ಗೌರಿ ಲಂಕೇಶ್ ಹಂತಕರ ಸುಳಿವು ಎಸ್ಐಟಿಗೆ ಸಿಕ್ಕಿದೆ: ಗೃಹ ಸಚಿವ

ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹಂತಕರ ಕುರಿತು ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ಕೆಲ ಸುಳಿವುಗಳು ದೊರಕಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ...
ಗೌರಿ ಲಂಕೇಶ್
ಗೌರಿ ಲಂಕೇಶ್
Updated on: 
ಬೆಂಗಳೂರು: ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹಂತಕರ ಕುರಿತು ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ಕೆಲ ಸುಳಿವುಗಳು ದೊರಕಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ. 
ವಿಕಾಸಸೌಧದಲ್ಲಿ ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಇಕಾರಿಗಳಿಗೆ ಮಹತ್ವದ ಸುಳಿವು ದೊರಕಿದೆ. ಆದರೆ, ಈ ಕುರಿತು ವಿವರಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಬಹಿರಂಗ ಪಡಿಸಿದರೆ ತನಿಖೆಯ ಹಾದಿ ತಪ್ಪುತ್ತದೆ ಎಂದು ಹೇಳಿದ್ದಾರೆ. 
ಗೌರಿ ಹತ್ಯೆ ತನಿಖೆಗಾಗಿ ಎಸ್ಐಟಿ ರಚಿಸಬೇಕೆಂಬ ತೀರ್ಮಾನ ಮಾಡಿದ್ದು ಮುಖ್ಯಮಂತ್ರಿಗಳು. ಆ ವೇಳೆ ನಾನೂ ಕೂಡ ಇದ್ದೆ. ತಂಡ ರಚನೆ ನಿರ್ಧಾರ ತೆಗೆದುಕೊಂಡು ತಂಡದಲ್ಲಿ ಯಾರು ಇರಬೇಕು ಎಂಬ ತೀರ್ಮಾನವನ್ನು ಡಿಜಿಪಿ ಆರ್.ಕೆ. ದತ್ತಾ ಅವರಿಗೆ ವಹಿಸಲಾಗಿತ್ತು. ಆ ಪ್ರಕಾರ ಅವರೇ ಅಧಿಕಾರಿಗಳ ನೇಮಕ ಮಾಡಿದ್ದಾರೆ. ಐಜಿಪಿ. ಬಿ.ಕೆ. ಸಿಂಗ್ ಉಸ್ತುವಾರಿಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್ ಅನುಚೇತ್ ಮುಖ್ಯ ತನಿಖಾಧಿಯಾಗಿರುವ ತಂಡದಲ್ಲಿ ಇಬ್ಬರು ಎಸ್ಪಿಗಳು ಸೇರಿದಂತೆ ಒಟ್ಟು 21 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 
ಹಂತರ ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಪ್ರಕಱಣ ಸಂಬಂಧ ತನಿಖೆ ನಡೆಸುತ್ತಿರುವ ಯಾವುದೇ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಇರುವ ಬಗೆಗೆ ಮಾಹಿತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಗೌರಿ ಲಂಕೇಶ್ ಕುಟುಂಬ
ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ ಸಂಬಂಧ ಟೀಕೆ, ವಿರೋಧ, ರಾಜಕೀಯ ಕೆಸರೆರಚಾಟ ಆರಂಭವಾಗಿರುವು ಮಧ್ಯೆಯೇ ಗೌರಿ ಲಂಕೇಶ್ ಅವರ ಕುಟುಂಬಸ್ಥರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 
ಹತ್ಯೆ ಪ್ರಕರಣದ ತನಿಖೆ ಸಂಬಂಧ ಗೌರಿಯವರ ಕುಟುಂಬ ಸದಸ್ಯರಿಂದಲೇ ಗೊಂದಲಕರ ಹೇಳಿಕೆಗಳು ಬರತೊಡಗಿವೆ. ಒಂದೆಡೆ ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಗೌರಿ ಸಹೋದರಿ ಕವಿತಾ ಲಂಕೇಶ್ ಅವರು ಎಸ್ಐಟಿ ತನಿಖೆಯ ಪರವಾಗಿದ್ದಾರೆ. ಪ್ರಸ್ತುತ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದ್ದು, ಎಸ್ಐಟಿಗೆ ಕಾಲಾವಕಾಶ ನೀಡಬೇಕೆಂದು ಕವಿತಾ ಅವರು ಹೇಳಿಕೊಂಡಿದ್ದಾರೆ. ಇನ್ನು ಗೌರಿಯವರ ತಾಯಿ ಇಂದಿರಾ ಅವರು ಎಸ್ಐಟಿಯಿಂದಲೇ ತನಿಖೆ ನಡೆಸಬೇಕು. ನಮಗೆ ಸಿಬಿಐ ತನಿಖೆ ಮೇಲೆ ನಂಬಿಕೆಯಿಲ್ಲ ಎಂದು ಹೇಳಿಕೊಂಡಿದ್ದಾರೆ. 
ಹತ್ಯೆ ಪ್ರಕರಣದ ಹಿಂದೆ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದು, ಪ್ರಕರಣ ತನಿಖೆಯನ್ನು ನಕ್ಸಲರು, ಬಲಪಂಧೀಯರು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಗೌರಿ ಲಂಕೇಶ್ ಅವರು ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com