

ಬೆಂಗಳೂರು: ಬೇಸಿಗೆಯಿಂದಾಗಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯಿುಂದಾಗಿ ರಾಜ್ಯ ಸರ್ಕಾರ ಖಾಸಗಿ ಉತ್ಪಾದಕರಿಂದ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಿದೆ.
ವಿಧಾನಸೌಧದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸದ್ಯ 9,550 ಮೆಗಾವಾಟ್ ವಿದ್ಯುತ್‌ಗೆ ಬೇಡಿಕೆ ಇದ್ದೂ ಅಷ್ಟನ್ನೂ ಸರಬರಾಜು ಮಾಡುತ್ತಿದ್ದೇವೆ. ಬೆಂಗಳೂರು ನಗರ ಸೇರಿದಂತೆ ನಿರಂತರ ಜ್ಯೋತಿ ವ್ಯವಸ್ಥೆ ಇರುವ ತಾಲ್ಲೂಕುಗಳಲ್ಲಿ ಗರಿಷ್ಠ ಅವಧಿಯ ವಿದ್ಯುತ್ ನೀಡುತ್ತಿದ್ದು, ಅದನ್ನು ಮುಂದುವರಿಸಲಾಗುವುದು ಎಂದು ವಿವರಿಸಿದರು.
ಅಗತ್ಯವಾಗಿರುವ ವಿತ್ಯುತ್ ಅನ್ನು ಖಾಸಗಿ ಉತ್ಪಾದಕರಿಂದ ಖರೀದಿಸಿ ಪೂರೈಸಲಾಗುವುದು ಎಂದು ಹೇಳಿದ ಅವರು ತೀವ್ರ ಬರ ಇರುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೊಳವೆ ಬಾವಿಗಳು ಒಣಗುತ್ತಿರುವ ಕಾರಣ ಕೃಷಿಪಂಪ್ ಸೆಟ್‌ಗಳು ಸ್ಥಗಿತಗೊಂಡಿವೆ. ಈ ಕಾರಣದಿಂದಲೇ 300– 400 ಮೆಗಾವಾಟ್ ವಿದ್ಯುತ್ ಉಳಿತಾಯ ಆಗುತ್ತಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ 250 ಕಿಲೋವಾಟ್ ವರೆಗಿನ ವಿದ್ಯುತ್ ಉತ್ಪಾದನೆಗೆ ತೆರಿಗೆ ವಿನಾಯಿತಿ ಇದೆ ಎಂದು ತಿಳಿಸಿದರು.ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವುದು ಇದರ ಹಿಂದಿನ ಉದ್ದೇಶ ಎಂದು ಹೇಳಿದರು. ಒಂದು ಯೂನಿಟ್ ವಿದ್ಯುತ್‌ಗೆ ಈ ಹಿಂದೆ 5 ಪೈಸೆ ನೀಡುತ್ತಿದ್ದ ರಿಯಾಯಿತಿ ಇನ್ನು ಮುಂದೆ 10 ಪೈಸೆ ಆಗಲಿದೆ ಎಂದರು.