ದಾವಣಗೆರೆ: ನವಜಾತ ಹೆಣ್ಣು ಶಿಶುವನ್ನು ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಗುರುವಾರ ರಾತ್ರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆಜಾದ್ ನಗರದ ನಿವಾಸಿಗಳಾದ ಶಭೀನಾ ಭಾನು, ಸಿಕಂದರ್ ಬಂಧಿತ ದಂಪತಿಗಳಾಗಿದ್ದಾರೆ. ರೂ.20, 000ಕ್ಕೆ 7 ದಿನಗಳ ನವಜಾತ ಹೆಣ್ಣು ಶಿಶುವನ್ನು ದಂಪತಿಗಳು ಮಾರಾಟ ಮಾಡಿದ್ದರು. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ದಂಪತಿಗಳು ಧಾರವಾಡದ ಹಫೀಜುಲ್ಲಾ ಹಾಗೂ ಮುಜಿಬ್ ಎಂಬ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದಾರೆ. ಮಗು ಮಾರಾಟ ಕುರಿತಂತೆ ಇಬ್ಬರ ನಡುವೆ 10 ದಿನಗಳ ಹಿಂದೆಯೇ ಒಪ್ಪಂದವಾಗಿದೆ. ದಂಪತಿಗಳು ಮಗು ಮಾರಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಇಲಾಖೆಯ ಡಿಡಿ ವಿಜಯಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಇದೇ ದಂಪತಿಗಳು 10 ವರ್ಷಗಳ ಹಿಂದೆ ಕೂಡ ರೂ.10,000 ಸಾವಿರಕ್ಕೆ ಗೋವಾ ಮೂಲದ ದಂಪತಿಗಳಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು. ಬಳಿಕ ಮಗುವನ್ನು ಹುಡುಕಿದ್ದ ಅಧಿಕಾರಿಗಳು ಇಲಾಖೆಯ ವಶಕ್ಕೆ ಪಡೆದುಕೊಂಡಿತ್ತು ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ.
ಪ್ರಸ್ತುತ ದಂಪತಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.