ದೇಶ

ಗುಜರಾತ್ ಪೊಲೀಸರೇ ರ್ಯಾಲಿಗೆ ಅನುಮತಿ ಬೇಡ ಎಂದಿದ್ದರು

ಗುಜರಾತ್ ಪೊಲೀಸರೇ ರ್ಯಾಲಿಗೆ ಅನುಮತಿ ಬೇಡ ಎಂದಿದ್ದರು
Published On :

ನವದೆಹಲಿ: 'ಗುಜರಾತ್ ಪೊಲೀಸರು ವಾರಾಣಸಿಯ ಬೇನಿಯಾಬಾಗ್‌ನಲ್ಲಿ ರ್ಯಾಲಿ ನಡೆಸುವುದು ಬೇಡ. ಇದರಿಂದ ನರೇಂದ್ರ ಮೋದಿಯವರ ಭದ್ರತೆಗೆ ಆತಂಕ ಉಂಟಾಗಬಹುದು. ಈ ಕಾರಣದಿಂದ ಜಿಲ್ಲಾಡಳಿತ ರ್ಯಾಲಿಗೆ ಅನುಮತಿ ನೀಡಿರಲಿಲ್ಲ.'
- ಹೀಗೆಂದು ವಾರಾಣಸಿ ಜಿಲ್ಲಾಡಳಿತ ಕೈಗೊಂಡ ವಿವಾದಾತ್ಮಕ ನಿರ್ಧಾರದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಸ್ಪಷ್ಟನೆ ನೀಡಿದೆ. ಈ ಮೂಲಕ ರ್ಯಾಲಿಗೆ ಅನುಮತಿ ನಿರಾಕರಣೆ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.
ನರೇಂದ್ರ ಮೋದಿಯರ ಭದ್ರತಾ ತಂಡದ ಸದಸ್ಯರಾಗಿದ್ದ ಗುಜರಾತ್ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಸ್ಥಳದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಆ ಸ್ಥಳದಲ್ಲಿ ಅತಿಗಣ್ಯ ವ್ಯಕ್ತಿಗಳು ಇಳಿಯಲು ಸೂಕ್ತವಲ್ಲ ಎಂದು ತಿಳಿಸಿದ್ದರು ಎಂದು ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ ಶುಕ್ರವಾರ ತಿಳಿಸಿದ್ದಾರೆ.
ಶೀಘ್ರ ನಿರ್ಧಾರ ಕೈಗೊಳ್ಳಬೇಕಾಗಿತ್ತು.  ಮೋದಿ ರ್ಯಾಲಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಬೇಕಾಗಿತ್ತು ಎಂದು ಬ್ರಹ್ಮ ವಿಷಾದಿಸಿದ್ದಾರೆ.
ವಾರಾಣಸಿಗೆ ವಿಶೇಷ ವೀಕ್ಷಕ: ಮೇ 12ರಂದು ವಾರಾಣಸಿಯಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ ಆಯೋಗ ವಿಶೇಷ ವೀಕ್ಷಕರೊಬ್ಬರನ್ನು ಕಳುಹಿಸಿಕೊಟ್ಟಿದೆ. ರ್ಯಾಲಿ ವಿವಾದದ ಹಿನ್ನೆಲೆಯಲ್ಲಿ ಆಯೋಗ ಈ ನಿರ್ಧಾರ ಕೈಗೊಂಡಿದೆ. ತಮಿಳುನಾಡಿನ ಹಿರಿಯ ಐಎಎಸ್ ಅಧಿಕಾರಿ ಪ್ರವೀಣ್‌ಕುಮಾರ್ ವಿಕ್ಷರಾಗಿ ನೇಮಕಗೊಂಡ ಅಧಿಕಾರಿ.
ಬಿಜೆಪಿ ತಿರಸ್ಕಾರ: ಭದ್ರತಾ ಕಾರಣಗಳಿಗೆ ಮೋದಿ ರ್ಯಾಲಿಗೆ ಅನುಮತಿ ನೀಡಲಾಯಿತು ಎಂಬ ಕೇಂದ್ರ ಚುನಾವಣಾ ಆಯೋಗದ ವಾದವನ್ನು ಬಿಜೆಪಿ ತಿರಸ್ಕರಿಸಿದೆ. ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿಗಿಂತ ಮೇಲಿದ್ದಾರೆ. ಅವರಿಗೆ ಪ್ರಚಾರಕ್ಕೆ ಅನುಮತಿ ನೀಡುವುದಾದರೆ ಪಕ್ಷದ ನಾಯಕ ಮೋದಿಗೆ ಏಕೆ ಇಲ್ಲ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಆಯೋಗ ಕೂಡಲೇ ಕ್ರಮ ಕೈಗೊಂಡಿದ್ದರೆ ಗುರುವಾರದಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.