ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ: ಬಿಜೆಪಿ ಆರೋಪಕ್ಕೆ ಸಿಎಂ ತಿರುಗೇಟು

ಭ್ರಷ್ಟಾಚಾರ ನಿಗ್ರಹ ದಳವನ್ನು ತಮ್ಮ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ತನಿಖಾ ಸಂದರ್ಭದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳ ಅನ್ವಯ ಎಸಿಬಿ ಅಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು ತಮ್ಮ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ತನಿಖಾ ಸಂದರ್ಭದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳ ಅನ್ವಯ ಎಸಿಬಿ ಅಧಿಕಾರಿಗಳು ಎಫ್ ಐಆರ್  ದಾಖಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರ 102ನೇ ಜನ್ಮ ಜಯಂತಿ ಅಂಗವಾಗಿ ಇಂದು ವಿಧಾನಸೌಧದ ಆವರಣದಲ್ಲಿರುವ ದೇವರಾಜು ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಪ್ಪು ಮಾಡಿರುವುದು ನಿಜ.  ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಹೀಗಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)  ಎಫ್‌ಐಆರ್ ದಾಖಲು ಮಾಡಿದೆ ಎಂದು ಹೇಳಿದರು.

ಇದೇ ವೇಳೆ ಎಸಿಬಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಬಿಜೆಪಿ ಮುಖಂಡರ ಆರೋಪವನ್ನು ನಿರಾಕರಿಸಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ಎಸಿಬಿಯನ್ನು ಎಂದೂ ದುರ್ಬಳಕೆ ಮಾಡಿಕೊಂಡಿಲ್ಲ.  ಬಿಜೆಪಿಯವರ ಈ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು. ಅಂತೆಯೇ ಆದಾಯ ತೆರಿಗೆ ಇಲಾಖೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿರುವುದು ಕೂಡ ಐಟಿ ಇಲಾಖೆಯನ್ನು ಕೇಂದ್ರ ಸರ್ಕಾರ  ದುರ್ಬಳಕೆ ಮಾಡಿಕೊಳ್ಳಿದಂತಾಗಲಿಲ್ಲವೆ ಎಂದು ಸಿದ್ದರಾಮ್ಯಯ ಪ್ರಶ್ನಿಸಿದರು.

ಯಡಿಯೂರಪ್ಪ ಅವರ ಮೇಲೆ ಎಸಿಬಿ ಎಫ್‌ಐಆರ್ ದಾಖಲು ಮಾಡಿರುವ ಕ್ರಮವನ್ನು ಪ್ರತಿಭಟಿಸಿ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿರುವವರಿಗೆ ಏನೂ ಹೇಳಲಾಗದು. ತಪ್ಪು ಮಾಡಿದ ಯಡಿಯೂರಪ್ಪ ಅವರ  ಪರವಾಗಿ ಹೋರಾಟ ನಡೆಸುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.ಇದೇ ವೇಳೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಪ್ರಕರಣಗಳನ್ನು ಹೊರತೆಗೆದು ಜೈಲಿಗೆ ಅಟ್ಟುವ ಬಿಎಸ್  ಯಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಮೊದಲು ಯಡಿಯೂರಪ್ಪ ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ. ಆ ಮೇಲೆ ನನ್ನನ್ನು ಜೈಲಿಗಟ್ಟಲಿ ಎಂದು ವ್ಯಂಗ್ಯವಾಡಿದರು.

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಲಿ ಎಂದು ಬಿಜೆಪಿ ಘೋಷಿಸಲಿ: ಸಿಎಂ ಸವಾಲು
ಇದೇ ವೇಳೆ ಬಿಜೆಪಿ ನಾಯಕರ ದಲಿತರ ನಿವಾಸದ ಭೇಟಿ ಕುರಿತು ವ್ಯಂಗ್ಯ ಸಿದ್ದರಾಮಯ್ಯ ಅವರು, "ದೇಶದಲ್ಲಿ ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು’ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಘೋಷಿಸಲಿ ಎಂದು ಸವಾಲು ಹಾಕಿದರು. ರಾಜ್ಯ ಶಾಶ್ವತ ಹಿಂದುಳಿದ ವರ್ಗದ ಆಯೋಗಕ್ಕೆ ಮೀಸಲಾತಿ ಪಟ್ಟಿಗೆ ಯಾವ ಜಾತಿ ಸೇರಿಸಬೇಕು, ಕೈಬಿಡಬೇಕೆಂಬ ಪರಮಾಧಿಕಾರ ಇತ್ತು. ಆದರೆ, ಸಂವಿಧಾನ ತಿದ್ದುಪಡಿ ಮೂಲಕ ಆ ಅಧಿಕಾರ ಮೊಟಕುಗೊಳಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಕೇಂದ್ರ ಸರಕಾರ ಹೊರಟಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರಾದ ಎಚ್. ಆಂಜನೇಯ, ಕೆ.ಜೆ. ಜಾರ್ಜ್, ಮಾಜಿ ಸಚಿವ ಪರಮೇಶ್ವರ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com