ಸಾಂಬಾ ನಾಡಿನಲ್ಲಿ ಚೆಂಡಿನಾಟ

ಈಗ ಬ್ರೆಜಿಲ್ನಲ್ಲಿ ವಿಶ್ವಕಪ್ ಫುಟ್ಬಾಲ್ ಜ್ವರ. ಎಲ್ಲರ ದೃಷ್ಟಿ ಬ್ರೆಜಿಲ್ನತ್ತ ನೆಟ್ಟಿದೆ. ಇಡೀ ಜಗತ್ತು, ಈ ಕುತೂಹಲದ ಮತ್ತೊಂದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲು ತುದಿಗಾಲಲ್ಲಿ ನಿಂತಿದೆ. ಈ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಮೂಲಕ ಜಾಗತಿಕ ಫುಟ್ಬಾಲ್ ಭೂಪಟದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಬ್ರೆಜಿಲ್ ಸಹ ಸರ್ವರೀತಿಯಿಂದಲೂ ಸಜ್ಜುಗೊಂಡಿದೆ.
ಜಗತ್ತಿನ ಅಗ್ರ 32 ತಂಡಗಳು ಈ ಬಾರಿ ಸ್ಪರ್ಧಾಕಣದಲ್ಲಿವೆ. ಬೋಸ್ನಿಯಾ ಆ್ಯಂಡ್ ಹರ್ಜೆಗೊವಿನಾ ಬಿಟ್ಟರೆ ಉಳಿದ ತಂಡಗಳು ಈಗಾಗಲೇ ವಿಶ್ವಕಪ್ನಲ್ಲಿ ಆಡಿವೆ. ಚೊಚ್ಚಲ ಬಾರಿಗೆ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬೋಸ್ನಿಯಾ ಆ್ಯಂಡ್ ಹರ್ಜೆಗೊವಿನಾ ಕೂಡ ಅಚ್ಚರಿ ಫಲಿತಾಂಶ ನೀಡಲು ಉತ್ಸುಕತೆಯಲ್ಲಿದೆ.
ಕೆಲವರು ದಟ್ಟ ಅನುಭವ ಬೆನ್ನಿಗೆ ಕಟ್ಟಿಕೊಂಡು ವಿಶ್ವಕಪ್ ಎತ್ತಿ ಹಿಡಿಯುವ ಆಸೆಯೊಂದಿಗೆ ಸ್ಪರ್ಧಾಕಣಕ್ಕೆ ಧುಮುಕಿದ್ದರೆ, ಇನ್ನು ಕೆಲವರು ಅಚ್ಚರಿ ಫಲಿತಾಂಶ ನೀಡಿ ಹೊಸ ಇತಿಹಾಸಕ್ಕೆ ನಾಂದಿ ಹಾಡುವ ಕನಸಿನೊಂದಿಗೆ ಅಖಾಡಕ್ಕಿಳಿದಿದ್ದಾರೆ.
ಈ ಬಾರಿ ನಡೆಯುತ್ತಿರುವುದು ಒಟ್ಟಾರೆ 20ನೇ ವಿಶ್ವಕಪ್ ಪಂದ್ಯಾವಳಿಯಾಗಿದೆ. ಈ ಮುನ್ನ ನಡೆದ ಟೂರ್ನಿಗಳಲ್ಲಿ ಬ್ರೆಜಿಲ್ (5) ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಉಳಿದಂತೆ, ಇಟಲಿ 4 ಬಾರಿ ಪ್ರಶಸ್ತಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಜರ್ಮನಿ 3, ಅರ್ಜೆಂಟೀನಾ ಮತ್ತು ಉರುಗ್ವೆ ತಲಾ 2 ಹಾಗೂ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಲಾ 1 ಬಾರಿ ವಿಶ್ವಕಪ್ ಮುಕುಟ ಧರಿಸಿವೆ. ಕಳೆದ ಬಾರಿ 2010ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ಪೇನ್ ಟ್ರೋಫಿ ಗೆದ್ದುಕೊಂಡಿತ್ತು. ಈ ಬಾರಿ ಹಾಲಿ ಚಾಂಪಿಯನ್ ಹೆಗ್ಗಳಿಕೆಯೊಂದಿಗೆ ಸ್ಪರ್ಧೆಗೆ ನಿಂತಿರುವ ಸ್ಪೇನ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಈ ಬಾರಿ ಕೂಡ ಯಾವುದೇ ತಂಡಕ್ಕೆ ಪ್ರಶಸ್ತಿ ಗೆದ್ದುಕೊಳ್ಳುವುದು ಸುಲಭದ ಮಾತಲ್ಲ. ಪ್ರತಿಯೊಂದೂ ತಂಡನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ ಪಂದ್ಯಾವಳಿಗಾಗಿ ವಿಭಿನ್ನವಾಗಿಯೇ ಸಜ್ಜುಗೊಂಡಿರುತ್ತದೆ. ಹಾಗಾಗಿ, ಹಿಂದಿನ ಫಲಿತಾಂಶ ಅಥವಾ ಇತಿಹಾಸದ ಪುಟ ನೋಡಿ ಇಂತಹುದೇ ತಂಡ ಪ್ರಶಸ್ತಿ ಗೆದ್ದುಕೊಳ್ಳಬಹುದೆಂಬುದನ್ನು ಅಳೆದು-ತೂಗಿ ನೋಡಿ ಹೇಳಲೂ ಬರುವುದಿಲ್ಲ. ಆದರೂ ಸಹ, ಮೇಲ್ನೋಟಕ್ಕೆ ಕಾಣುವ ಸಾಮರ್ಥ್ಯ, ಬಲಾಬಲದ ಮೇಲೆ ತಾಳೆ ಹಾಕಿ ನೋಡಿದಾಗ ಊಹೆಯನ್ನಷ್ಟೇ ಮಾಡಬಹುದು. ಈ ಊಹೆಯಂತೆ, ಈ ಬಾರಿ ಜರ್ಮನಿ, ಬ್ರೆಜಿಲ್ ಮತ್ತು ಸ್ಪೇನ್ ಪ್ರಶಸ್ತಿ ಗೆಲ್ಲುವ ತಂಡಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತವೆ. ಡಾರ್ಕ್ ಹಾರ್ಸ್ ಎನ್ನಲಾಗುವ ಬೆಲ್ಜಿಯಂ ಕೂಡ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು, ಇಟಲಿ, ಅರ್ಜೆಂಟೀನಾ, ಪೋರ್ಚುಗಲ್, ಇಂಗ್ಲೆಂಡ್, ಹಾಲೆಂಡ್, ಉರುಗ್ವೆ, ಫ್ರಾನ್ಸ್ ತಂಡಗಳನ್ನೂ ಹಗುರವಾಗಿ ಕಾಣುವ ಹಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


