

ಬೆಂಗಳೂರು: ವಾಷಿಂಗ್ಟನ್ ನಲ್ಲಿ ನಡೆಯಲಿರುವ 66ನೇ ವಾರ್ಷಿಕ ರಾಷ್ಟ್ರೀಯ ಪ್ರಾರ್ಥನಾ ಉಪಹಾರಕೂಟದಲ್ಲಿ ಇದೇ 8ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಹಾರದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿದೆ ಎಂದು ಕ್ರೈಸ್ ಗ್ರೂಪ್ ಆಪ್ ಕಂಪನೀಸ್ ಮುಖ್ಯಸ್ಥ ಡಾ. ರಾಬರ್ಟ್ ಕ್ರಿಸ್ಟೊಫರ್ ತಿಳಿಸಿದ್ದಾರೆ.
ಅಮೆರಿಕಾ ಅಧ್ಯಕ್ಷರ ಜೊತೆ ಉಪಪಾರ ಕೂಟದಲ್ಲಿ ಭಾಗವಹಿಸುವಂತೆ ಅಮೆರಿಕಾ ಕಾಂಗ್ರೆಸ್ ಆತಿಥ್ಯ ಸಮಿತಿಯಿಂದ ಆಹ್ವಾನ ಬಂದಿರುವುದು ವಿಶೇಷ. ''ಇದೊಂದು ವಿಶೇಷ ಆಹ್ವಾನ, ಭಾರತದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ, ರಾಜ್ಯದ ಸಂಸದ ಶ್ರೀರಾಮುಲು ಮತ್ತು ನನಗೆ ಮಾತ್ರ ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ ಎಂದು ಕ್ರಿಸ್ಟೊಫರ್ ತಿಳಿಸಿದರು.
ಅಮೆರಿಕಾದ ಶ್ವೇತಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ವಿಶ್ವ ಶಾಂತಿ ಬಗ್ಗೆ ಅಲ್ಲಿ ಮಾತುಕತೆ ನಡೆಯಲಿದೆ. ಅಮೆರಿಕಾ ಅಧ್ಯಕ್ಷರು ನಡೆಸಿಕೊಂಡು ಬಂದಿರುವ ಸಂಪ್ರದಾಯವಿದು ಎನ್ನುತ್ತಾರೆ ಕ್ರಿಸ್ಟೊಫರ್.
ಅಮೆರಿಕಾದ ರಾಷ್ಟ್ರೀಯ ಪ್ರಾರ್ಥನಾ ಉಪಹಾರದ ಸಹಾಧ್ಯಕ್ಷರಾದ ಚಾರ್ಲಿ ಕ್ರಿಸ್ಟ್ ಮತ್ತು ರ್ಯಾಂಡಿ ಹುಲ್ಟ್ ಗ್ರೆನ್ ಅವರು ಆಹ್ವಾನ ಕುರಿತು ಪತ್ರ ಬರೆದಿದ್ದಾರೆ. ಇದೊಂದು ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ವೈಯಕ್ತಿಕ ಸಂಬಂಧವನ್ನು ಬೆಳೆಸಲು ಮತ್ತು ಅಂತಾರಾಷ್ಟ್ರೀಯ ಬಾಂಧವ್ಯವನ್ನು ಇನ್ನಷ್ಟು ಆಳದವರೆಗೆ ವಿಸ್ತರಿಸಲು ಸಹಾಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 5ರಂದು ಅಮೆರಿಕಾಗೆ ತೆರಳುತ್ತಿರುವುದಾಗಿ ಕ್ರಿಸ್ಟೊಫರ್ ತಿಳಿಸಿದರು.