ಬಂಧು-ಮಿತ್ರರಿಗಿಂತ ಸ್ಮಾರ್ಟ್ ಫೋನ್ ಗೆ ಪ್ರಾಮುಖ್ಯತೆ ಏಕೆ?

ಸ್ಮಾರ್ಟ್ ಫೋನ್ ಬಂದ ಮೇಲೆ ಎಲ್ಲಿ ನೋಡಿದರೂ ಜನ ಮೊಬೈಲ್ ನಲ್ಲಿ ಬೆರಳಾಡಿಸುತ್ತಾ ತಲ್ಲೀನರಾಗಿರುವುದನ್ನು ನಾವು ನೋಡುತ್ತೇವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಂಡನ್: ಸ್ಮಾರ್ಟ್ ಫೋನ್ ಬಂದ ಮೇಲೆ ಎಲ್ಲಿ ನೋಡಿದರೂ ಜನ ಮೊಬೈಲ್ ನಲ್ಲಿ ಬೆರಳಾಡಿಸುತ್ತಾ ತಲ್ಲೀನರಾಗಿರುವುದನ್ನು ನಾವು ನೋಡುತ್ತೇವೆ. ಯಾವುದೋ ಸಭೆ, ಸಮಾರಂಭಗಳಲ್ಲಿ, ಕಾರ್ಯಕ್ರಮಗಳಿಗೆ ಹೋಗಲಿ ಇಬ್ಬರು ಪರಿಚಯಸ್ಥರು ಅಥವಾ ಸ್ನೇಹಿತರು ಭೇಟಿಯಾಗಿದ್ದಾರೆಂದಿಟ್ಟುಕೊಳ್ಳಿ, ಹಾಯ್, ಹಲೋ ಅಂತ ಹೇಳಿ ಒಂದೆರಡು ಔಪಚಾರಿಕ ಮಾತನಾಡಿ ತಮ್ಮ ಪಾಡಿಗೆ ಮೊಬೈಲ್ ನಲ್ಲಿ ಮುಳುಗಿಹೋಗುತ್ತಾರೆ.

ಇನ್ಯಾವುದೋ ಮದುವೆ ಮನೆಗಳಿಗೆ ಯುವಜನತೆ, ಉದ್ಯೋಗಸ್ಥರು ಹೋಗಿದ್ದಾರೆಂದಿಟ್ಟುಕೊಳ್ಳಿ. ಅಲ್ಲಿ ಬಂಧು ಮಿತ್ರರೊಡಗೂಡಿ ಹರಟೆ ಹೊಡೆಯುತ್ತಾ, ಕಷ್ಟ ಸುಖ ವಿನಿಮಯ ಮಾಡಿಕೊಳ್ಳುವುದನ್ನು ಬಿಟ್ಟು, ಮೊಬೈಲ್ ನಲ್ಲಿ ಏನೋ ಮಾಡುತ್ತಾ ತಮ್ಮಷ್ಟಕ್ಕೆ ಇರುತ್ತಾರೆ. ಈ ಅಭ್ಯಾಸ ಮಕ್ಕಳಲ್ಲಂತೂ ಇತ್ತೇಚೆಗೆ ಇನ್ನೂ ಹೆಚ್ಚಾಗಿ ಕಂಡುಬರುತ್ತಿದೆ. ಹತ್ತು ವರ್ಷಗಳ ಹಿಂದೆ ಮಕ್ಕಳು ಒಂದೆಡೆ ಸೇರಿದರೆ ತಮ್ಮ ಶಾಲೆಯ ವಿಷಯ, ಶಿಕ್ಷಕರ ವಿಚಾರ ಮಾತಾಡಿಕೊಳ್ಳುತ್ತಿದ್ದರು, ಹರಟೆ ಹೊಡೆಯುತ್ತಾ ತಮಾಷೆ ಮಾಡುತ್ತಾ ಕಳೆಯುತ್ತಿದ್ದರು.

ಆದರೆ ಇಂದು ಮಕ್ಕಳು ಕೂಡ ಸ್ಮಾರ್ಟ್ ಫೋನ್ ಗಳಲ್ಲಿ ಫೇಸ್ ಬುಕ್, ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಾ, ಗೇಮ್ಸ್ ಆಡುತ್ತಾ ಸಮಯ ಕಳೆಯುತ್ತಾರೆ. ಇದಕ್ಕೆ ಇಂಟರ್ನೆಟ್ ಗೀಳು ಮುಖ್ಯ ಕಾರಣವೆನ್ನುತ್ತದೆ ಲಂಡನ್ ನ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನ.
ಸಂಶೋಧಕರ ಪ್ರಕಾರ ಇಂಟರ್ನೆಟ್ ನ ಗೀಳಿನಿಂದಾಗಿ ಸಾಮಾಜಿಕ ಪರಿಸರದಲ್ಲಿ ಸ್ನೇಹಿತರನ್ನು, ಬಂಧುಗಳನ್ನು ನಿರ್ಲಕ್ಷಿಸುತ್ತಾರೆ. ಸ್ಮಾರ್ಟ್ ಫೋನ್ ಎದುರಿಗಿದ್ದವರನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ, ಎದುರಿಗಿದ್ದ ವ್ಯಕ್ತಿ ಕೂಡ ಹೀಗೆ ಮಾಡುತ್ತಾರೆ. ಆದರೆ ಈ ನಡತೆ ವಿಚಿತ್ರವೆಂದು ಅನಿಸುವುದಿಲ್ಲವಂತೆ. ಸಹಜವೆಂದೇ ಜನ ಭಾವಿಸುತ್ತಾರಂತೆ. ಮನುಷ್ಯನ ಈ ನಡವಳಿಕೆಗೆ 'Phubbing' ಎಂದು ಕರೆಯುತ್ತಾರೆ.
 
ಇಂಟರ್ನೆಟ್ ನ ಅತಿಯಾದ ಬಳಕೆ, ತನ್ನತನ ಕಳೆದುಕೊಳ್ಳುವ ಭಯ, ಸ್ವ ನಿಯಂತ್ರಣದ ಕೊರತೆ ತನ್ನ ಸುತ್ತಮುತ್ತ ಜನರಿದ್ದರೂ ಕೂಡ ತಾನೊಬ್ಬನೇ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿಹೋಗಲು ಹೆಚ್ಚು ಕಾರಣ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎನ್ನುತ್ತಾರೆ ಲಂಡನ್ ನ ಕೆಂಟ್ ವಿಶ್ವವಿದ್ಯಾಲಯದ ವರೋತ್ ಚೋಟ್ಪಿತಯಸುನೊಂದ್. ''ಕಂಪ್ಯೂಟರ್ಸ್ ಇನ್ ಹ್ಯೂಮನ್ ಬಿಹೇವಿಯರ್'' ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com