ಬ್ರೆಜಿಲ್ ಇನ್ ಸೆಮೀಸ್

ಫೊರ್ಟಾಲೆಜಾ (ಬ್ರೆಜಿಲ್): ಆತಿಥೇಯ ಅಂಗಣದಲ್ಲಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹುಮ್ಮಸ್ಸಿನ ಪ್ರದರ್ಶನ ನೀಡಿದ ಬ್ರೆಜಿಲ್ ಶನಿವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು.
ಇದರೊಂದಿಗೆ, ಆತಿಥೇಯ ಬ್ರೆಜಿಲ್ ಮತ್ತು ಫ್ರಾನ್ಸ್ ವಿರುದ್ಧ 1-0 ಗೋಲುಗಳ ಅಂತರದಿಂದ ಪರಾಭವಗೊಳಿಸಿದ ಜರ್ಮನಿ ಸೆಮಿಫೈನಲ್ ಪ್ರವೇಶಿಸಿದವು.
ಪಂದ್ಯದ ಆರಂಭದಲ್ಲಿ ಬ್ರೆಜಿಲ್ ನಾಯಕ ಥೈಗೋ ಸಿಲ್ವಾ ಮತ್ತು ಫ್ರಿ ಕಿಕ್ನಲ್ಲಿ ಡೇವಿಡ್ ಲೂಯಿಜ್ ಅವರು ಗಳಿಸಿದ ಗೋಲು ಆತಿಥೇಯ ತಂಡ ಸೆಮಿಫೈನಲ್ ಪ್ರವೇಶಿಸಲು ನೆರವಾಯಿತು. ಪಂದ್ಯಾವಳಿಯಲ್ಲೇ ಅತಿ ಹೆಚ್ಚು ಗೋಲು ದಾಖಲಿಸಿದ ಕೊಲಂಬಿಯಾ ಆಟಗಾರ ಜೇಮ್ಸ್ ರೋಡ್ರಿಗಸ್ ಅವರು ಕಣ್ಣೀರಿಡುತ್ತಾ ಅಂಗಣದಿಂದ ಹೊರ ನಡೆದರು. ಪಂದ್ಯಾವಳಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಿದ ರೋಡ್ರಿಗಸ್ ಅವರು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತಮ್ಮ 6ನೇ ಗೋಲು ದಾಖಲಿಸಿದ್ದರೂ, ಬ್ರೆಜಿಲ್ ತಂಡದ ವಿರುದ್ಧ ತಮ್ಮ ತಂಡ ಜಯ ಕಾಣಲಿಲ್ಲ ಎಂಬ ದುಃಖದೊಂದಿಗೆ ಅವರು ಅಂಗಣದಿಂದ ಹೊರನಡೆದರು. ಬ್ರೆಜಿಲ್ ಈ ಪಂದ್ಯದಲ್ಲಿ ಜಯ ಕಂಡರೂ, ನಾಯಕ ಸಿಲ್ವಾ ಅವರು ಹಳದಿ ಕಾರ್ಡ್ ಪಡೆದರು. ಹೀಗಾಗಿ ಅವರು ಸೆಮಿಫೈನಲ್ ಪಂದ್ಯದಲ್ಲಿ ಆಡದಂತೆ ಅವರ ಮೇಲೆ ನಿಷೇಧ ಹೇರಲಾಗಿದೆ. ಇನ್ನು ಮೂಳೆ ಮುರಿದುಕೊಂಡಿರುವ ಸ್ಟಾರ್ ಸ್ಟ್ರೈಕರ್ ನೇಮಾರ್ ಸಹ ಜರ್ಮನಿ ವಿರುದ್ಧ ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾಗಿರುವುದು, ಬ್ರೆಜಿಲ್ ಕೋಚ್ ಲೂಯಿಜ್ ಫೆಲಿಪೆ ಸ್ಕೋಲಾರಿ ಅವರಿಗೆ ಆತಂಕವಾಗಿ ಪರಿಣಮಿಸಿದೆ. ಪಂದ್ಯದ 7ನೇ ನಿಮಿಷದಲ್ಲಿ ಸಿಲ್ವಾ ಗೋಲು ದಾಖಲಿಸುವುದರೊಂದಿಗೆ ಬ್ರೆಜಿಲ್ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 69ನೇ ನಿಮಿಷದಲ್ಲಿ ದೊರಕಿದ ಫ್ರೀ ಕಿಕ್ನಲ್ಲಿ ಲೂಯಿಜ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಇದು ಬ್ರೆಜಿಲ್ 2-0 ಅಂತರದಿಂದ ಮುನ್ನಡೆ ಕಂಡುಕೊಳ್ಳುವಂತಾಯಿತು.ಆದರೆ, ಪಂದ್ಯಾವಳಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ ಕೊಲಂಬಿಯಾದ ಜೇಮ್ಸ್ ರೋಡ್ರಿಗಸ್, ಪಂದ್ಯದ 80ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ದಾಖಲಿಸಿದರು.
ಆಗ ಕೊಲಂಬಿಯಾ 1-2 ಅಂತರದಿಂದ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತ್ತು. ಆದರೆ, ನಂತರ ಕೊಲಂಬಿಯಾದ ಕಾರ್ಲೋಸ್ ಬಕ್ಕಾ ಅವರು ಗೋಲು ಗಳಿಸಿದ ಮಾಡಿದ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾದ ಬ್ರೆಜಿಲ್ ಗೋಲ್ಕೀಪರ್ ಜುಲಿಯೋ ಸೀಸರ್, ಆತಿಥೇಯ ತಂಡದ ಗೆಲವಿನ ರೂವಾರಿ ಎನಿಸಿದರು. ನಂತರ ಹೆಚ್ಚುವರಿ ಗಾಯದ ಸಮಯದಲ್ಲಿ ಕೊಲಂಬಿಯಾ ಗೋಲು ಗಳಿಸುವಲ್ಲಿ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಬ್ರೆಜಿಲ್ ಸುಲಭವಾಗಿ ಸೆಮೀಸ್ ಪ್ರವೇಶಿಸಿತು.
ಬ್ರೆಜಿಲ್ ಸೆಮಿಫೈನಲ್ಗೆ ಪ್ರವೇಶಿಸಿರುವುದು, 2002ರ ವಿಶ್ವಕಪ್ ಫೈನಲ್ ಪಂದ್ಯದ ನೆನಪನ್ನು ಮರುಕಳಿಸುತ್ತಿದೆ. ಆಗ ಬ್ರೆಜಿಲ್ ತಂಡ ಜರ್ಮನಿ ವಿರುದ್ಧ 2-0 ಅಂತರದಿಂದ ಗೆದ್ದುಕೊಂಡಿತ್ತು. ಹೀಗಾಗಿ, ಈಗ ಜರ್ಮನಿ ಸೇಡು ತೀರಿಸಿಕೊಳ್ಳುವ ಕಾಲ ಸಮೀಪಿಸಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಪರಸ್ಪರ ಎದುರಾಗಿವೆ.
ಸೋಲಿಗೆ ರೆಫರಿ ಕಾರಣ: ಕಣ್ಣೀರಿಟ್ಟ ಜೇಮ್ಸ್
ಫೋರ್ಟಾಲೆಜಾ (ಬ್ರೆಜಿಲ್): ತಮ್ಮ ಸೋಲಿಗೆ ಪಂದ್ಯವನ್ನು ಪ್ರತಿನಿಧಿಸಿದ್ದ ಸ್ಪೇನ್ ರೆಫರಿ ಕಾರ್ಲೋಸ್ ವೆಲಾಸ್ಕೋ ಕಾರ್ಬೆಲ್ಲೋ ಅವರೇ ಕಾರಣ, ಎಂದು ಪಂದ್ಯಾವಳಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಕಣ್ಣೀರಿಟ್ಟ ಕೊಲಂಬಿಯಾ ಸ್ಟಾರ್ ಆಟಗಾರ ಜೇಮ್ಸ್ ರೋಡ್ರಿಗಸ್ ಆರೋಪ ಮಾಡಿದರು. ಪಂದ್ಯದಲ್ಲಿ ರೆಫರಿ ನಮ್ಮ ತಂಡದ ವಿರುದ್ಧ ತೀರ್ಮಾನಗಳನ್ನು ತೆಗೆದುಕೊಂಡರು. ಬ್ರೆಜಿಲ್ಗೆ ನೆರವಾಗುವಂತೆ ನಡೆದುಕೊಂಡರು ಎಂದು ರೊಡ್ರಿಗಸ್ ದೂರಿದ್ದಾರೆ. 'ನನ್ನ ವಿರುದ್ಧ ಬ್ರೆಜಿಲ್ನ ಆಟಗಾರರು ಪಂದ್ಯದಲ್ಲಿ ವರಟಾಗಿ ನಡೆದುಕೊಂಡರೂ, ರೆಫರಿ ನಮ್ಮ ನೆರವಿಗೆ ಬರಲಿಲ್ಲ' ಎಂದಿದ್ದಾರೆ ಜೇಮ್ಸ್. ಮೊದಲಾರ್ಧ ಪಂದ್ಯದಲ್ಲಿ ಬ್ರೆಜಿಲ್ನ ಫೆರ್ನಾಂಡಿನ್ಹೋ ಅವರು ಬೇಕಂತಲೇ ಜೇಮ್ಸ್ ಅವರನ್ನು ಮೂರು ಬಾರಿ ಕೆಡವಿದ್ದರು. ಆದರೆ, ರೆಫರಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. 'ಪಂದ್ಯದ ಮೇಲೆ ರೆಫರಿ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಅವರೇಕೆ ಹೀಗೆ ನಡೆದುಕೊಂಡರು ಎಂಬುನ್ನು ನಾವು ನೋಡಬೇಕಾಗಿದೆ. ಆದರೆ, ನಾವು ಪಂದ್ಯಾವಳಿಯಲ್ಲಿ ಇನ್ನೂ ಸಾಗಬೇಕಾಗಿತ್ತು. ಆದರೆ, ಈ ಸೋಲು ನಮ್ಮನ್ನು ದುಃಖದಲ್ಲಿ ಮುಳುಗಿಸಿದೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


