ಬೆಂಗಳೂರು: ಪಾನಮತ್ತನ ಬೈಕ್ ಅಪಘಾತ; ಯುವತಿ ಸಾವು

ಪಾರ್ಟಿ ಮುಗಿಸಿಕೊಂಡು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್ ವೊಂದು ರಸ್ತೆಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಯುವತಿಯೊಬ್ಬರು...
ಅಪಘಾತದಲ್ಲಿ ಸಾವನ್ನಪ್ಪಿದ್ದ ಶ್ವೇತಾ ಡಿಸೋಜಾ
ಅಪಘಾತದಲ್ಲಿ ಸಾವನ್ನಪ್ಪಿದ್ದ ಶ್ವೇತಾ ಡಿಸೋಜಾ
Updated on

ಬೆಂಗಳೂರು: ಪಾರ್ಟಿ ಮುಗಿಸಿಕೊಂಡು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್ ವೊಂದು ರಸ್ತೆಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾಗವಾರಪಾಳ್ಯದ ಶ್ವೇತಾ ಡಿಸೋಜಾ (22) ಸಾವನ್ನಪ್ಪಿದ ಯುವತಿ. ಬೈಕ್ ಓಡಿಸುತ್ತಿದ್ದ ಈಕೆಯ ಸ್ನೇಹಿತ ನಿತಿನ್ (22) ಘಟನೆ ವೇಳೆ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ಶ್ವೇತಾ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ಗೆಳೆಯ ನಿತಿನ್ ಜೊತೆ ಸ್ನೇಹಿತರ ಮನೆಯಲ್ಲಿ ಪಾರ್ಟಿ ಮಾಡಿಕೊಂಡು ತಡರಾತ್ರಿ ಬೈಕ್ ನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಮದ್ರಾಸ್ ಹಳೇ ರಸ್ತೆ ಕಡೆ ಬರುತ್ತಿದ್ದಂತೆ  ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದೆ.

ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಶ್ವೇತಾ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರವಾಗಿ ಪೆಟ್ಟಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರದೊಯ್ದಿದ್ದಾರೆ. ತೀವ್ರವಾಗಿ ರಕ್ತಸ್ರಾವವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಶ್ವೇತಾ ಮೃತಪಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಪ್ರಸ್ತುತ ನಿತಿನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಿತಿನ್ ನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದಿರಾನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ರಾತ್ರಿ 12.30 ರ ಸುಮಾರಿಗೆ ನಡೆದಿದೆ. ಶ್ವೇತಾ ಹೆಲ್ಮೆಟ್ ಧರಿಸಿಲ್ಲದ ಕಾರಣ ತಲೆಗೆ ತೀವ್ರವಾಗಿ ಪೆಟ್ಟಾಗಿ ಮೃತಪಟ್ಟಿದ್ದಾರೆ. ನಿತಿನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣ ಹಾನಿ ಯಾವುದೂ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಸ್ಥಳೀಯರು ಹೇಳುವ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಸರಿಯಾದ ಸಮಯಕ್ಕೆ ಬರಲಿಲ್ಲ. ಶ್ವೇತಾಳನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಪೊಲೀಸರು ಬಂದಿದ್ದರು ಎಂಬ ಆರೋಪಗಳು ಕೇಳಿಬಂದಿದೆ.

ಶ್ವೇತಾಳ ತಂದೆ ಫ್ಲಾಂಕ್ ಡಿಸೋಜಾ ಅವರು ದುಬೈ ನಲ್ಲಿದ್ದು, ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯಾದ ಪೋಷಕರು ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com