ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಯೋಧ: ಮೃತದೇಹ ಸ್ವೀಕರಿಸಲು ಕುಟುಂಬಸ್ಥರ ನಿರಾಕರಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಯೋಧನ ಮೃತದೇಹ ಪಡೆಯಲು ಕುಟುಂಬಸ್ಥರು ನಿರಾಕರಿಸಿದ್ದು, ಸಾವು ಕುರಿತಂತೆ ಸ್ಪಷ್ಟನೆ...
ಬೆಳಗಾವಿ ಮೂಲದ ಯೋಧ ವಿಶಾಲ್ ಪಾಂಡುರಂಗ ಲೋಹರ್
ಬೆಳಗಾವಿ ಮೂಲದ ಯೋಧ ವಿಶಾಲ್ ಪಾಂಡುರಂಗ ಲೋಹರ್
Updated on: 
ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಯೋಧನ ಮೃತದೇಹ ಪಡೆಯಲು ಕುಟುಂಬಸ್ಥರು ನಿರಾಕರಿಸಿದ್ದು, ಸಾವು ಕುರಿತಂತೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದೆ. 
54 ರಾಷ್ಟ್ರೀಯ ರೈಫಲ್ಸ್‌ನ ಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿ ಮೂಲದ ವಿಶಾಲ್ ಪಾಂಡುರಂಗ ಲೋಹರ್ ಎಂಬ ಯೋಧ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆ ಬಳಿಯ ಲಾಮ್‌ ವಲಯದಲ್ಲಿ ಕೆಲ ದಿನಗಳ ಹಿಂದಷ್ಟೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 
ಲೋಹರ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿಯೇ ಸಾವನ್ನಪ್ಪಿದ್ದಾರೆ. ಹುತಾತ್ಮರಾದ ಯೋಧರಂತೆ ಅವರ ಅಂತಿಮ ಸಂಸ್ಕಾರವನ್ನೂ ಸೇನಾ ಗೌರವಗಳೊಂದಿಗೆ ನೆರವೇರಿಸಬೇಕು. ಪೊಲೀಸರು ಲೋಹರ್ ಸಾವನ್ನು ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ. ಲೋಹರ್ ಸಾವನ್ನಪ್ಪಿದ ಬಳಿಕ ಸೇನೆ ಯಾವುದೇ ರೀತಿಯ ಕಾರಣಗಳನ್ನು ನೀಡಿಲ್ಲ. ಪ್ರಕರಣವನ್ನು ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. 
ಕುಟುಂಬಸ್ಥರು ಮೃತದೇಹ ಪಡೆದುಕೊಳ್ಳಲು ನಿರಾಕರಿಸುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಖಾನಪುರ್ ತಹಸೀಲ್ದಾರ್ ಶಿವಾನಂದ್ ಉಳಾಗಡ್ಡಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹವನ್ನು ಸ್ವೀಕರಿಸಿ ಅಂತಿಮ ಸಂಸ್ಕಾರ ನೆರವೇರಿಸುವಂತೆ ಗ್ರಾಮಸ್ಥರು ಹಾಗೂ ಲೋಹರ್ ಕುಟುಂಬಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು. 
ನಿನ್ನೆಯಷ್ಟೇ ಯೋಧನ ಪಾರ್ಥೀವ ಶರೀಕ್ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಮೈದಾನದಂಗಳಕ್ಕೆ ಬಂದಿತ್ತು. ಇದರಂತೆ ಅಧಿಕಾರಿಗಳ ಭರವಸೆಗಳಿಗೆ ಮಣಿದ ಕುಟುಂಬಸ್ಥರು ಪಾರ್ಥೀವ ಶರೀರವನ್ನು ಸ್ವೀಕರಿಸಿ ವಿಧಿ ವಿಧಾನಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಿದ್ದ ಗ್ರಾಮಸ್ಥರು ಯೋಧನ ಅಂತಿಮ ದರ್ಶನ ಪಡೆದುಕೊಂಡರು. 
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಗಡಿ ನಿಯಂತ್ರಣ ರೇಖೆ ಬಳಿ ಲೋಹರ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ನೌಶೆರಾ ಸೆಕ್ಟರ್ ಬಳಿ ಆಗಾಗ ಗುಂಡು ಹಾರಿಸುವ ಶಬ್ಧಗಳು ಕೇಳಿ ಬರುತ್ತಿರುತ್ತದೆ. ಮಧ್ಯಾಹ್ನದ ವಿರಾಮ ವೇಳೆ ಲೋಹರ್ ಅವರು ತಮ್ಮ ಟೆಂಟ್ ಗೆ ಹೋಗಿದ್ದಾರೆ. ಇದಾದ ಕೆಲ ನಿಮಿಷಗಳ ಬಳಿಕ ಇನ್ನಿತರೆ ಯೋಧರು ಟೆಂಟ್ ಬಳಿ ಹೋದಾಗ ಸ್ಥಳದಲ್ಲಿ ಲೋಹರ್ ಅವರು ರಕ್ತಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. 
ಯೋಧನ ಸಾವಿಗೆ ಈ ವರೆಗೂ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಲೋಹರ್ ಅವರೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆಯೇ ಅಥವಾ ಹೊರಗಡೆಯಿಂದ ಗುಂಡು ಹಾರಿ ಬಂದಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ. 
ಗಡಿ ನಿಯಂತ್ರಣ ರೇಖೆ ಬಳಿ ಆಗಾಗ ಗುಂಡಿನ ಮೊರೆತದ ಶಬ್ಧ ಕೇಳಿ ಬರುತ್ತಿರುತ್ತದೆ. ಇದು ಆ ಸ್ಥಳದಲ್ಲಿ ಸಾಮಾನ್ಯವಾಗಿರುತ್ತದೆ. ಹೀಗಾಗಿ ಲೋಹರ್ ಹೇಗೆ ಸಾವನ್ನಪ್ಪಿದರು ಎಂಬುದು ಯಾರಿಗೂ ತಿಳಿಯುತ್ತಿಲ್ಲ ಎದು ಲೋಹರ್ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com