

ಬೆಂಗಳೂರು: ಕುದುರೆ ವ್ಯಾಪಾರದಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ನಿಗದಿತ ಸಮಯದಲ್ಲೇ ಚುನಾವಣೆ ನಡೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಮತ ಬೇಟೆಗಾಗಿ ಶಾಸಕರಿಗೆ ಹಣದ ಆಮಿಷವೊಡ್ಡಿ ಕುದುರೆ ವ್ಯಾಪಾರ ನಡೆಸಲಾಗಿದ್ದು, ಇದರಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಜೆಡಿಎಸ್ ನ ಸ್ವತಂತ್ರ ಶಾಸಕರೊಬ್ಬರು ಕಾಂಗ್ರೆಸ್ ಮೇಲೆ ಆರೋಪವನ್ನು ಮಾಡಿದ್ದು, ಕಾಂಗ್ರೆಸ್ ಮತ ಹಾಕಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನು ನೀಡುತ್ತಾರೆಂದು ಹೇಳಿಕೊಂಡಿದ್ದಾರೆ.
ಈ ಆರೋಪದಲ್ಲಿ ಹುರುಳಿಲ್ಲ. ಕುದುರೆ ವ್ಯಾಪಾರದಲ್ಲಿ ಪಕ್ಷದ್ದಾಗಲಿ ಅಥವಾ ಪಕ್ಷದ ಶಾಸಕರದ್ದಾಗಲಿ ಯಾರದ್ದೇ ಪಾತ್ರವಿಲ್ಲ. ಹೀಗಾಗಿ ಚುನಾವಣೆ ನಿಗದಿತ ಸಮಯದಲ್ಲಿ ನಡೆಸುವಂತೆ ಆಗ್ರಹಿಸಿದ್ದಾರೆ.
ಕುದುರೆ ವ್ಯಾಪಾರದ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿದ ವರದಿಯನ್ನು ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ.
ಅಲ್ಲದೆ, ವರದಿಯಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಸುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರನ್ನು ಸೆಳೆಯಲು ಭಾರೀ ಮೊತ್ತ ನೀಡುವ ತೆರೆಮರೆಯ ಚಟುವಕೆಗಳು ಆರಂಭವಾಗಿದ್ದು, ಇದಕ್ಕೆ ನಾನಾ ಪಕ್ಷಗಳು ಹಾಗೂ ಪಕ್ಷೇತರ ಶಾಸಕರು ಸಹಾಯ ಮಾಡುತ್ತಿದ್ದಾರೆಂದು ಹೇಳಿಕೊಂಡಿದೆ.
ಇಂತಹ ಮಾತುಕತೆಯಲ್ಲಿ ಶಾಸಕರು ತೊಡಗಿರುವುದನ್ನು ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು ಕುಟುಕು ಕಾರ್ಯಾಚರಣೆ ನಡೆಸುವ ಮೂಲಕ ಸೆರೆ ಹಿಡಿದಿದ್ದು, ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ವರದಿಯನ್ನು ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.