ಕನ್ನಡ ಭಾಷೆಯ ಉಳಿವಿಗಾಗಿ ಇಂತಹ ಸಮ್ಮೇಳನ ಅತ್ಯವಶ್ಯಕ; ಪುತ್ತಿಗೆಶ್ರೀ
ಕಾಸರಗೋಡು: ಕನ್ನಡ ಭಾಷೆ ಸಂಪನ್ನ, ಸಮೃದ್ಧ, ಶ್ರೀಮಂತ ಪವಿತ್ರ ಭಾಷೆ. ಇದರ ಉಳಿವಿಗಾಗಿ ಇಂತಹ ಸಮ್ಮೇಳನ ಅತ್ಯವಶ್ಯಕವಾಗಿದೆ. ನಾನಾ ಭಾಷೆಗಳ ಸಂಗಮ ಭಾಷೆಯ ಸೌಂದರ್ಯವನ್ನು ವೃದ್ಧಿಸುತ್ತದೆ. ಆದರೆ ಮುಖ್ಯವಾಗಿ ಕನ್ನಡಭಾಷೆಯ ಮೇಲೆ ಅಭಿಮಾನ ಬೆಳೆಸಬೇಕು. ಭಾವನೆಗೆ ಸಂಬಂಧಪಟ್ಟಂತೆ ನಮ್ಮ ಮಾತೃ ಭಾಷೆ ಹೆಚ್ಚು ಉಪಕಾರಿ. ಅದರ ಉಳಿವಿಗೆ ಪ್ರಯತ್ನಿಸಬೇಕು. ಕನ್ನಡಿಗರು ಶಾಂತ ಸ್ವಭಾವದ ನಿಲುವು ಹೊಂದಿದವರಾಗಿದ್ದಾರೆ. ನಮ್ಮ ಅಭಿವೃದ್ಧಿಗೆ ಮಾತೃಭಾಷೆ ಉಳಿಸುವಿಕೆ ಅಗತ್ಯ ಎಂದು ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು 2012 ಡಿಸೆಂಬರ್ 29 ಮತ್ತು 30ರಂದು ಕಾಸರಗೋಡಿನ ಲಲಿತಕಲಾ ಸದನದಲ್ಲಿ ನಡೆದ ಎರಡು ದಿನಗಳ ಕೇರಳ ರಾಜ್ಯ ಐದನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ಸವದ ಸರ್ವಾಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ವ ಆಯುಕ್ತ ಡಾ. ಮನುಬಳಿಗಾರ್ ಮಾತನಾಡುತ್ತಾ ಭೌಗೋಳಿಕವಾಗಿ ಕಾಸರಗೋಡು ಕೇರಳಲ್ಲಿದೆ ಆದರೆ ಸಾಂಸ್ಕೃತಿಕವಾಗಿ ಈ ಪ್ರದೇಶ ಕರ್ನಾಟಕದಲ್ಲಿದೆ. ಇಲ್ಲಿಯ ಕನ್ನಡ ಮತ್ತು ಕನ್ನಡಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ವಿಶೇಷ ಕಾಳಜಿ ವಹಿಸುತ್ತದೆ ಎಂದರು.
ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ನಾಗಮ್ಮನವರ ಅವರು ಕೇರಳ ರಾಜ್ಯ 4ನೆಯ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರ ನುಡಿಗಳನ್ನಾಡಿದರು.
ಕಾಸರಗೋಡಿನ ನಿವೃತ್ತ ಮುಖ್ಯೋಪಾಧ್ಯಾಯ, ಕನ್ನಡ ಮುಖಂಡ ಎ. ನರಸಿಂಹ ಭಟ್ ಆಶಯ ಭಾಷಣ ಮಾಡಿದರು. ಬೆಂಗಳೂರಿನ ಕರ್ನಾಟಕ ಅಕಾಡೆಮಿ ಸದಸ್ಯ ಸಿ.ಎಂ. ತಿಮ್ಮಯ್ಯ ಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ವಲಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ವಿ. ಶೆಟ್ಟಿ ವಸ್ತುಪ್ರದರ್ಶನ ಉದ್ಘಾಟಿಸಿದರು. ಮಂಗಳೂರಿನ ಕೆ. ಕೃಷ್ಣಶೆಟ್ಟಿ (ಕುಡುಮಲ್ಲಿಗೆ) ಅವರ ಸಮಾಜಮುಖಿ ಅನುಬಂಧ ಕೃತಿಯನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ ಅವರು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ನಿರ್ಮಾಣವಾಗಲಿರುವ ಕನ್ನಡ ಭವನ ಸಮುಚ್ಚಯಕ್ಕೆ ಕರ್ನಾಟಕ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರ ಕೋಟಾದಡಿ ಅನುದಾನವನ್ನು ಬಿಡುಗಡೆ ಮಾಡಲು ಸಹಕರಿಸುವುದಾಗಿ ಹೇಳಿದರು.
ಕುಂಬ್ಳೆ ನರಸಿಂಹಪ್ರಭು, ಎನ್. ತಿಮ್ಮಪ್ಪ, ನಿವೃತ್ತ ಜಿಲ್ಲಾಧಿಕಾರಿ ಎನ್.ಕೆ. ನಾರಾಯಣ, ಗಲ್ಫ್ ರಾಷ್ಟ್ರದ ಶಾರ್ಜಾ ಕರ್ನಾಟಕ ಸಂಘದ ಕಾರ್ಯದರ್ಶಿ ಸುಗಂಧರಾಜ ಬೇಕಲ್, ದುಬಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಾಮಾಜಿ ಸುಧಾರಣೆಯ ಹರಿಕಾರರು-ವಿಷಯದಲ್ಲಿ ನಡೆದ ಅಧ್ಯಕ್ಷತೆಯನ್ನು ಪುತ್ತಿಗೆ ಮಠದ ವಿದ್ವಾನ್ ಬಿ. ಗೋಪಾಲಾಚಾರ್ಯ ವಹಿಸಿ ಮಾತನಾಡಿದರು. ಕಾಸರಗೋಡಿನ ಸಾಹಿತ್ಯ ಮತ್ತು ಕಲೆ ಅವಲೋಕನ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿ ಪ್ರಸಾರ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ವಹಿಸಿದ್ದರು. ಎರಡನೆ ದಿನ ನಡೆದ ಕೇರಳ ರಾಜ್ಯ ಚುಟುಕು ಕವಿ ಸಮ್ಮೇಳನವನ್ನು ಕವಿ ವೆಂಕಟ್ ಭಟ್ ಎಡನೀರು ಉದ್ಘಾಟಿಸಿದರು. ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಅಧ್ಯಕ್ಷತೆ ವಹಿಸಿದ್ದರು.
ಗಡಿನಾಡು-ಹೊರನಾಡು-ಅನಿವಾಸಿ ಭಾರತೀಯ ಕನ್ನಡಿಗರು, ಕನ್ನಡ ಸಂಘಟನೆಗಳು ಎಂಬ ರಾಷ್ಟ್ರೀಯವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮುಂಬಯಿ ಕರ್ನಾಟಕ ಸಂಘದ ಅಧ್ಯಕ್ಷ ಜಿ.ಡಿ. ಜೋಶಿ ವಹಿಸಿದ್ದರು. ಎಸ್. ಅಬೂಬಕ್ಕರ್ ಅರ್ಲಪದವು ಆಶಯ ಭಾಷಣ ಮಾಡಿದರು. ಗಡಿನಾಡು, ಹೊರನಾಡು ವಿದೇಶಗಳಲ್ಲಿರುವ ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆ. ಜಗದೀಶ ಕೂಡ್ಲು ಸ್ವಾಗತಿಸಿದರು. ಶ್ರೀನಿವಾಸ ಆಳ್ವ ನಿರೂಪಿಸಿದರು. ಎನ್. ಯೋಗೀಶ್ ಕೋಟೆಕಣಿ ವಂದಿಸಿದರು. ಸಮಾರಂಭದಲ್ಲಿ ನಾನಾ ಕಾರ್ಯಕ್ರಮಗಳು, ಗೋಷ್ಠಿಗಳು, ಗಾಯನವು ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

