

ಬೆಂಗಳೂರು: ತೆರಿಗೆ ಇಲಾಖೆ ಅಧಿಕಾರಿಗಳು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಹಾಗಾದರೆ ಬೇರೆಯವರ ಮನೆಯಲ್ಲಿ ಡೈರಿ, ಲೆಕ್ಕ ಇಟ್ಟಿಲ್ಲವೇ, ಅದು ಐಟಿ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲವೆ, ಅಂತವರ ಮನೆ ಮೇಲೆ ಏಕೆ ದಾಳಿ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಅಘೋಷಿತ ಹಣ ಮತ್ತು ಸುಳ್ಳು ದಾಖಲೆ ಹೊಂದಿರುವ ಆಧಾರದ ಮೇಲೆ ಆರ್ಥಿಕ ಅಪರಾಧ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಚಿವ ಡಿಕೆಶಿಯವರಿಗೆ ಸಮನ್ಸ್ ಜಾರಿ ಮಾಡಿತ್ತು.
ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕಳೆದೊಂದು ವರ್ಷದಿಂದ ನನಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ನನ್ನ ಏಳಿಗೆಯನ್ನು ಸಹಿಸಲಾಗದೆ ನನಗೆ, ನನ್ನ ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ತನಿಖೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
ವಿಚಾರಣೆಗೆ ಹಾಜರಾಗಿ ಎಂದು ನೊಟೀಸ್ ಬಂದಿದೆ. ಸಮನ್ಸ್ ಬಂದಿಲ್ಲ. ಯಾರ್ಯಾರಿಗೆ ಏನೇನು ಅನಿಸುತ್ತದೆಯೋ ಅದನ್ನು ಮಾಡಲಿ, ಕೊನೆಗೆ ಈ ದೇಶದ ಕಾನೂನು ಮೂಲಕ ಹೋರಾಡುತ್ತೇನೆ, ಕಾನೂನಿನಲ್ಲಿ ನಂಬಿಕೆಯಿದೆ ಎಂದು ಹೇಳಿದರು.