ಚುನಾವಣಾ ಇತಿಹಾಸ

1977ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ್ದೇ ಪಾರುಪತ್ಯ. ಅನ್ಯ ಸರ್ಕಾರವನ್ನು ಕಲ್ಪಿಸಿಕೊಳ್ಳಲೂ ಆಗದ ಸ್ಥಿತಿ. ತುರ್ತು ಪರಿಸ್ಥಿತಿ ಬಳಿಕ ದೇಶದ ಚಿತ್ರಣವೇ ಬದಲಾಯಿತು. 'ಜನತಾ' ಶಕ್ತಿಯ ಉದಯವಾಯಿತು.
ಕಾಂಗ್ರೆಸ್ ಗರ್ವಭಂಗ
1977ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗರ್ವಭಂಗವಾಯ್ತು. 6ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತು. ಕಾಂಗ್ರೆಸ್ ಪಾಲಿಗಿದು ಕರಾಳ ವರ್ಷ. ದೇಶಾದ್ಯಂತ ಕಾಂಗ್ರೆಸ್ ಧೂಳೀಪಟವಾಯ್ತು. ಜನತಾ ಮೈತ್ರಿಕೂಟ 298 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿತು. ಲೋಕದಳದ ಮೊರಾರ್ಜಿ ದೇಸಾಯಿ ದೇಶ ಕಂಡ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎನ್ನುವ ಹೆಗ್ಗಳಿಕೆ ಪಾತ್ರವಾದರು. ದೇಶದ ಇತಿಹಾಸ ಕಂಡ ಮೊದಲ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ತಂದದ್ದು ಈ ಚುನಾವಣೆಯ ವಿಶೇಷ. ತುರ್ತುಪರಿಸ್ಥಿತಿ ಹೇರಿಕೆಯಿಂದ ಉಂಟಾದ ಜನಾಕ್ರೋಶ ಎಷ್ಟರಮಟ್ಟಿಗಿತ್ತೆಂದರೆ ಸ್ವತಃ ಇಂದಿರಾ ಗಾಂಧಿ ಹಾಗೂ ಪುತ್ರ ಸಂಜಯ್ಗಾಂಧಿ ಸೋಲಿನ ಕಹಿ ಅನುಭವಿಸಬೇಕಾಯ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಕೊಂಡದ್ದು ಬರೊಬ್ಬರಿ 217 ಸ್ಥಾನಗಳನ್ನು.
ಮತ್ತೆ ಇಂದಿರಾ ಯುಗ
1980ರ ಚುನಾವಣೆ ಮತ್ತೆ ಇಂದಿರಾ ಯುಗಕ್ಕೆ ಅವಕಾಶ ಮಾಡಿಕೊಟ್ಟಿತು. ರಾಜಕೀಯ ಅಸ್ಥಿರತೆ, ಜನತಾ ಮೈತ್ರಿಕೂಟದಲ್ಲಿನ ಭಿನ್ನಮತದ ಬರಪೂರ ಲಾಭಪಡೆದ ಇಂದಿರಾ ಗಾಂಧಿ ಈ ಚುನಾವಣೆ ಮೂಲಕ ಮತ್ತೆ ಅಧಿಕಾರದ ಗದ್ದುಗೆಗೇರಿದರು. ಮೊರಾರ್ಜಿ ದೇಸಾಯಿ ಕೆಳಗಿಳಿದ ಬಳಿಕ ಅಧಿಕಾರಕ್ಕೆ ಬಂದ ಚರಣ್ಸಿಂಗ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಭರವಸೆ ನೀಡಿದ ಇಂದಿರಾ ಪಕ್ಷ ನಂತರ ಕೈಕೊಟ್ಟಿತ್ತು. ರಾಜಕೀಯ ಅಸ್ಥಿರತೆಯನ್ನು ನೋಡಿಕೊಂಡು ಸರಿಯಾದ ದಾಳವನ್ನೇ ಉರುಳಿಸಿದ ಇಂದಿರಾ ಚುನಾವಣೆ ಹಾದಿ ಹಿಡಿದರು. ಬಹುಮತದೊಂದಿಗೆ ಗೆದ್ದು ಬಂದು ಮತ್ತೆ ಅಧಿಕಾರಕ್ಕೇರಿದರು. ಈ ಚುನಾವಣೆಯಲ್ಲಿ ಚರಣ್ ಸಿಂಗ್ ಅವರ ಜನತಾ ಪಕ್ಷ ಗೆದ್ದದ್ದು ಕೇವಲ 41 ಸ್ಥಾನ.
ಸರ್ಕಾರ ಉರುಳಿಸಿದ 1 ಮತ
1998ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೇರಿತು. ಈ ಸರ್ಕಾರದ ಆಯುಷ್ಯವೂ ಅಲ್ಪ. ಎಐಎಡಿಎಂಕೆ ಮೈತ್ರಿಕೂಟದಿಂದ ಹೊರ ನಡೆಯುವ ಮೂಲಕ ಸರ್ಕಾರ ಅಧಿಕಾರ ಕಳೆದುಕೊಂಡಿತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಟಲ್ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಕೊರತೆಯಾದದ್ದು ಕೇವಲ ಒಂದು ಮತ! 1999ರಲ್ಲಿ ಮತ್ತೆ ಚುನಾವಣೆ ನಡೆಯಿತು. ದೇಶದೆಲ್ಲೆಡೆ ಅಬ್ ಕಿ ಬಾರ್ ಅಟಲ್ ಸರ್ಕಾರ್ ಘೋಷಣೆ ಮೊಳಗಿತು. ಎನ್ಡಿಎ ಮತ್ತೆ ವಾಜಪೇಯಿ ಸಾರಥ್ಯದಲ್ಲಿ ಅಧಿಕಾರಕ್ಕೇರಿತು. ಮೈತ್ರಿಕೂಟ ಸರ್ಕಾರವೊಂದು ಕೇಂದ್ರದಲ್ಲಿ ಪೂರ್ಣ ಐದು ವರ್ಷ ಪೂರೈಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು.
ಮೊದಲ ಅಲ್ಪಮತದ ಸರ್ಕಾರ
ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ದೇಶ ಕಂಡ ಮೊದಲ ಅಲ್ಪ ಮತದ ಸರ್ಕಾರ. 1989ರಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 197 ಸ್ಥಾನಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೇರಿದ್ದು ಮಾತ್ರ 147 ಸ್ಥಾನಗಳಲ್ಲಿ ಗೆದ್ದ ವಿ.ಪಿ. ಸಿಂಗ್ ನೇತೃತ್ವದ ನ್ಯಾಷನಲ್ ಫ್ರಂಟ್. ಬಿಜೆಪಿ ಹಾಗೂ ಎಡಪಕ್ಷಗಳ ಬಾಹ್ಯ ಬೆಂಬಲದಿಂದ ಸಿಂಗ್ ಸರ್ಕಾರ ಅಧಿಕಾರಕ್ಕೇರುವುದು ಸಾಧ್ಯವಾಯಿತು. ಹಾಗೆ ನೋಡಿದರೆ ವಿ.ಪಿ. ಸಿಂಗ್ ಪ್ರಧಾನಿಯಾದದ್ದೇ ಹಲವರ ಪಾಲಿಗೆ ಅಚ್ಚರಿ. ಪ್ರಧಾನಿ ಸ್ಥಾನಕ್ಕೆ ಸಿಂಗ್ ಅವರು ಮೊದಲು ದೇವಿಲಾಲ್ ಹೆಸರು ಶಿಫಾರಸು ಮಾಡಿದ್ದರು. ಈ ಶಿಫಾರಸನ್ನು ತಿರಸ್ಕರಿಸಿದ ದೇವಿಲಾಲ್ ಪ್ರಧಾನಿ ಹುದ್ದೆಗೆ ಸಿಂಗ್ ಹೆಸರನ್ನೇ ಸೂಚಿಸಿದರು. ಈ ಬೆಳವಣಿಗೆಯಿಂದ ಬೇಸತ್ತ ಜನತಾದಳದ ಮತ್ತೊಬ್ಬ ಮುಖಂಡ, ಮಾಜಿ ಮುಖ್ಯಸ್ಥ ಚಂದ್ರಶೇಖರ್ ಪ್ರತ್ಯೇಕ ಬಣ ಕಟ್ಟಿದರು. ನಂತರ ಕಾಂಗ್ರೆಸ್ನ ಬಾಹ್ಯ ಬೆಂಬಲ ಪಡೆದು ದೇಶದ 8ನೇ ಪ್ರಧಾನಿಯಾದರು. ದುರಾದೃಷ್ಟವಶಾತ್ ಈ ಸರ್ಕಾರವೂ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ರಾಜೀವ್ಗಾಂಧಿ ಮೇಲೆ ಸರ್ಕಾರ ಬೇಹುಗಾರಿಕೆ ಮಾಡುತ್ತಿದೆ ಎಂಬ ಆರೋಪವೊಡ್ಡಿ ಚಂದ್ರಶೇಖರ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆಯಿತು. ಈ ಚುನಾವಣೆ ಬಳಿಕ ದೇಶದಲ್ಲಿ ಸಮ್ಮಿಶ್ರ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತು. ರಾಜ್ಯ ಹಾಗೂ ಕೇಂದ್ರದಲ್ಲಿ ಸಮ್ಮಿಶ್ರ ರಾಜಕೀಯದ ಯುಗವೇ ಆರಂಭವಾಯಿತು.
ಹಾರಿಬಂದು ಪ್ರಧಾನಿಯಾದ ರಾಜೀವ್
1984ರಲ್ಲಿ ನಡೆದ ಚುನಾವಣೆ ಕೂಡ ಹಲವು ಕಾರಣಗಳಿಗಾಗಿ ಪ್ರಮುಖವಾಗುತ್ತದೆ. ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಭಾರತದ ಜನರಿಗೆ ಹೆಚ್ಚು ಪರಿಚಿತರೇ ಅಲ್ಲದ ಇಂದಿರಾ ಪುತ್ರ ರಾಜೀವ್ಗಾಂಧಿ ಅನುಕಂಪದ ಅಲೆಯಲ್ಲಿ ಭಾರಿ ಬಹುಮತದೊಂದಿಗೆ ಗೆದ್ದು ಬಂದರು. ಇಂದಿರಾ ಹತ್ಯೆ ಅನುಕಂಪದ ಅಲೆಗೆ ಬಹುತೇಕ ಪಕ್ಷಗಳು ನೆಲಕಚ್ಚಿದವು. ವಿಶೇಷವೆಂದರೆ ಎನ್.ಟಿ. ರಾಮಾ ರಾವ್ ನೇತೃತ್ವದ ತೆಲುಗುದೇಶಂ ಪಕ್ಷ(ಟಿಡಿಪಿ) 30 ಸ್ಥಾನಗಳೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ವಿಶೇಷ. ಟಿಡಿಪಿ ಕೇಂದ್ರದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂತ ಮೊದಲ ಪ್ರಾದೇಶಿಕ ಪಕ್ಷ.
ರಾಜೀವ್ ಹತ್ಯೆ
ಇದೊಂದು ರೀತಿಯಲ್ಲಿ ಮಂಡಲ, ಮಂದಿರ ಗದ್ದಲ ಕಂಡ ಚುನಾವಣೆ(1991). ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ನೇಮಿಸಿದ್ದ ಮಂಡಲ ಆಯೋಗ ಇತರೆ ಒಬಿಸಿ ವರ್ಗಕ್ಕೆ ಸರ್ಕಾರಿ ನೌಕರಿಯಲ್ಲಿ ಶೇ.27ರಷ್ಟು ಮೀಸಲಿಗೆ ಶಿಫಾರಸು ಮಾಡಿತ್ತು. ಇದು ದೇಶಾದ್ಯಂತ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಕಾರಣವಾಯ್ತು. ಇದೇ ಅವಧಿಯಲ್ಲಿ ಬಿಜೆಪಿ ಎಲ್.ಕೆ. ಆಡ್ವಾಣಿ ನೇತೃತ್ವದಲ್ಲಿ ರಾಮಮಂದಿರ ವಿವಾದ ಕೈಗೆತ್ತಿಕೊಂಡಿತು. ದೇಶಾದ್ಯಂತ ಅನೇಕ ಗಲಭೆಗಳು ನಡೆದವು. ಮೊದಲ ಹಂತದ ಚುನಾವಣೆ ನಡೆದು ಎರಡನೇ ಹಂತಕ್ಕಾಗಿ ತಮಿಳುನಾಡಿನಲ್ಲಿ ಪ್ರಚಾರ ನಡೆಸುತ್ತಿದ್ದಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯೂ ನಡೆಯಿತು. ಮೊದಲ ಹಂತದಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಕಾಂಗ್ರೆಸ್ ರಾಜೀವ್ ಹತ್ಯೆಯ ಅನುಕಂಪದ ಅಲೆಯ ಮೇಲೆ ಬಹುಮತದ ಸಮೀಪ ಬಂದು ತಲುಪಿತು. ನಂತರ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಪಿ.ವಿ. ನರಸಿಂಹರಾವ್ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಬಿಜೆಪಿಯ ನಿಜವಾದ ಹುಟ್ಟು ಆರಂಭವಾದದ್ದೇ ಇಲ್ಲಿ. ಈ ಚುನಾವಣೆಯಲ್ಲಿ ಪಕ್ಷ ಮೊದಲ ಬಾರಿಗೆ 100(120 ಸ್ಥಾನ)ರ ಗಡಿ ದಾಟಿದ ಸಾಧನೆ ಮಾಡಿತು.
ಮೂರು ಪ್ರಧಾನಿಗಳು
1996ರ ಚುನಾವಣೆಯಲ್ಲಿ ಮತದಾರ ಬಿಜೆಪಿಗಾಗಲಿ, ಕಾಂಗ್ರೆಸ್ಗಾಗಲಿ ಬಹುಮತ ನೀಡಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರವನ್ನೇನೋ ರಚಿಸಿತು. ಆದರೆ, ಈ ಸರ್ಕಾರದ ಆಯುಷ್ಯ ಕೇವಲ 13 ದಿನ. ಅಗತ್ಯ ಸಂಖ್ಯಾಬಲ ಒಟ್ಟುಗೂಡಿಸಲಾಗದೆ ವಾಜಪೇಯಿ ಅಧಿಕಾರದಿಂದ ಕೆಳಗಿಳಿದರು. ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದವರು ಕರ್ನಾಟಕದವರೇ ಆದ ಎಚ್.ಡಿ. ದೇವೇಗೌಡ. ಗೌಡರ ನೇತೃತ್ವದ ಯುನೈಟೆಡ್ ಫ್ರಂಟ್ 18 ತಿಂಗಳು ಅಧಿಕಾರ ನಡೆಸಿದ್ದೇ ಸಾಧನೆ. ಕಾಂಗ್ರೆಸ್ ಏಪ್ರಿಲ್ 1997ರಲ್ಲಿ ಬೆಂಬಲ ಹಿಂಪಡೆಯುವುದರೊಂದಿಗೆ ಮತ್ತೊಂದು ಅಲ್ಪಾವಧಿಯ ಪ್ರಧಾನಿಗಳ ಪಟ್ಟಿಗೆ ಗೌಡರೂ ಸೇರಿಕೊಂಡರು. ಚುನಾವಣೆ ತಪ್ಪಿಸುವ ಉದ್ದೇಶದಿಂದ ಬಳಿಕ ಗುಜ್ರಾಲ್ ನೇತೃತ್ವದ ಯುನೈಟೆಡ್ ಫ್ರಂಟ್ಗೆ ಕಾಂಗ್ರೆಸ್ ಬೆಂಬಲ ನೀಡಿತು. ಆದರೆ, ಡಿಎಂಕೆಯನ್ನು ಮೈತ್ರಿಕೂಟದಿಂದ ಹೊರಗಿಡಬೇಕೆನ್ನುವ ವಿಚಾರಕ್ಕೆ ಸಂಬಂಧಿಸಿ ಉಂಟಾದ ಭಿನ್ನಮತಕ್ಕೆ ಗುಜ್ರಾಲ್ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಅನಿರೀಕ್ಷಿತ ಪ್ರಧಾನಿಗಳಿವರು!
1991ರಲ್ಲಿ ನರಸಿಂಹರಾವ್ ಪ್ರಧಾನಿ ಕುರ್ಚಿಯಲ್ಲಿ ಬಂದು ಆಸೀನರಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ರಾಜೀವ್ಗಾಂಧಿ ಹತ್ಯೆ ಬಳಿಕ ಪಕ್ಷದಲ್ಲಿ ಹಿರಿಯರಾಗಿದ್ದ ನರಸಿಂಹರಾವ್ ಅವರಿಗೆ ಆ ಹುದ್ದೆ ಅನಾಯಾಸವಾಗಿ ಒಲಿದು ಬಂದಿತ್ತು. ಕರ್ನಾಟಕದಲ್ಲಿ ಕೆಲವೇ ಕೆಲವು ಸೀಟು ಇಟ್ಟುಕೊಂಡು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಪ್ರಧಾನಿಯಾದದ್ದೂ ಒಂದು ಅಚ್ಚರಿ. ದೇವೇಗೌಡ ಸರ್ಕಾರ ಅಲ್ಪಮತಕ್ಕೆ ಕುಸಿದ ಬಳಿಕ ಅನಿರೀಕ್ಷಿತ ಎನ್ನುವಂತೆ ಐ.ಕೆ. ಗುಜ್ರಾಲ್ ಅಧಿಕಾರಕ್ಕೇರಿದರು. ಗುಜ್ರಾಲ್ರಂತೂ ಚುನಾವಣೆಯನ್ನೇ ಎದುರಿಸದ ಪ್ರಧಾನಿ. ಇನ್ನು ಪ್ರಧಾನಿ ಹುದ್ದೆಯ ಕನಸನ್ನೂ ಕಾಣದ ಅರ್ಥತಜ್ಞ ಮನಮೋಹನ ಸಿಂಗ್ರಿಗೆ 2004ರಲ್ಲಿ ಪ್ರಧಾನಿ ಕುರ್ಚಿ ಒಲಿದು ಬಂದಿತ್ತು. ಈ ನಾಲ್ಕೂ ಮಂದಿ ಆ ಸಂದರ್ಭದ ಪರಿಸ್ಥಿತಿಯ ಲಾಭದಿಂದ ಪ್ರಧಾನಿಗಳಾದವರು!
ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯನ್ನು ಈ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಎಲ್.ಕೆ. ಆಡ್ವಾಣಿಯ ಪ್ರಧಾನಿ ಕುರ್ಚಿಯ ಕನಸು ಮಾತ್ರ ಕೊನೆಗೂ ಈಡೇರಲೇ ಇಲ್ಲ.
ತಲೆಕೆಳಗಾದ ಚುನಾವಣಾ ಸಮೀಕ್ಷೆ
ಚುನಾವಣಾ ಸಮೀಕ್ಷೆಗಳನ್ನೇ ನಂಬುವುದಾದರೆ 2004ರಲ್ಲಿ ನಡೆದ 14ನೇ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೇರಬೇಕಿತ್ತು. ಆದರೆ, ಅಚ್ಚರಿ ಎಂಬಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಬಹುಮತ ಪಡೆಯಿತು. ಬಿಎಸ್ಪಿ, ಎಸ್ಪಿ, ಎಂಡಿಎಂಕೆ, ಎಡಪಕ್ಷಗಳು ಈ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡಿದವು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕಿತ್ತು. ಆದರೆ, ಬಿಜೆಪಿ ಸೋನಿಯಾ ರಾಷ್ಟ್ರೀಯತೆಯ ಪ್ರಶ್ನೆ ಎತ್ತಿದ್ದರಿಂದ ಪ್ರಧಾನಿ ಗಾದಿಯಿಂದ ಸೋನಿಯಾ ದೂರ ಉಳಿದರು. ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಹಣಕಾಸು ಸಚಿವ ಡಾ.ಮನಮೋಹನ ಸಿಂಗ್ರನ್ನು ಪ್ರಧಾನಿಯಾಗಿ ಘೋಷಿಸಲಾಯಿತು. 2009ರಲ್ಲಿ ನಡೆದ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಎರಡನೇ ಅವಧಿಗೆ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೇರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


