ಹೊರನಾಡು ಕನ್ನಡಿಗ

ಕಾಸರಗೋಡು ಹೋರಾಟ ಚುರುಕುಗೊಳಿಸಿ: ಶಿವರಾಮ

Published On :

ಕಾಸರಗೋಡು: ತೆಲಂಗಾಣ ರಾಜ್ಯ ರಚನೆಯ ಘೋಷಣೆಯ ನಂತರ ದೇಶದ ವಿವಿಧ ಕಡೆಗಳಿಂದ ಬಂದಿರುವ ಪ್ರತ್ಯೇಕ ರಾಜ್ಯಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆಯೆಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ 2013 ಆಗಸ್ಟ್ 13ರಂದು ಹೇಳಿರುವ ಹಿನ್ನೆಲೆಯಲ್ಲಿ ಕಾಸರಗೋಡು ಹೋರಾಟಕ್ಕೆ ಮರುಚಾಲನೆ ದೊರೆಯಲಿದೆ ಎಂಬ ಆಶಾಭಾವನೆ ಮೊಳೆಯುತ್ತಿದೆ ಎಂದು ಕರಾವಳಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇರಳವನ್ನು ವಿಭಜಿಸಿ ಮಲಬಾರ್ ರಾಜ್ಯವನ್ನು ರೂಪಿಸುವ ಬೇಡಿಕೆಯ ಸಂದರ್ಭದಲ್ಲಿ ಹಿಂದಿನ ಕೇಂದ್ರ ಸರ್ಕಾರದ ಮಹಾಜನ್ ಕಮೀಷನ್‌ನಮ ವರದಿಯ ಆಧಾರದಲ್ಲಿ ಪರಿಗಣಿಸಿ ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವುದು ಅಥವಾ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶದಂತೆ ವಿಶೇಷ ಸ್ಥಾನಮಾನವನ್ನು ಒದಗಿಸಬೇಕೆಂಬುದು ಕಾಸರಗೋಡಿನ ಸಮಸ್ತ ಕನ್ನಡಿಗರ ಅಭಿಪ್ರಾಯವಾಗಿದೆ. ದೇಶದ ಹಿತದೃಷ್ಟಿಯಿಂದ ಗಮನದಲ್ಲಿಟ್ಟುಕೊಂಡು ರಾಜ್ಯಗಳ ಪುನರ್ ವಿಂಗಡಣಾ ಆಯೋಗ ರಚನೆ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕಾಸರಗೋಡು ಪ್ರದೇಶವು ಕರ್ನಾಟಕ ರಾಜ್ಯಕ್ಕೆ ವಿಲೀನಗೊಳಿಸುವ ಹೋರಾಟಕ್ಕೆ ಮರುಚಾಲನೆ ದೊರೆಯಲಿದೆ. ಕಾಸರಗೋಡು ಪ್ರದೇಶದ ಕನ್ನಡ ಹೋರಾಟಗಾರರ ನಿರಂತರ ಚಳವಳಿಗೆ ಪೂರ್ಣ ರೂಪದಲ್ಲಿ ಸರ್ವಸಮ್ಮತವಾಗಿ ಸಮಸ್ತರು ವಿಲೀನೀಕರಣ ಹೋರಾಟ ನಡೆಸುವ ಅಗತ್ಯ ಕಂಡು ಬರುತ್ತದೆ. ಕಾಸರಗೋಡಿನ ಸರ್ವ ಕನ್ನಡಿಗರು ಹಲವು ದಶಕಗಳಿಂದ ನಿರಂತರವಾಗಿ ತೊಂದರೆಗೊಳಪಡುತ್ತಿದ್ದಾರೆ. ಈ ಬಗ್ಗೆ ಕೇರಳ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರೂ ಹಾಗೂ ಕೇರಳ ರಾಜ್ಯದ ಕನ್ನಡಭಾಷಾ ಅಲ್ಪಸಂಖ್ಯಾತರ ಸೌಲತ್ತುಗಳ ಕುರಿತು ಹಕ್ಕೊತ್ತಾಯ ಮಂಡಿಸುತ್ತಾ ಬರುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದನ ತೀರ ಕಡಿಮೆಯಾಗಿದೆ. ಆದ್ದರಿಂದ ಕನ್ನಡ ಹೋರಾಟವನ್ನು ತೀವ್ರಗೊಳಿಸುವುದು ಅತ್ಯಗತ್ಯವಾಗಿದೆ. ಹಲವು ದಶಕಗಳ ಹೋರಾಟ ನಡೆಸಿದ ನಾಡೋಜ ಡಾ. ಕಯ್ಯಾರ ಕಿಜ್ಞಣ್ಣರೈ ಅವರ ಜನ್ಮಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಕಾಸರಗೋಡು ಪ್ರದೇಶವು ಕರ್ನಾಟಕದೊಂದಿಗೆ ವಿಲೀನೀಕರಣಕ್ಕೆ ಇದು ಸಕಾಲವೆಂದು ಕಂಡು ಬರುತ್ತದೆ ಎಂದು ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.