

ಬೆಂಗಳೂರು: ಕಾವೇರಿ ನೀರು ಬಿಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಹಾಗೂ ರಾಜ್ಯದ ಜಲಾಶಯಗಳ ಸ್ಥಿತಿಗತಿ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಗುರುವಾರ ದೆಹಲಿಗೆ ತೆರಳಲಿದ್ದಾರೆ.
ಪ್ರತಿ ನಿತ್ಯ ತಮಿಳುನಾಡಿಗ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಪಾಲಿಸಿದರೆ ಕರ್ನಾಟಕದ ಕುಡಿಯುವ ನೀರಿಗೂ ತೊಂದರೆಯಾಗಲಿದೆ ಎಂಬ ಅಂಶವನ್ನು ಹಿರಿಯ ಮುಖಂಡರಿಗೆ ಹಾಗೂ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿಲಿದ್ದಾರೆ ಎಂದು ತಿಳಿದುಬಂದಿದೆ. ಪಕ್ಷದ ವರಿಷ್ಠರು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ ಉಂಟಾಗಿರುವ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ವಿವರಿಸಲಿದ್ದಾರೆ.
ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ವಿಶೇಷ ಅಧಿವೇಶನ ಕರೆದಿರುವ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಅದಾದ ಬಳಿಕ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಸರ್ಕಾರದ ಮುಂದಿರುವ ಸವಾಲುಗಳ ಬಗ್ಗೆ ಚರ್ಚಿಸಿ ಅವರಿಂದ ಸಲಹೆ ಪಡೆಯಲಿದ್ದಾರೆ. ಮಧ್ಯಾಹ್ನ 12ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿ, ಬಳಿಕ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನ ಕರೆಯುವ ಮೂಲಕ ಸಮಯ ಪಡೆದುಕೊಂಡ ಸರ್ಕಾರ
ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 27ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಕೃಷ್ಣರಾಜ ಸಾಗರದಿಂದ (ಕೆಆರ್‌ಎಸ್) ಬಿಡುಗಡೆ ಮಾಡಿದ ನೀರು ಕರ್ನಾಟಕ-ತಮಿಳುನಾಡು ಗಡಿಯ ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಮಾಪನದಲ್ಲಿ ದಾಖಲಾಗಲು ಕನಿಷ್ಠ 48 ಗಂಟೆ ಬೇಕು. ಅಂದರೆ 21ರಂದು ನೀರು ಬಿಟ್ಟರೆ ಅದು ಹೋಗಿ ತಲುಪಲು ಸೆಪ್ಟೆಂಬರ್ 23 ಆಗುತ್ತದೆ. ಅಂದೇ ವಿಶೇಷ ಅಧಿವೇಶನ ಇರುವುದರಿಂದ ಅಲ್ಲಿಯವರೆಗೂ ಸಮಯ ಸಿಗುತ್ತದೆ ಎಂಬುದು ನೀರು ಬಿಡುಗಡೆ ಮುಂದೂಡಿಕೆ ತೀರ್ಮಾನಕ್ಕೆ ಕಾರಣ ಎನ್ನಲಾಗಿದೆ.