

ಮೈಸೂರು: ಮಾಜಿ ಸಚಿವೆ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸು ಮಂಗಳವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 70 ವರ್ಷದ ಚಂದ್ರಪ್ರಭಾ ಅರಸ್ ಅವರಿಗೆ ಪುತ್ರ, ಪುತ್ರಿ ಹಾಗೂ ಸೋದರಿ ಭಾರತಿ ಇದ್ದಾರೆ.
ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವಿ ಪಡೆದ ಅವರು, 1967ರಲ್ಲಿ ಮೋಹನಚೆಲುವೆ ಅರಸು ಅವರನ್ನು ಮದುವೆಯಾದ ಮೇಲೆ ಮೈಸೂರಿನಲ್ಲಿ ನೆಲೆಸಿದ್ದರು. ತಂದೆ ಕಟ್ಟಿದ್ದ ಕ್ರಾಂತಿರಂಗ ಪಕ್ಷದ ಮೂಲಕ ಹುಣಸೂರು ಕ್ಷೇತ್ರ ದಿಂದ 1983ರಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
1984ರಲ್ಲಿ ಕಾಂಗ್ರೆಸ್ ಸೇರಿದ ಅವರು 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರ ದಿಂದ ಪರಾಭವಗೊಂಡರು. ಮತ್ತೆ 1989ರಲ್ಲಿ ಶಾಸಕರಾಗಿ ಚುನಾಯಿತರಾದರು. ಸಮಾಜ ಕಲ್ಯಾಣ, ಅಬಕಾರಿ ಹಾಗೂ ರೇಷ್ಮೆ ಸಚಿವೆಯಾಗಿದ್ದರು.
1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. 2008ರಲ್ಲಿ ಹುಣಸೂರಿಗೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರ ಎರಡೂ ಕಾಲುಗಳಿಗೆ ತೀವ್ರ ಪೆಟ್ಟಾಗಿತ್ತು. ನಂತರ ಹೆಚ್ಚು ಓಡಾಡುತ್ತಿರಲಿಲ್ಲ.