ಮೆಸ್ಸಿ ಮೇಲೆ ಅರ್ಜೆಂಟೀನಾ ಭಾರ

ಬ್ರೆಸಿಲಿಯಾ: ಮತ್ತೊಮ್ಮೆ ಲಯೊನೆಲ್ ಮೆಸ್ಸಿ ಅವರನ್ನೇ ನಂಬಿ ಕೂತಿರುವ ನೆಚ್ಚಿನ ಅರ್ಜೆಂಟೀನಾ ತಂಡದ ಆಟಗಾರರಿಗೆ ಇದೀಗ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಡಾರ್ಕ್ ಹಾರ್ಸ್ ಎನಿಸಿರುವ ಬೆಲ್ಜಿಯಂ ತಂಡದ ಸವಾಲು ಎದುರಾಗಲಿದೆ.
ಈ ಮುನ್ನ 1986ರಲ್ಲಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡ ಆ ಬಾರಿ ಸೆಮಿಫೈನಲ್ ಸುತ್ತಿನಲ್ಲಿ ಬೆಲ್ಜಿಯಂ ವಿರುದ್ಧ ಗೆಲವು ದಾಖಲಿಸಿತ್ತು. ಈ ಫಲಿತಾಂಶವನ್ನು ಮತ್ತೆ ಪುನರಾವರ್ತಿಸಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಟ್ಟಿಕೊಂಡಿರುವ ಅರ್ಜೆಂಟೀನಾ ತಂಡದ ಮುಂದೆ ಬೆಲ್ಜಿಯಂ ಈ ಬಾರಿ ಸುಲಭ ಸವಾಲಂತೂ ಅಲ್ಲ.
ಏಕೆಂದರೆ, ಅಚ್ಚರಿ ಫಲಿತಾಂಶ ನೀಡುವಲ್ಲಿ ಎತ್ತಿದ ಕೈ ಎನಿಸಿರುವ ಬೆಲ್ಜಿಯಂ ಆಟಗಾರರು ಈ ಸಲ ಪ್ರಶಸ್ತಿ ಗೆದ್ದುಕೊಳ್ಳುವ ನೆಚ್ಚಿನ ತಂಡಗಳಲ್ಲಿ ಒಬ್ಬರೆನಿಸಿದ್ದಾರೆ. ಹಾಗಾಗಿ, ಮುನ್ಪಡೆ ಆಟಗಾರ ಹಾಗೂ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಅರ್ಜೆಂಟೀನಾ ಆಟಗಾರರು ಎಚ್ಚರಿಕೆಯಿಂದಲೇ ಬೆಲ್ಜಿಯಂ ತಂಡದ ಸವಾಲು ಎದುರಿಸಬೇಕಾಗಿದೆ.
ಆದರೆ, ಟೂರ್ನಿಯಲ್ಲಿ ಅರ್ಜೆಂಟೀನಾ ಮುಂದಡಿ ಇಡುತ್ತಿರುವ ರೀತಿ ನೋಡಿದರೆ ಭಯ ಹುಟ್ಟಿಸುತ್ತದೆ. ಸಂಪೂರ್ಣ ಮೆಸ್ಸಿ ಮೇಲೆಯೇ ಭಾರ ಹಾಕಿರುವ ಅರ್ಜೆಂಟೀನಾ ಗೋಲುಗಳಿಸಲು ಭಾರಿ ಪರಿಶ್ರಮಪಡುತ್ತಿದೆ. ಹಾಗೆಯೇ ಗೆಲವು ಕಾಣಲೂ ಸಹ ಸಾಕಷ್ಟು ಪರದಾಟ ನಡೆಸಿದೆ.
ಬಾರ್ಸಿಲೋನಾದ ಸ್ಟಾರ್ ಆಟಗಾರ ಮೆಸ್ಸಿ ಈವರೆಗೆ 4 ಗೋಲುಗಳನ್ನು ಸಂಪಾದಿಸಿದ್ದಾರೆ. ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಗೋಲುಗಳಿಸಲು ಭಾರಿ ಶ್ರಮವಹಿಸಿದ್ದ ಅರ್ಜೆಂಟೀನಾ ಹೆಚ್ಚುವರಿ ಅವಧಿಯ ಆಟದ ಮೂಲಕ ಎದುರಾಳಿಯ ಸವಾಲನ್ನು ಹೊಡೆದುರುಳಿಸಿತ್ತು. ಕೋಚ್ ಅಲೆಜಾಂಡ್ರೊ ಸಬೆಲ್ಲಾ ಗರಡಿಯಲ್ಲಿ ಪಳಗಿರುವ ಅರ್ಜೆಂಟೀನಾ ಆಟಗಾರರು ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಬೇಕಾದರೆ, ಕೇವಲ ಮೆಸ್ಸಿ ಮೇಲೆ ಭಾರ ಹಾಕದೇ ಸಾಂಘಿಕ ಶಕ್ತಿ ಪ್ರದರ್ಶಿಸುವಲ್ಲಿ ಯಶಸ್ವಿಯಾದರೆ ಮಾತ್ರ ಗೆಲವು ಆಸೆ ಹೊಂದಬಹುದು.
ಮತ್ತೊಂದೆಡೆ ಕೋಚ್ ಮಾರ್ಕ್ ವಿಲ್ಮೋಟ್ಸ್ ಅವರು ಬೆಲ್ಜಿಯಂ ಆಟಗಾರರನ್ನು ಯಾವುದೇ ರೀತಿಯ ಸವಾಲಿಗೂ ಸಮರ್ಥವಾಗಿ ಮೈಯೊಡ್ಡಿ ನಿಲ್ಲುವಂತಹ ಶಕ್ತಿ ತುಂಬಿದ್ದು, ಅರ್ಜೆಂಟೀನಾ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ.
ಅರ್ಜೆಂಟೀನಾ ಮತ್ತು ಬೆಲ್ಜಿಯಂ ತಂಡಗಳು ಫುಟ್ಬಾಲ್ ಅಖಾಡದಲ್ಲಿ ಈವರೆಗೆ ಪರಸ್ಪರ 4 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಅರ್ಜೆಂಟೀನಾ ತಂಡ 3ರಲ್ಲಿ ಗೆಲವು ದಾಖಲಿಸಿ ತನ್ನ ಪ್ರಭುತ್ವ ಸ್ಥಾಪಿಸಿದ್ದರೆ, ಬೆಲ್ಜಿಯಂ ಮಾತ್ರ ಒಂದರಲ್ಲಿ ಗೆದ್ದದ್ದೇ ಸಮಾಧಾನ.
ಮರಡೋನಾ ಸ್ಥಾನದಲ್ಲಿ ಮೆಸ್ಸಿ
ಪ್ರಸಕ್ತ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಅರ್ಜೆಂಟೀನಾದ ಲಯೋನೆಲ್ ಮೆಸ್ಸಿ ಬ್ರೆಜಿಲ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶ್ವದ ಗಮನ ಸೆಳೆದಿದ್ದಾರೆ. ಅರ್ಜೆಂಟೀನಾ ಶನಿವಾರ ನಡೆಯಲಿರುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
1982ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಬೆಲ್ಜಿಯಂ ಮುಖಾಮುಖಿಯಾಗಿದ್ದವು. ಆಗ ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರನಾಗಿದ್ದ ಡೀಗೊ ಮರಡೋನಾ ಅವರನ್ನು ಕಟ್ಟಿಹಾಕಲು ಬೆಲ್ಜಿಯಂ ತನ್ನ ಆರು ರಕ್ಷಣಾ ಆಟಗಾರರನ್ನು ನಿಲ್ಲಿಸಿತ್ತು.
ಹೀಗಾಗಿ, ಈ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮರಡೋನಾ ಪಾತ್ರವನ್ನು ಲಯೋನೆಲ್ ಮೆಸ್ಸಿ ವಹಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮೆಸ್ಸಿ ಕಟ್ಟಿಹಾಕಲು ಬೆಲ್ಜಿಯಂ ವಿಶೇಷ ಕಾರ್ಯತಂತ್ರ ರೂಪಿಸಿಕೊಂಡಿದೆ ಎನ್ನಲಾಗುತ್ತಿದೆ.
ಅರ್ಜೆಂಟೀನಾ ಪ್ರಮುಖರು
ಗೋಲ್ಕೀಪರ್ : ಸೆರ್ಗಿಯೊ ರೊಮೆರೊ
ರಕ್ಷಣೆ : ಪಾಬ್ಲೊ ಜಾಬಲೆಟಾ, ಹ್ಯೂಗೊ ಕ್ಯಾಂಪಗ್ನಾರೊ,
ಮಾರ್ಕೋಸ್ ರೋಜೊ
ಸಂಪರ್ಕ : ಆ್ಯಂಗೆಲ್ ಡಿ ಮಾರಿಯಾ, ಲೂಕಾಸ್ ಬಿಗ್ಲಿಯಾ,
ಫರ್ನಾಂಡೊ ಗಾಗೊ, ಜಾವಿಯರ್ ಮಾಸ್ಕರನೊ,
ಮುನ್ಪಡೆ : ಲಯೋನೆಲ್ ಮೆಸ್ಸಿ, ಮ್ಯಾಕ್ಸಿ ರೋಡ್ರಿಗಜ್,
ಗೋಂಜಾಲೊ ಹಿಗ್ಯೂಯನ್, ರೋಡ್ರಿಗೊ ಪಲಾಸಿಯೊ
ಕೋಚ್ : ಅಲೆಜಾಂಡ್ರೊ ಸಬೆಲ್ಲಾ
ಬೆಲ್ಜಿಯಂ ಪ್ರಮುಖರು
ಗೋಲ್ಕೀಪರ್ : ಥಿಬೌಟ್ ಕೋರ್ಟೊಯಿಸ್
ರಕ್ಷಣೆ : ವಿನ್ಸೆಂಟ್ ಕಂಪನಿ, ಥಾಮಸ್ ವೆರ್ಮಾಲೆನ್,
ಜಾನ್ ವೆರ್ಟೊಂಗೇನ್,
ಸಂಪರ್ಕ : ಎಡೆನ್ ಹಜಾರ್ಡ್, ಕೆವಿನ್ ಡಿ ಬ್ರ್ಯೂನ್,
ಮಾರೌನೆ ಫೆಲಾಯಿನಿ, ಸ್ಟೀವನ್ ಡೆಫೋರ್,
ಮೌಸಾ ಡೆಂಬೆಲೆ.
ಮುನ್ಪಡೆ : ರೊಮೇಲು ಲುಕಾಕು, ಡ್ರೈಸ್ ಮೆರ್ಟನ್ಸ್, ಡಿವೋಕ್ ಓರಿಜಿ
ಕೋಚ್ : ಮಾರ್ಕ್ ವಿಲ್ಮೋಟ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


