ಮನೆಯ ನಾಯಿಮರಿಯೇನೋ ಎಂಬಷ್ಟು ಪ್ರೀತಿಯಿಂದ ಉಗುರು ಬೆಳೆಸಿರುತ್ತೀರಿ. ಅದಕ್ಕೆ ಚೆಂದದ ಆಕಾರ ನೀಡಿ ಬಣ್ಣ ಹಚ್ಚಿ, ಮಾತನಾಡುವಾಗ ಸ್ವಲ್ಪ ಹೆಚ್ಚಾಗಿಯೇ ಕೈ ಬಳಸಿ ಉಗುರು ಪ್ರದರ್ಶಿಸಿರುತ್ತೀರಿ. ಅಂಥ ಉಗುರು ಮುರಿಯದಂತೆ ಕಾಪಾಡಲು ಕೆಲವು ಸಲಹೆಗಳನ್ನು ಕೇಳಿ...
- ಉಗುರನ್ನು ನಿತ್ಯ ಮಾಯಿಶ್ಚರೈಸರ್‌ನೊಂದಿಗೆ ಮಸಾಜ್ ಮಾಡಿ. ಇದರಿಂದ ಚೆನ್ನಾಗಿ ರಕ್ತಸಂಚಾರವಾಗಿ, ಉಗುರುಗಳು ಹೆಚ್ಚು ಗಟ್ಟಿಗೊಳ್ಳುತ್ತವೆ.
- ಸಾಕಷ್ಟು ನೀರು ಕುಡಿಯುವುದರಿಂದ ದೇಹ ಒಣಗುವುದು, ಉಗುರು ತುಂಡಾಗುವುದು ತಪ್ಪುತ್ತದೆ.
- ನಿಮ್ಮ ಆಹಾರದಲ್ಲಿ ಎಲ್ಲ ಪೋಷಕಾಂಶಗಳಿರುವಂತೆ ನೋಡಿಕೊಳ್ಳಿ. ದೇಹಕ್ಕೆ ವಿಟಮಿನ್ ಮತ್ತು ಕ್ಯಾಲ್ಸಿಯಂ ಒದಗಿಸಿ.
- ನಿತ್ಯ ಆಲಿವ್ ಎಣ್ಣೆಯಲ್ಲಿ 10-15 ನಿಮಿಷ ಕೈ ಬೆರಳುಗಳನ್ನು ಅದ್ದಿ. ತಿಂಗಳಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ.
- ಉಗುರು ಕಚ್ಚುವ ಅಭ್ಯಾಸ ಬಿಡಿ.
- ಡಿಟರ್ಜೆಂಟ್‌ಗಳು, ರಾಸಾಯನಿಕ ವಸ್ತುಗಳು ಕೈಗೆ ತಾಗಿದಾಗ ಉಗುರುಗಳ ಗಟ್ಟಿತನವನ್ನು ಹಾಳುಮಾಡುತ್ತವೆ. ಕೆಲಸ ಮಾಡುವಾಗ ಗ್ಲೌಸ್ ಬಳಸಿ.
- ಬಾಟಲ್ ಮುಚ್ಚಳ ತೆಗೆಯಲು ಅಥವಾ ಇನ್ನಾವುದೇ ಸಣ್ಣ ಕೆಲಸಕ್ಕೆ ಉಗುರನ್ನು ಆಯುಧವಾಗಿ ಬಳಸಬೇಡಿ.
- ಸಾಧ್ಯವಾದಷ್ಟು ನೈಲ್ ಪಾಲಿಷ್ ರಿಮೂವರ್‌ನಿಂದ ದೂರವಿರಿ. ಇದರಲ್ಲಿರುವ ಅಸಿಟೋನ್ ಉಗುರನ್ನು ಒಣಗಿಸಿ ಹಾಳುಗೆಡವುತ್ತದೆ.
- ಮಚ್ ಮುನಿಯಮ್ಮ