ಆಪ್‌ಗೆ ಆಪತ್ಕಾಲ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಆಪ್ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಇನ್ನಷ್ಟು ಬಾರಿ ಕಪಾಳಕ್ಕೆ ಇಕ್ಕಿಸಿಕೊಂಡಿದ್ದರೆ ಅಷ್ಟೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತಿದ್ದರೇ?
ಹಾಗೊಂದು ಅಣಕ ಈಗ ಹುಟ್ಟಿಕೊಂಡಿದೆ. ಪ್ರಚಾರಕ್ಕೆ ಹೋದ ನಾಲ್ಕು ಸ್ಥಳಗಳಲ್ಲಿ ಕೇಜ್ರಿವಾಲ್ ಏಟು ತಿಂದಿದ್ದಾರೆ. ಪಕ್ಷ ಗೆದ್ದಿರುವುದೂ ನಾಲ್ಕೇ ಸ್ಥಾನಗಳು! ಭಾರಿ ನಿರೀಕ್ಷೆ ಮೂಡಿಸಿದ್ದ ದೆಹಲಿಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ. ಆದರೆ, ಮತ ಗಳಿಕೆ ಪ್ರಮಾಣವನ್ನು ಮಾತ್ರ ಏರಿಸಿಕೊಂಡಿದೆ.
ದೆಹಲಿಯ ಎಲ್ಲಾ ಏಳು ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಆಪ್ ಎಲ್ಲಾ ಏಳು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನ ಗಳಿಸಿ ಕಾಂಗ್ರೆಸ್ ನೆರವಿನೊಂದಿಗೆ ಅಧಿಕಾರ ಗ್ರಹಿಸಿದ್ದ ಆಪ್ ಲೋಕಸಭೆಯಲ್ಲಿ ಎಲ್ಲಾ ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿತ್ತು. ಮಾಧ್ಯಮ ಸಮೀಕ್ಷೆಗಳು ಕೂಡಾ ಆಪ್ 3ರಿಂದ 4 ಸ್ಥಾನ ಗಳಿಸುತ್ತದೆಂದು ಭವಿಷ್ಯ ನುಡಿದಿದ್ದವು.
49 ದಿನ ಆಡಳಿತ ನಡೆಸಿದ್ದ ಅರವಿಂದ ಕೇಜ್ರಿವಾಲ್ ಅಧಿಕಾರ ತ್ಯಾಗ ಮಾಡಿದ್ದರ ಬಗ್ಗೆ ಮತದಾರರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ತನಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ವಾರಾಣಸಿಯಲ್ಲಿ ಅವರು ಕದನಕ್ಕೆ ನಿಂತು ಸೋಲನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ದೆಹಲಿ ಜನತೆ ಜಾಣ್ಮೆ ಫಲಿತಾಂಶದಲ್ಲಿ ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಆಯ್ಕೆ ನರೇಂದ್ರ ಮೋದಿ. ವಿಧಾನಸಭೆಗೆ ಅರವಿಂದ್ ಕೇಜ್ರಿವಾಲ್ ಎಂಬ ಜನಾಭಿಪ್ರಾಯ ಇತ್ತು. ಆದರೆ ಲೋಕಸಭೆ ಚುನಾವಣೆ ಆಮ್ ಆದ್ಮಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇದೇ ಟ್ರೆಂಡ್ ಮುಂದುವರಿದರೆ ವಿಧಾನಸಭೆಗೆ ಮತ್ತೆ ಪ್ರವೇಶಿಸುವ ಕೇಜ್ರಿವಾಲ್ ಕನಸು ನನಸಾಗಲು ಸಾಧ್ಯವಿಲ್ಲ.
ಪಂಜಾಬ್‌ನಲ್ಲಿ ದಕ್ಕಿತು!
ದೆಹಲಿಯಲ್ಲಿ ಕಳೆದುಕೊಂಡಿದ್ದನ್ನು ಆಪ್ ಪಂಜಾಬ್‌ನಲ್ಲಿ ದಕ್ಕಿಸಿಕೊಂಡಿದೆ. 13 ಕ್ಷೇತ್ರಗಳಿರುವ ಪಂಜಾಬ್‌ನಲ್ಲಿ 4 ಕ್ಷೇತ್ರಗಳಲ್ಲಿ ಜಯ ದಾಖಲಿಸಿ ಅಚ್ಚರಿ ಮೂಡಿಸಿದೆ. ಇದು ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳಕ್ಕೆ ಆಘಾತವೂ ಹೌದು. ಫರೀದ್‌ಕೋಟ್ (ಮೀಸಲು) ಕ್ಷೇತ್ರದಲ್ಲಿ ಸಾಧು ಸಿಂಗ್, ಫತೇಘರ್ (ಮೀಸಲು) ಕ್ಷೇತ್ರದಿಂದ ಹರ್‌ಜಿಂದರ್ ಸಿಂಗ್ ಖಾಲ್ಸಾ, ಪಟಿಯಾಲ ಕ್ಷೇತ್ರದಿಂದ ಧರಂವೀರ ಗಾಂಧಿ ಮತ್ತು ಸಂಗ್ರೂರ್ ಕ್ಷೇತ್ರದಿಂದ ಭಗಂತ್ ಮಾನ್ ಗೆಲವು ಸಾಧಿಸಿದ್ದಾರೆ. ಇದಕ್ಕೆ ಆಡಳಿತ ವಿರೋಧಿ ಅಲೆಯೇ ಕಾರಣ. ಅಲ್ಲಿ ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಪರ್ಯಾಯವಾಗಿರುವ ಶಿರೋಮಣಿ ಅಕಾಲಿ ದಳ ಬಿಜೆಪಿ ಜತೆ ಸೇರಿ ಆಡಳಿತ ನಡೆಸುತ್ತಿದೆ. ಹೀಗಾಗಿ ಜನರಿಗೆ ಆಪ್ ಪರ್ಯಾಯ ಆಯ್ಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

