ಹುಬ್ಬಳ್ಳಿ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಹುಬ್ಬಳ್ಳಿಯ ಯುವತಿಯೊಬ್ಬಳನ್ನು ಬುಧವಾರ ಕೊಲೆ ಮಾಡಲಾಗಿದೆ.
22 ವರ್ಷದ ದೀಪಾ ಬಜಂತ್ರಿ ಮೃತಪಟ್ಟ ಯುವತಿ. ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ದೀಪಾ ರಾಜಸ್ಥಾನಕ್ಕೆ ತೆರಳಿದ್ದಳು. ರಾಜಸ್ಥಾನದ ನಿವಾಸಿ ಗೌತಮ್ ಮತ್ತು ದೀಪಾ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಪೋಷಕರಿಗೆ ತಿಳಿಸಿ, ನಂತರ ಮನೆ ಬಿಟ್ಟು ಆತನೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದಳು.
ಗೌತಮ್ ನನ್ನು ಮದುವೆಯಾಗಲು ರಾಜಸ್ಥಾನಕ್ಕೆ ತೆರಳುತ್ತಿದ್ದು, ಒಂದು ತಿಂಗಳ ನಂತರ ವಾಪಸ್ಸಾಗುವೆನೆಂದು ಕಳೆದ ಎಂಟು ದಿನಗಳ ಹಿಂದೆ ಮನೆಯಿಂದ ತೆರಳಿದ್ದಳು.
ಬಾರ್ಮರ್ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ದೀಪಾ ಕೊಲೆಯಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾರ್ಮರ್ ಹೊರ ವಲಯದಲ್ಲಿ ದೀಪಾಳನ್ನು ಕೊಲೆ ಮಾಡಲಾಗಿತ್ತು. ಆಕೆಯ ಶವದ ಬಳಿ ಇದ್ದ ಹೋಟೆಲ್ ಬಿಲ್ ಮೂಲಕ ದೀಪಾ ಹುಬ್ಬಳ್ಳಿಯವಳೆಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬರದಂಸಾಲ್ ನಲ್ಲಿ ಪ್ಲಾಸ್ಟಿಕ್ ಅಂಗಡಿಯಲ್ಲಿ ಗೌತಮ್ ಕೆಲಸ ಮಾಡುತ್ತಿದ್ದನು. ಅಂಗಡಿ ಮಾಲಿಕನ ಬಳಿ ಗೌತಮ್ ಬಗ್ಗೆ ವಿಚಾರಿಸಿದಾಗ, ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಎಂದು ಬಾರ್ಮರ್ ಪೊಲೀಸರು ತಿಳಿಸಿದ್ದಾರೆ.