

ಬೆಂಗಳೂರು: ಅತಿ ವೇಗದಲ್ಲಿದ್ದ ಇನ್ನೋವಾ ಕಾರು ಮುಂದೆ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಗುದ್ದಿದ ಪರಿಣಾಮ ನಾಲ್ವರು ಯುವಕರು ಮೃತಪಟ್ಟು, ಮತ್ತಿತರ 9 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು - ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯ ಕನ್ನಮಂಗಲ ಗೇಟ್ ನಲ್ಲಿ ನಡೆದಿದೆ.
ಮೃತರನ್ನು ಭುವನೇಶ್ವರಿ ನಗರದ ಸತೀಶ್ (22 ) ಚೊಳ್ಳನಾಯಕನಹಳ್ಳಿಯ ಸುಂದರ್ (23) ಮತ್ತಿಕೇರೆಯ ವಿಕಾಸ್ (23) ಮತ್ತು ದೇವನಹಳ್ಳಿ ವೆಂಕಟೇಶ್ (25 ) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಅಜಿತ್ , ಭರತ್, ಹೇಮಂತ್, ರವಿ ಮತ್ತಿತರ 9 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರು ಆಗಿದ್ದಾರೆ.
ಹೂವಿನ ಅಲಂಕಾರ ಮಾಡುತ್ತಿದ್ದ ಈ ಒಂಬತ್ತು ಮಂದಿ ಮೊನ್ನೆ ರಾತ್ರಿ ಕನ್ನಮಂಗಲ ಗೇಟ್ ಬಳಿ ಅತಿ ವೇಗದಲ್ಲಿದ್ದ ಇನ್ನೋವಾ ಕಾರು ಓಮ್ನಿ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಅಜಿತ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರೆಲ್ಲರೂ ನಂದಿ ಬೆಟ್ಟಕ್ಕೆ ಹೋಗಿರುವ ಅನುಮಾನವಿದೆ. ಪ್ರತ್ಯೇಕ್ಷದರ್ಶಿಗಳ ಪ್ರಕಾರ ಇನ್ನೋವಾ ಕಾರು ಗಂಟೆಗೆ 140-150 ಕಿ. ಮೀ. ವೇಗದಲ್ಲಿ ಚಲಾಯಿಸಲಾಗುತ್ತಿತ್ತು ಎನ್ನಲಾಗುತ್ತಿದೆ. ಇನ್ನೋವಾ ಕಾರು ವೇಗ ನಿಯಂತ್ರಿಸಲಾಗದೆ ಅದರ ಚಾಲಕ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.