

ಬೆಂಗಳೂರು: ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಡಿಜಿ, ಐಜಿಪಿ ಓಂಪ್ರಕಾಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಕಾರ್ಯಕರ್ತರ ಪ್ರತಿಭಟನೆಗೆ ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಾಥ್ ನೀಡಿರುವುದು ಪ್ರತಿಭಟನೆಯ ಕಾವು ಹೆಚ್ಚಾಗುವಂತೆ ಮಾಡಿದೆ.
29 ವರ್ಷದ ಸಾಧನಾ ಅಲಿಯಾಸ್ ರಾಜೇಶ್ವರಿ ಎಂಬ ಮಹಿಳೆ ಡಿಜಿ,ಐಜಿಪಿ ವಿರುದ್ಧ ಆರೋಪ ಮಾಡುತ್ತಿದ್ದು, ತಮ್ಮ ಮತ್ತು ಓಂ ಪ್ರಕಾಶ್ ಅವರ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದಂತೆ ಅವರ ಮಗ ಕಾರ್ತಿಕೇಶ್ ಮತ್ತು ಅವರ ಸ್ನೇಹಿತ ರವಿಶಂಕರ್ ಎಂಬುವವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಸಾಮಾಜಿಕ ಕಾರ್ಯಕರ್ತರ ಒಂದು ತಂಡ ಪ್ರತ್ಯೇಕ ತಂಡವನ್ನು ರಚನೆ ಮಾಡಿ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ಮಾಜಿ ಕಾನೂನು ಸಚಿವ ಮತ್ತು ಬಿಜೆಪಿ ಮುಖಂಡ ಎಸ್ ಸುರೇಶ್ ಕುಮಾರ್ ಅವರು, ರಾಜ್ಯದ ಯಾವುದೇ ಮಹಿಳೆ ರಕ್ಷಣೆ ಕೋರಿ ಬಂದರೆ ಆಕೆಗೆ ರಕ್ಷಣೆ ನೀಡಿವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿದ್ದು, ಗೃಹ ಸಚಿವರಾದ ಜಿ.ಪರಮೇಶ್ವರ ಅವರು ಕನಿಷ್ಠ ಪಕ್ಷ ಸಂಬಂಧಪಟ್ಟ ಅಧಿಕಾರಿಯಿಂದ ಈ ಬಗ್ಗೆ ವಿವರ ಕೇಳಬೇಕಿತ್ತು ಎಂದು ಹೇಳಿದರು.
ಇನ್ನು ಪ್ರತಿಭಟನೆ ಮುಂದಾಳತ್ವ ವಹಿಸಿಕೊಂಡಿರುವ ಜನವಾದಿ ಮಹಿಳಾ ಸಂಘಟನೆಯ ಮುಖ್ಯಸ್ಥೆ, ಕೆಎಸ್ ವಿಮಲಾ ಅವರು, ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆಯ ಅಗತ್ಯವಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಬಿ ಅವರು, ತಮ್ಮ ವಿರುದ್ಧ ಆರೋಪಕ್ಕೆ ಡಿಜಿ,ಐಜಿಪಿ ಅವರು ಯಾವ ಕ್ರಮ ಕೈಗೊಂಡಿದ್ದಾರೆ. ಅವರನ್ನೂ ಕೂಡಲೇ ಅಮಾನತು ಮಾಡಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಡಿಜಿ,ಐಜಿಪಿ ಓಂ ಪ್ರಕಾಶ್ ಅವರು ಕೂಡಲೇ ತಮ್ಮ ಸ್ಥಾನದಿಂದ ಕೆಳಗಿಳಿದು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಉತ್ತರಿಸಬೇಕು. ಅಂತೆಯೇ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಆಗ್ರಹಿಸಿದರು.
ಅಂತೆಯೇ ಬಿಜೆಪಿ ಮುಖಂಡೆ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತು ಮಾಧ್ಯಮ, ಪತ್ರಿಕೆಗಳಲ್ಲಿ ಈ ಪ್ರಕರಣದ ಬಗ್ಗೆ ಇಷ್ಟು ಚರ್ಚೆಯಾಗುತ್ತಿದ್ದರೂ, ಪ್ರಕರಣದ ಕುರಿತಂತೆ ರಾಜ್ಯ ಸರ್ಕಾರ ಮೌನ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಓಂಪ್ರಕಾಶ್ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಒಟ್ಟಾರೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ಮಹಿಳೆ ಮಾಡಿರುವ ಆರೋಪ ಮತ್ತು ಆ ಬಳಿಕದ ಬೆಳವಣಿಗೆಗೆ ದಿನಕಳೆದಂತೆ ಪ್ರತಿಭಟನೆ ಕಾವು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಂತಹ ತಿರುವು ಪಡೆಯಲಿದೆ ಕಾದು ನೋಡಬೇಕಿದೆ.