

ಬೆಂಗಳೂರು: ಎಲ್ಲೆಡೆ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ಮದುವೆಯದ್ದೇ ಮಾತು. ಬುಧವಾರ ರೆಡ್ಡಿ ಪುತ್ರಿ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಐನೂರು ಹಾಗೂ ಸಾವಿರ ರು. ನೋಟು ನಿಷೇಧದ ನಂತರ ದೇಶಾದ್ಯಂತ ಎಲ್ಲರೂ ಹಣ ವಿನಿಮಯಕ್ಕಾಗಿ ಬ್ಯಾಂಕ್ ಗಳ ಮುಂದೆ, ಎಟಿಎಂ ಗಳ ಮುಂದೆ ನಿಂತು ಪರದಾಡುತ್ತಿದ್ದಾರೆ. ಆದರೆ ನೋಟು ನಿಷೇಧದ ಬಿಸಿ ರೆಡ್ಡಿ ಪುತ್ರಿ ವಿವಾಹಕ್ಕೆ ತಟ್ಟಿದಂತೆ ಕಾಣುತ್ತಿಲ್ಲ.
ಆಡಂಭರದ ಮದುವೆ ಸೆಟ್ ಬ್ರೆಜಿಲ್ ನಿಂದ ಬಂದಿರುವ ಸಾಂಬಾ ಹಾಗೂ ಕಥಕ್ಕಳಿ ಡ್ಯಾನ್ಸರ್ಸ್,ರಾಜಕಾರಣಿಗಳು 25 ಲಕ್ಷ ರು. ವೆಚ್ಚದ ಪಾನ್ ಸೆಂಟರ್, ಸಿನಿಮಾ ನಟ ನಟಿಯರು, ಅದ್ಧೂರಿ ವಿವಾಹ ಸ್ವರ್ಗವನ್ನೇ ನಾಚಿಸುವಂತಿದೆ.
ಇದೆಲ್ಲದರ ನಡುವೆ ಮುಜುಗರದಿಂದಾಗಿ ಕೆಲ ಬಿಜೆಪಿ ನಾಯಕರು ಮದುವೆಯಿಂದ ದೂರ ಉಳಿದಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿವಾಹಕ್ಕೆ ಆಗಮಿಸಿ ವಧೂ-ವರರಿಗೆ ಆಶೀರ್ವದಿಸಿದರು.
ಬೆಂಗಳೂರಿನ ಅರಮನೆ ಮೈದಾನ ವಿಜಯನಗರ ಸಾಮ್ರಾಜ್ಯದ ಅರಸರ ವೈಭವೋಪೇತ ಆಡಳಿತವನ್ನು ನೆನಪಿಸುವಂತಿದೆ. ಹೈದರಾಬಾದ್ ನಲ್ಲಿ ವರನ ಮನೆಯಂತಹ ಒಂದು ಮನೆ ಹಾಗೂ ಬಳ್ಳಾರಿಯ ಗ್ರಾಮ ಹಾಗೂ ದೇವಾಲಯದಂತಹ ಬೃಹತ್ ಸೆಟ್ ಗಳನ್ನು ಹಾಕಿಸಲಾಗಿದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಮಗಳ ಮದುವೆಗೆ ಸುಮಾರು 150 ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ ಎಂಗು ಹೇಳಲಾಗಿದೆ, ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆ ರೆಡ್ಡಿ ಮದುವೆಗಾಗಿ 650 ಕೋಟಿ ರು ಖರ್ಚು ಮಾಡಿದ್ದಾರೆ ಎಂದು ತಿಳಿಸಿದೆ.
ರೆಡ್ಡಿ ಆತ್ಮೀಯ ಗೆಳೆಯ ಶ್ರೀರಾಮುಲು ಮದುವೆಯ ಎಲ್ಲಾ ಸಿದ್ಧತೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಮಾರು 180 ಬೌನ್ಸರ್ ಗಳು ಜನಾರ್ದನ ರೆಡ್ಡಿ ಪುತ್ರಿ ವಿವಾಹದಲ್ಲಿ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಾಹಕ್ಕೆ ಆಗಮಿಸುವವರಿಗಾಗಿ ಉತ್ತರ ಭಾರತ, ದಕ್ಷಿಣ ಭಾರತ ಹಾಗೂ ಚೈನೀಸ್ ಖಾದ್ಯಗಳಿವೆ. ರೆಡ್ಡಿಯ ಅಚ್ಚುಮೆಚ್ಚಿನ ಬಳ್ಳಾರಿಯ ಗುಲ್ಜಾರ್ ಪಾನ್ ಮತ್ತೊಂದು ವಿಶೇಷವಾಗಿದೆ.
ಡ್ಯಾನ್ಸರ್ ಮತ್ತು ವಿದೇಶಿ ರೂಪದರ್ಶಿಯರು ಸಾಂಪ್ರಾದಾಯಿಕವಾಗಿ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಇಂದು ಬೆಳಗ್ಗೆ ಬ್ರಹ್ಮಿಣಿ ಮತ್ತು ರಾಜೀವ್ ರೆಡ್ಡಿ ಸಂಪ್ರದಾಯಬದ್ಧವಾಗಿ ವಿವಾಹ ಬಂಧನಕ್ಕೊಳಗಾದರು.