾರೆ.
ಆದರೆ ಈ ಬಾರಿ ಮೋದಿ ಅಲೆಯಿಂದಾಗಿ ಅಲ್ಲಿನ ಚುನಾವಣಾ ರಚನೆ ನಾಟಕೀಯವಾಗಿ ಬದಲಾಗಿದೆ. ಈಗ ಸಹರನ್ಪುರದಲ್ಲಿ ಬಿಜೆಪಿ ಮೈಜಾಡಿಸಿಕೊಂಡು ಎದ್ದು ನಿಂತಿದೆ. ಕಳೆದ ಬಾರಿ ಬಿಜೆಪಿ ಅಲ್ಲಿ ಗೆಲುವು ಸಾಧಿಸಿದ್ದು 1996ರಲ್ಲಿ! ಹಿಂದು ಮತಗಳು ಜಾಗೃತಗೊಂಡಿರುವುದನ್ನು ನೋಡಿ ಮತ್ತು ಮುಸ್ಲಿಂ ಮತಗಳು ಎಲ್ಲಿ ಬಿಜೆಪಿಗೆ ಹರಿಯುತ್ತವೋ ಎಂಬ ಭಯ ಮಸೂದ್ ಕುಟುಂಬಕ್ಕೆ ಶುರುವಾಗಿದೆ. ಸಾಲದ್ದಕ್ಕೆ ಈ ಬಾರಿ, ರಶೀದ್ರ ಮಗ ಶಹಜಾನ್ ತಮ್ಮ ಸೋದರ ಸಂಬಂಧಿಯ(ಇಮ್ರಾನ್ ಮಸೂದ್) ವಿರುದ್ಧ ಸಮಾಜವಾದಿ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ! ಇದರಿಂದಾಗಿ ಮುಸ್ಲಿಂ ಮತಗಳು ಮೊದಲಿನಿಂತೆ ಒಂದೇ ಕಡೆ ಜಮಾವಣೆಯಾಗುತ್ತವೆ ಎಂದು ಹೇಳುವುದಕ್ಕಾಗುತ್ತಿಲ್ಲ. ನಿಜಕ್ಕೂ ಸಹರನಪುರ ಕ್ಷೇತ್ರ ಗಂಭೀರ ಸ್ವರೂಪ ಪಡೆಯತೊಡಗಿದೆ. ಹಾಗಾಗೇ ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು, ಒಲಿಸಿಕೊಳ್ಳಲು ಯೇನಕೇನ ಕಚ್ಚಾಡುತ್ತಿದ್ದಾರೆ ಶಹಜಾನ್ ಮತ್ತು ಇಮ್ರಾನ್. ಇಮ್ರಾನ್ಗೆ ಮೋದಿ ಮೂದಲಿಕೆ ಅಸ್ತ್ರವಾಗಿ ಕಂಡದ್ದು ಈ ಕಾರಣಕ್ಕೂ ಇರಬಹುದು. ನರೇಂದ್ರ ಮೋದಿಯವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ವಿಲನ್ ಮಾಡಿದಷ್ಟೂ ಮತಗಳ ಸೆಳೆತ ತನ್ನತ್ತ ಎಂಬ ನಂಬಿಕೆ.
ಹಾಗಂತ ಇಮ್ರಾನ್ ಇದೇ ಮೊದಲಿಗೆ ಇಂಥ ವಿವಾದ ಹುಟ್ಟುಹಾಕಿದ್ದಾನೆ ಎಂದೇನೂ ಅಲ್ಲ. ಆತನ ವಿರುದ್ಧ ಫೋರ್ಜರಿ ಮತ್ತು ಶಾಂತಿ ಭಂಗಮಾಡಲು ಪ್ರಚೋದನಕಾರಿ ವರ್ತನೆ ತೋರಿದ ಕಾರಣವನ್ನೂ ಸೇರಿ ಒಟ್ಟು 5 ಕೇಸುಗಳು ಬಾಕಿ ಉಳಿದಿವೆ.
ಬೆಲೆಬಾಳುವ ಸ್ವತ್ತಿಗಾಗಿ ಮೋಸ(ಸೆಕ್ಷನ್ 420), ಫೋರ್ಜರಿ (ಸೆಕ್ಷನ್ 467), ವಂಚನೆ(ಸೆಕ್ಷನ್ 468) ಮತ್ತು ಸಾರ್ವಜನಿಕ ಸೇವಕನ ಮೇಲೆ ದಾಳಿ (ಸೆಕ್ಷನ್ 332)...ಇವಿಷ್ಟು ಮಸೂದ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖವಾಗಿರುವ ಕೇಸುಗಳು!
43 ವರ್ಷದ ಮಸೂದ್ ಓದಿದ್ದು ಹತ್ತನೇ ತರಗತಿಯವರೆಗಷ್ಟೆ. ಹಣಕಾಸಿನ ವಿಷಯದಲ್ಲೂ ಗಟ್ಟಿಗನಾಗಿರುವಂತೆ ತೋರುತ್ತದೆ. ಅಫಿಡವಿಟ್ನಲ್ಲಿ ತನ್ನ ಚರ ಮತ್ತು ಸ್ಥಿರಾಸ್ತಿಯ ಮೌಲ್ಯವನ್ನು 2.14 ಕೋಟಿ ರುಪಾಯಿ ಎಂದು ಘೋಷಿಸಿರುವ ಮಸೂದ್ 2007-08ರಿಂದ ತೆರಿಗೆ ವಾಪಸಾತಿಗೆ ಅರ್ಜಿ ಸಲ್ಲಿಸಿಲ್ಲವಂತೆ. ಆತನ ಪತ್ನಿ ಸಾಯ್ಮಾ ಆಸ್ತಿ ರು. 85 ಲಕ್ಷವಂತೆ. ಇದಷ್ಟೇ ಅಲ್ಲದೆ ಒಂದು ಎಸ್ಯುವಿ ಕಾರ್, ಒಂದು ಸ್ಕಾರ್ಪಿಯೋ ಕಾರ್ ಕೂಡ ಮಸೂದ್ನ ಬಳಿ ಇವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


