ಬೆಂಗಳೂರು; ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ.
ರಾಜ್ಯದ ಮಳೆ, ಬೆಳೆ, ಕುಡಿಯುವ ನೀರಿನ ಪರಿಸ್ಥಿತಿ, ಮಳೆಯಿಂದ ಆಗಿರುವ ಬೆಳೆ ಹಾನಿಗಳ ಕುರಿತು ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಕುಮಾರಸ್ವಾಮಿಯವರು ಮಾತನಾಡಿದ್ದಾರೆ.
ವಿಪತ್ತು ನಿರ್ವಹಣಾ ನಿಧಿಯಲ್ಲಿ ರೂ.186 ಕೋಟಿ ಇದ್ದು, ಅಗತ್ಯ ಬಿದ್ದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಅನುದಾನವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬಳ್ಳಾರಿ, ಬೆಳಗಾವಿ, ಹಾಸನ, ದಾವಣಗೆರೆ, ಮಂಡ್ಯ, ವಿಜಯಪುರ, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಲ್ಲಿ ಈಗಾಗಲೇ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಈ ಜಿಲ್ಲೆಗಳಿಗೆ ರೂ.20 ಕೋಟಿ ಹೆಚ್ಚುವರಿಯಾಗಿ ಅನುದಾನವನ್ನು ನೀಡಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೂ.38 ಕೋಟಿಯಷ್ಟು ನಷ್ಟ ಎದುರಾಗಿದೆ. ಪರಿಹಾರ ಕಾರ್ಯಗಳಿಗೆ ಯಾವುದೇ ರೀತಿಯ ತೊಡಕುಗಳುಂಟಾಗುವುದಿಲ್ಲ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚುವರಿಯಾಗಿದೆ ಎಂದು ತಿಳಿಸಿದ್ದಾರೆ.
ಆರ್'ಟಿಇ ಅಡಿಯಲ್ಲಿ ದಾಖಲಾಗುವ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಲು ಪ್ರತಿ ವತರ್ಷ ಖಾಸಗಿ ಶಾಲೆಗಳಿಗೆ 700-800 ಕೋಟಿ ನೀಡುತ್ತಿದೆ. ಆದರೂ ಖಾಸಗಿ ಶಾಲೆಗಳು ಹಣ ವಸೂಲಿ ಮಾಡುವುದನ್ನು ಬಿಟ್ಟಿಲ್ಲ. ಇದಕ್ಕೆ ಕಡಿವಾಣ ಹಾಕಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಇದೇ ವೇಳೆ ಕುಮಾರಸ್ವಾಮಿಯವರು ಸೂಚಿಸಿದ್ದಾರೆ.