ಬೆಂಗಳೂರು: ರಾಜ್ಯದಲ್ಲಿ ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ರೂಪಾ ತಂಬದ ಅವರು ಮಂಗಳವಾರ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
ರೂಪಾ ಅವರು ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಠಾಣೆಯ ಇನ್ಸ್ ಪೆಕ್ಟರ್ ಕೂಡಲೇ ಅವರನ್ನು ರಾಜಾಜಿನಗರದ ಸುಗುಣಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೂಪಾ ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಸರಿಯಾಗಿ ಕೆಲಸ ಮಾಡಿಲ್ಲವೆಂದು ಠಾಣಾಧಿಕಾರಿ ಡೈರಿಯಲ್ಲಿ ಉಲ್ಲೇಖಿಸಿದ್ದಕ್ಕೆ ಆಕ್ರೋಶಗೊಂಡ ರೂಪಾ ಅವರು, ನಾನು ಡಿವೈಎಸ್ಪಿ ಗಣಪತಿ ರೀತಿ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಿಬ್ಬಂದಿಗೆ ಹೆದರಿಸಿದ್ದಾರೆ. ಇದಾದ ಬಳಿಕ ಮಧ್ಯಾಹ್ನ ರೂಪಾ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರು ಸುಗುಣ ಆಸ್ಪತ್ರೆ ಭೇಟಿ ನೀಡಿದ್ದು, ರೂಪಾ ಆತ್ಮಹತ್ಯೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.