

ಬೆಂಗಳೂರು: ಅರ್ಹರಲ್ಲದವರು ಹಾಗೂ ನಕಲಿ ಪಡಿತರ ಚೀಟಿಯನ್ನು ಹೊಂದಿರುವವರನ್ನು ಹುಡುಕಿಕೊಟ್ಟವರಿಗೆ ರು. 400 ಬಹುಮಾನ ನೀಡುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸೋಮವಾರ ಹೇಳಿದೆ.
ಈ ಕುರಿತಂತೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು, ಭ್ರಷ್ಟಾಚಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ನಡೆಸುವವರ ವಿರುದ್ಧದ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ರು. 400 ಬಹುಮಾನ ನೀಡವ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಪಿಡಿಎಸ್ ಗೆ ಮೀಸಲಿಟ್ಟ ಧಾನ್ಯವನ್ನು ಕಾಳಸಂತೆಯಲ್ಲಿ ಮಾರುವ ವರ್ತಕರ ಬಗ್ಗೆ ಮಾಹಿತಿ ನೀಡುವವರಿಗೂ ಬಹುಮಾನ ನೀಡಲಾಗುವುದು. ಕಾಳಸಂತೆಯಿಂದ ಧಾನ್ಯ ಮುಟ್ಟುಗೋಲು ಹಾಕಿಕೊಂಡು, ಅದರ ಒಟ್ಟು ಮೌಲ್ಯದ ಶೇಕಡ 5 ರಷ್ಟು ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು. ದೂರುಗಳನ್ನು ಇಲಾಖೆಯ ವೆಬ್ ಸೈಟ್ ಮೂಲಕವೇ ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
ಪಡಿತರಿಗೆ ಸಹಾಯಕವಾಗು ಸಲುವಾಗಿ ನ್ಯಾಯಬೆಲೆ ಅಂಗಡಿಗಳನ್ನು ನೋಡಿಕೊಳ್ಳಲು ಮೂರು ಸದಸ್ಯರ ಸಮತಿಯೊಂದನ್ನು ನೇಮಿಸಲಾಗಿದೆ. ಸಮಿತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ.
ಇದೇ ವೇಳೆ ತೊಗರಿ ಬೇಳೆ ಬೆಲೆಯನ್ನು ಕೆಜಿ. ರು.120 ದಾಟದಂತೆ ಪಡಿತರಿಗೆ ವಿತರಣೆ ಮಾಡಬೇಕೆಂಬ ಕೇಂದ್ರ ಸರ್ಕಾರ ಸೂಚನೆ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ಕೇಂದ್ರದಿಂದ ರಾಜ್ಯಕ್ಕೆ 1 ಸಾವಿರ ಟನ್ ರಷ್ಟು ತೊಗರಿ ಬೇಳೆ ರವಾನೆಯಾಗುತ್ತಿದೆ. ಬೆಲೆಯನ್ನು ಇಳಿಕೆ ಮಾಡುವ ಸಲುವಾಗಿ ಮತ್ತೆ 1 ಟನ್ ರಷ್ಟು ತೊಗರಿ ಬೇಳೆ ನೀಡುವಂತೆ ಕೇಂದ್ರ ಬಳಿ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಇನ್ನು ಪಡಿತರ ಚೀಟಿ ಹೊಂದಿರುವವರು ಆಧಾರ್ ಸಂಖ್ಯೆ ನೀಡಲು ಈ ತಿಂಗಳ 30 ರವರೆಗೆ ಸರ್ಕಾರ ಅವಕಾಶ ನೀಡಿದ್ದು. ಅಷ್ಟರೊಳಗಾಗಿ ಸಂಖ್ಯೆ ನೀಡದಿದ್ದರೆ, ಪಡಿತರ ಸೌಲಭ್ಯಗವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ ಎಂದಿದ್ದಾರೆ.