ಬೆಂಗಳೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಲಕೊಂಡಯ್ಯ (29) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 54ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
2017ರ ಆಗಸ್ಟ್ 13ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ, ‘ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಮೃಗೀಯ ವರ್ತನೆ ತೋರಿರುವ ಅಪರಾಧಿಗೆ ನಾಗರಿಕ ಸಮಾಜದಲ್ಲಿ ಬದುಕುವ ಹಕ್ಕಿಲ್ಲ’ ಎಂದು ಅಭಿಪ್ರಾಯಪಟ್ಟು ಈ ಆದೇಶ ಹೊರಡಿಸಿದ್ದಾರೆ.
ಹಲಸೂರು ಠಾಣೆ ವ್ಯಾಪ್ತಿಯ ಸೇನಾ ಸಮುಚ್ಚಯದಲ್ಲಿ ವಾಸವಿದ್ದ ಅಪರಾಧಿ, ಅಲ್ಲಿಯೇ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅದೇ ಸಮುಚ್ಚಯದಲ್ಲೇ 9 ವರ್ಷದ ಬಾಲಕಿಯು ಪೋಷಕರೊಂದಿಗೆ ವಾಸವಿದ್ದಳು ಎಂದು ಚಿನ್ನ ವೆಂಕಟರಮಣಪ್ಪ ತಿಳಿಸಿದರು.
ಕೃತ್ಯದ ಬಗ್ಗೆ ಬಾಲಕಿಯು ಪೋಷಕರಿಗೆ ತಿಳಿಸಿದ್ದಳು. ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು, ಅಪರಾಧಿಯ ಮನೆಗೆ ಹೋಗಿ ಆತನನ್ನು ಹಿಡಿದು
ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು ಎಂದು ಚಿನ್ನವೆಂಕಟರಮಣಪ್ಪ ಹೇಳಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಸುಬ್ರಹ್ಮಣ್ಯ, 54 ದಿನಗಳಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತ್ವರಿತವಾಗಿ ವಿಚಾರಣೆ ನಡೆದು ಅಪರಾಧಿಗೆ ಶಿಕ್ಷೆಯಾದ ರಾಜ್ಯದ ಮೊದಲ ಪೋಕ್ಸೊ ಪ್ರಕರಣ ಇದಾಗಿದೆ.