ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ, ರಕ್ಷಣೆ ನೀಡಲು ಏಕೆ ಸಾಧ್ಯವಿಲ್ಲ: ಕಲಾವಿದರ ಪ್ರಶ್ನೆ

ಕಳೆದ ಆಗಸ್ಟ್ ನಲ್ಲಿ ನಟಿ ಸನ್ನಿ ಲಿಯೋನ್ ಕೇರಳದ ಕೊಚ್ಚಿಗೆ ಮೊಬೈಲ್ ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ....
ಸನ್ನಿ ಲಿಯೋನ್
ಸನ್ನಿ ಲಿಯೋನ್
Updated on: 
ಬೆಂಗಳೂರು: ಕಳೆದ ಆಗಸ್ಟ್ ನಲ್ಲಿ ನಟಿ ಸನ್ನಿ ಲಿಯೋನ್ ಕೇರಳದ ಕೊಚ್ಚಿಗೆ ಮೊಬೈಲ್ ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ವೇಳೆ ರಸ್ತೆಯೆಲ್ಲಾ ಜನರಿಂದ ತುಂಬಿತುಳುಕಿತ್ತು. ಲಕ್ಷಾಂತರ ಮಂದಿ ಸನ್ನಿ ಲಿಯೋನ್ ಳನ್ನು ನೋಡಲು ಅಲ್ಲಿ ಜಮಾಯಿಸಿದ್ದರು. ಕಿಕ್ಕಿರಿದು ಸೇರಿದ್ದ ಜನತೆಯನ್ನು ನಿಯಂತ್ರಣದಲ್ಲಿಡಲು ಪೊಲೀಸರು ಹರಸಾಹಸಪಟ್ಟಿದ್ದರು. ತಮ್ಮ ಮನೆಯ ಬಾಲ್ಕನಿ, ಟೆರೇಸ್, ಮರದ ಕೊಂಬೆ, ಟ್ರಾನ್ಸ್ ಫಾರ್ಮರ್ ಗಳಿಗೆಲ್ಲಾ ಹತ್ತಿ ಜನ ಆಕೆಯನ್ನು ಕುತೂಹಲದಿಂದ ನೋಡುತ್ತಿದ್ದರು.
ಅಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಕಂಡು ಮೂಕವಿಸ್ಮಿತಳಾಗಿದ್ದ ಸನ್ನಿ ಲಿಯೋನ್ ನಂತರ ನನ್ನ ಕಾರು ಕೊಚ್ಚಿಯಲ್ಲಿ ಜನರ ಪ್ರೀತಿಯಿಂದ ಸಿಕ್ಕಿಹಾಕಿಕೊಂಡಿತ್ತು ಎಂದು ಟ್ವೀಟ್ ಮಾಡಿದ್ದರು.
ಬೆಂಗಳೂರಿನಲ್ಲಿ ಖಾಸಗಿ ಜಾಹಿರಾತು ಸಂಸ್ಥೆ ಹೊಸ ವರ್ಷದ ಅಂಗವಾಗಿ ಸನ್ನಿ ನೈಟ್ಸ್ ಕಾರ್ಯಕ್ರಮವವನ್ನು ಇದೇ 31ರಂದು ಸಭಾಂಗಣವೊಂದರಲ್ಲಿ ಆಯೋಜಿಸಿತ್ತು. ಅಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವವರಿದ್ದರಷ್ಟೆ. ಲಕ್ಷಾಂತರ ಜನರು ಭಾಗವಹಿಸುತ್ತಿರಲಿಲ್ಲ. ಆದರೂ ಕೂಡ ನಗರ ಪೊಲೀಸರಿಗೆ ಭದ್ರತೆ ನೀಡುವ ಬಗ್ಗೆ ಖಾತ್ರಿ ಇರಲಿಲ್ಲ. ಈ ಬಗ್ಗೆ ಕಾರ್ಯಕ್ರಮ ಆಯೋಜಿಸಲು ಹೊರಟಿದ್ದ ಟೈಮ್ ಕ್ರಿಯೇಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್, ಈ ಅನುಭವ ನನಗೆ ಪಾಠ ಕಲಿಸಿದೆ. ಮುಂದಿನ ಸಲ ನಾನು ಕಾರ್ಯಕ್ರಮ ಆಯೋಜಿಸಲು ಮುಕ್ತ ವೇದಿಕೆ ಕೇಳುತ್ತೇನೆ ಎನ್ನುತ್ತಾರೆ.
ಒಂದು ಕಾರ್ಯಕ್ರಮ ಆಯೋಜಿಸಲು ಪೊಲೀಸರಿಂದ ಏಳೆಂಟು ಬಾರಿ ಅನುಮತಿ ಕೇಳಬೇಕು. ಆದರೆ ಮುಂದಿನ ಸಲ ನಾನು ಕನ್ನಡ ರಕ್ಷಣಾ ವೇದಿಕೆಯಿಂದ ಅನುಮತಿ ಪಡೆದುಕೊಂಡ ಮೇಲಷ್ಟೇ ಕಾರ್ಯಕ್ರಮ ಆಯೋಜಿಸಲು ಪೊಲೀಸರ ಬಳಿಗೆ ಹೋಗುತ್ತೇನೆ ಎನ್ನುತ್ತಾರೆ ಹರೀಶ್.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಗರದ ಮತ್ತು ಹೊರಗಿನ ಕಲಾವಿದರು ಮಿಶ್ರ ಪ್ರತಿಕ್ರಿಯೆ ನೀಡುತ್ತಾರೆ. ಸನ್ನಿ ಲಿಯೋನ್ ರ ಸುರಕ್ಷತೆ ಇಲ್ಲಿ ಮುಖ್ಯವಾಗುತ್ತದೆ. ಪೊಲೀಸರು ಹೇಳುತ್ತಿರುವುದು ನಿಜವಾಗಿರಬಹುದು. ಆದರೆ ಇದು ಬೇರೆ ಕಲಾವಿದರ ಮೇಲೆ ಪರಿಣಾಮ ಬೀರಬಹುದು ಎಂದು ಸ್ಯಾಂಡಲ್ ವುಡ್ ಕಲಾವಿದರು ಹೇಳುತ್ತಾರೆ.
ಮಹಿಳೆಗೆ ಸುರಕ್ಷತೆ ಪ್ರಧಾನವಾಗುತ್ತದೆ. ನಾನು ಕೂಡ ಕಾರ್ಯಕ್ರಮ ನೀಡಲು ಹೋಗುವಾಗ, ರಕ್ಷಕರು ಇರುತ್ತಾರೆ. ಆದರೂ ಕೂಡ ನನ್ನ ಮೇಲೆ ಹಲ್ಲೆಯಾಗಿದೆ. ಕಾರ್ಯಕ್ರಮವನ್ನು ರದ್ದು ಮಾಡುವ ಮೂಲಕ ಸನ್ನಿ ಲಿಯೋನ್ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಸುರಕ್ಷಿತವಾಗಿರುವುದನ್ನು ನೋಡಿದರು ಎನ್ನುತ್ತಾರೆ ನಟಿ ಹರ್ಷಿಕಾ ಪೂಣಚ್ಚ.
ಹಿರಿಯ ನಟಿ ಸುಧಾರಾಣಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಸಾಮಾನ್ಯವಾಗಿ ಹೊಸ ವರ್ಷದ ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ, ಕಿರುಕುಳಗಳಾಗುವ ಉದಾಹರಣೆಯುಂಟು. ನಾನು ಸ್ವಲ್ಪ ಸಂಪ್ರದಾಯಬದ್ಧ ಮಹಿಳೆಯಾಗಿರುವುದರಿಂದ ಹೊಸ ವರ್ಷದ ಪಾರ್ಟಿಗಳಿಗೆ ಹೋಗುವುದಿಲ್ಲ ಎನ್ನುತ್ತಾರೆ ಸುಧಾರಾಣಿ.
ಕಲಾವಿದರಿಗೆ ಸುರಕ್ಷತೆ ನೀಡುವುದು ಸರ್ಕಾರದ ಜವಾಬ್ದಾರಿ. ಕಾರ್ಯಕ್ರಮವನ್ನು ರದ್ದು ಮಾಡುವುದು ನಾಚಿಕೆಗೇಡಿನ ವಿಷಯ. ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಯನ್ನು ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದು ಸರಿಯಲ್ಲ ಎನ್ನುತ್ತಾರೆ ಕಲಾವಿದ ಪ್ರಕಾಶ್ ಬೆಳವಾಡಿ.
ಸನ್ನಿ ಲಿಯೋನ್ ಈ ಹಿಂದೆ ಇಲ್ಲಿಗೆ ಬಂದು ಕನ್ನಡ ಚಿತ್ರದಲ್ಲಿ ನಟಿಸಿದ್ದರು ಕೂಡ. ಆಗ ಇರದ ಸಮಸ್ಯೆ, ಪ್ರತಿಭಟನೆ ಈಗೇಕೆ ಎಂದು ಕೇಳುತ್ತಾರೆ ಗಾಯಕಿ ಚೈತ್ರಾ ಹೆಚ್ ಜಿ. ಇಂತಹ ಕಾರ್ಯಕ್ರಮಗಳಿಗೆ ನಮಗೆ ಪ್ರಾಯೋಗಿಕವಾದ ಪ್ರತಿಕ್ರಿಯೆ ಸಿಗಬೇಕು. ತಮ್ಮ ವೃತ್ತಿಯನ್ನು ಹೊರತುಪಡಿಸಿ ಪ್ರತಿಯೊಬ್ಬರೂ ತಾವು ಮಾಡುವ ಕೆಲಸಕ್ಕೆ ಜವಾಬ್ದಾರರಾಗಿರುತ್ತಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿರುವ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗಬಹುದು. ಕಳೆದ ವರ್ಷ ಎಂ.ಜಿ.ರಸ್ತೆ ಬಳಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಆದ ಕೆಟ್ಟ ಘಟನೆಯಿಂದ ಪೊಲೀಸರು ಈ ಬಾರಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರಬಹುದು ಎನ್ನುತ್ತಾರೆ ಸಂಗೀತಗಾರ ಲಕ್ಕಿ ಅಲಿ.
ಪ್ರತಿಭಟನಾಕಾರರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಹಾಸ್ಯ ಕಲಾವಿದ ಡ್ಯಾನಿಷ್ ಸೇಠ್. ಸನ್ನಿ ಲಿಯೋನ್ ವೇದಿಕೆ ಮೇಲೆ ಲೈಂಗಿಕ ಕ್ರಿಯೆ ನಡೆಸಲು ಬರುವುದಲ್ಲ, ಅವರು ನೃತ್ಯ ಮಾಡುತ್ತಾರಷ್ಟೆ ಎನ್ನುತ್ತಾರೆ ಡ್ಯಾನಿಷ್. 
ಯಾರೂ ಕೂಡ ಬೇರೆಯವರ ವೃತ್ತಿಯಲ್ಲಿ ಮಧ್ಯಪ್ರವೇಶಿಸುವ ಹಕ್ಕು ಹೊಂದಿರುವುದಿಲ್ಲ. ಬೇರೆ ಕಲಾವಿದರು ಕೂಡ ಶೋನ ಭಾಗವಾಗಿರುತ್ತಾರೆ. ಇಡೀ ಪ್ರಕರಣಕ್ಕೆ ಅನವಶ್ಯಕ ಪ್ರಚಾರ ನೀಡಲಾಗುತ್ತಿದೆ ಎನ್ನುತ್ತಾರೆ ನಟ ವಿನಾಯಕ ಜೋಷಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com